ವಿಜಯಪುರ: ಬಸವ ನಾಡಿನ(Basava Nadu) ಆರಕ್ಷಕರೊಬ್ಬರ(Police) ಸಮಯ ಪ್ರಜ್ಞೆ(Time Sense) ಮೆರೆದಿದ್ದು ಕಾಲುವೆಯಲ್ಲಿ(Canal) ಮುಳುಗಿ ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ಸಹೋದರರಿಬ್ಬರ ಸಹಾಯದೊಂದಿಗೆ ಸೇರಿ ರಕ್ಷಣೆ(Secure) ಮಾಡಿದ್ದಾರೆ.
ಬಸವ ನಾಡು ವಿಜಯಪುರ ಜಿಲ್ಲೆಯ ನಿಡಗುಂದಿ ಠಾಣೆಯ ಆರಕ್ಷಕ ಎಸ್. ಎಸ್. ಅಂಗಡಗೇರಿ ಮತ್ತು ನಿಡಗುಂದಿ ಪಟ್ಟಣದ ಸಹೋದರರಾದ ಸಿದ್ರಾಮೇಶ ಯಮನಪ್ಪ ಗುಂಡಿನಮನಿ ಮತ್ತು ಸಂತೋಷ ಯಮನಪ್ಪ ಗುಂಡಿನಮನಿ ಜೊತೆ ಸೇರಿ ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಿಡಗುಂದಿ ಪೊಲೀಸ್ ಠಾಣೆಯ ಪೇದೆ ಎಸ್. ಎಸ್. ಅಂಗಡಗೇರಿ ತಮ್ಮ ಠಾಣೆಯಿಂದ ಪೆಟ್ರೋಲ್ ಬಂಕಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ನಿಡಗುಂದಿ ತಾಂಡಾ ಬಳಿ ಕಾಲುವೆಯ ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬ ಕೂಗಾಟ ನಡೆಸಿದ್ದ. ಇದನ್ನು ಕಂಡ ಎಸ್. ಎಸ್. ಅಂಗಡಗೇರಿ ಕೂಡಲೇ ಕಾರ್ಯ ಪ್ರವೃತ್ತರಾಗಿ ರಕ್ಷಣೆಗೆ ದೌಡಾಯಿಸಿದ್ದಾರೆ. ಈ ಸಂದರ್ಭದಲ್ಲಿ ಕಾಲುವೆಯ ಪಕ್ಕದಲ್ಲಿದ್ದ ಸೀರೆಯೊಂದನ್ನು ಕಾಲವೆಗೆ ಹಾಕಿ ಅದನ್ನು ಹಿಡಿದುಕೊಳ್ಳುವವಂತೆ ಆ ವ್ಯಕ್ತಿಯನ್ನು ಕೇಳಿದಾಗ ನೀರಿನ ರಭಸಕ್ಕೆ ಸಾಧ್ಯವಾಗಿಲ್ಲ. ಅಷ್ಟರಲ್ಲಿ ಪೊಲೀಸ್ ಪೇದೆಯ ನೆರವಿಗೆ ಧಾವಿಸಿದ ನಿಡಗುಂದಿ ಪಟ್ಟಣದ ಸಿದ್ರಾಮೇಶ ಯಮನಪ್ಪ ಗುಂಡಿನಮನಿ ಮತ್ತು ಸಂತೋಷ ಯಮನಪ್ಪ ಗುಂಡಿನಮನಿ ಸಹೋದರರು ಕಾಲುವೆಗೆ ಹಾರಿದ್ದಾರೆ. ನಂತರ ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ಪೊಲೀಸ್ ಪೇದೆಯ ಸಹಕಾರದಿಂದ ಮೇಲೆತ್ತಿ ರಕ್ಷಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿ ಹೊಟ್ಟೆಯಲ್ಲಿದ್ದ ನೀರನ್ನು ಹೊರ ತೆಗೆದು ಅಟೋವೊಂದರಲ್ಲಿ ಆತನನ್ನು ಕರೆದುಕೊಂಡು ಹೋಗಿ ನಿಡಗುಂದಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಯ ಹಿನ್ನಲೆ
ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ಬಸವರಾಜ ಧನಶೆಟ್ಟಿ(46) ಎಂದು ಗುರುತಿಸಲಾಗಿದೆ. ಈತ ಮದ್ಯ ಸೇವಿಸಿದ್ದು ಕಾಲುವೆಯಲ್ಲಿ ಜಿಗಿದಿದ್ದಾನೆ. ಈ ಸಂದರ್ಭದಲ್ಲಿ ಈತನ ಜೊತೆಯಲ್ಲಿದ್ದ ಈತನ ಸ್ನೇಹಿತ ಕೂಡ ಮಧ್ಯ ಸೇವಿಸಿದ್ದು, ಬಸವರಾಜ ಧನಶೆಟ್ಟಿ ಅವರ ಮೊಬೈಲ್ ಆತನ ಬಳಿಯೇ ಇಟ್ಟುಕೊಂಡಿದ್ದ. ಕುಡುಕನ ಸ್ನೇಹಿತ ತನ್ನ ಗೆಳೆಯ ನೀರಿನಲ್ಲಿ ಮುಳುಗುತ್ತಿದ್ದಾನೆ ಎಂದು ಕಾಲುವೆ ಪಕ್ಕದಲ್ಲಿ ನಿಂತು ಕೂಡಾಗುತ್ತಿದ್ದಾಗ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದ ಪೇದೆ ಎಸ್. ಎಸ್. ಅಂಗಡಗೇರಿ ಕೂಡಲೇ ಸ್ಪಂದಿಸಿದ್ದಾರೆ. ಕಾಲುವೆಗೆ ಬಿದ್ದಿದ್ದ ಬಸವರಾಜ ಧನಶೆಟ್ಟಿ ಈಜು ಬರುತ್ತಿದ್ದರೂ ಮದ್ಯದ ಅಮಲಿನಲ್ಲಿ ಈಜಾಡಲು ಸಾಧ್ಯವಾಗಿಲ್ಲ. ಸುಮಾರು ಅರ್ಧ ಕಿ. ಮೀ. ಗೂ ಹೆಚ್ಚು ದೂರ ಕಾಲುವೆಯಲ್ಲಿಯೇ ಹರಿದುಕೊಂಡು ಹೋಗಿದ್ದಾರೆ.
ಈ ಸಂದರ್ಭದಲ್ಲಿ ಸಮಯ ಪ್ರಜ್ಞೆ ಮೆರೆದ ನಿಡಗುಂದಿ ಪೊಲೀಸ್ ಪೇದೆ ಎಸ್. ಎಸ್. ಅಂಗಡಗೇರಿ ಮತ್ತು ಸಿದ್ರಾಮೇಶ ಯಮನಪ್ಪ ಗುಂಡಿನಮನಿ ಮತ್ತು ಸಂತೋಷ ಯಮನಪ್ಪ ಗುಂಡಿನಮನಿ ಸಹೋದರರು ಕಾಲುವೆ ಪಾಲಾಗಿದ್ದ ವ್ಯಕ್ತಿಯನ್ನು ಸುರಕ್ಷಿತವಾಗಿ ಹೊರಗೆ ಕರೆತಂದು ರಕ್ಷಿಸುವ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ.
ಈ ಘಟನೆಯ ಬಳಿಕ ಬಸವರಾಜ ಧನಶೆಟ್ಟಿಯ ಸ್ನೇಹಿತ ಪೊಲೀಸರಿಗೆ ಹೆದರಿ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ.
ಪೊಲೀಸ್ ಪೇದೆ ಎಸ್. ಎಸ್. ಅಂಗಡಗೇರಿ ಮತ್ತು ಗುಂಡಿನಮನಿ ಸಹೋದರರ ಸಮಯ ಪ್ರಜ್ಞೆಯನ್ನು ಸಾರ್ವಜನಿಕರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.