ವಿಜಯಪುರ: ಬೇರೆ ಯಾವುದೇ ಪಕ್ಷ(New Party) ಸೇರುವ(Joining) ಅವಶ್ಯಕತೆ(Necessity) ನನಗಿಲ್ಲ. ಈ ಮುಂಚೆ ವಿಧಾನ ಪರಿಷತ ಪ್ರತಿಪಕ್ಷದ ನಾಯಕನಾಗಿದ್ದಾಗ ಸದನದಲ್ಲಿ ನುಡಿದಂತೆ ಈಗ ಟ್ರ್ಯಾಕ್ಟರ್ ಜಾಥಾ ಮಾಡುವ ಮೂಲಕ ನೀರಾವರಿ ಯೋಜನೆಗಳ ಜಾರಿಗೆ ಹೋರಾಟ ಮಾಡುತ್ತಿದ್ದೇನೆ ಎಂದು ವಿಧಾನ ಪರಿಷತ ಪ್ರತಿಪಕ್ಷದ ಮಾಜಿ ನಾಯಕ(Legislative council Former Leader) ಎಸ್. ಆರ್. ಪಾಟೀಲ(S R Patil) ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ನಿರ್ಣಯವನ್ನು ಸ್ವೀಕಾರ ಮಾಡಿದ್ದೇನೆ ಎಂದು ಹೇಳಿದರು.
ವಿಧಾನ ಪರಿಷತ ಟಿಕೆಟ್ ತಪ್ಪಿದಾಗ ಬೇರೆ ಹುದ್ದೆ ನೀಡುವುದಾಗಿ ರಾಜ್ಯ ಕಾಂಗ್ರೆಸ್ ಮುಖಂಡರು ಹೇಳಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಕುರಿತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಅವರು ಸ್ವತಃ ನನ್ನನ್ನು ಕರೆಯಿಸಿ ಒಂದೂವರೆ ಗಂಟೆ ಕರೆಯಿಸಿ ಮಾತನಾಡಿದ್ದಾರೆ. ನಾನು ಇಲ್ಲಿಯ ನಾಯಕರನ್ನು ಭೇಟಿ ಮಾಡಿಲ್ಲ. ಆ ಅವಶ್ಯಕತೆಯೂ ನನಗಿಲ್ಲ. ಒಬ್ಬರಲ್ಲ, ಇಲ್ಲರಲ್ಲ, ಮೂರು ಜನರ ಮೂಲಕ ಹೇಳಿಸಿ ದೆಹಲಿಗೆ ಕರೆಯಿಸಿದ್ದರು. ಆ ಚರ್ಚೆಯ ವಿಚಾರಗಳನ್ನು ಈಗ ಹೇಳಲು ಆಗುವುದಿಲ್ಲ. ಅವರು ನನಗೆ ಗೌರವ ನೀಡಿದ್ದಾರೆ ಎಂದು ಹೇಳಿದರು.
ಈಗ ನಡೆಸುತ್ತಿರುವ ಟ್ರ್ಯಾಕ್ಟರ್ ಜಾಥಾವನ್ನು ಪಕ್ಷದ ಪರವಾಗಿ ಹೋರಾಟ ಮಾಡಬಹುದಿತ್ತಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಎಸ್. ಆರ್. ಪಾಟೀಲ ಅವರು, ಸದನದಲ್ಲಿ ಪಕ್ಷಾತೀತವಾಗಿ ಹೋರಾಟ ಮಾಡುವುದಾಗಿ ಹೇಳಿದ್ದೇನೆ. ಆ ಮಾತನ್ನು ಉಳಿಸಿಕೊಳ್ಳಲು ಮತ್ತು ಟೀಕೆ ಟಿಪ್ಪಣೆ ಬಾರದಿರಲು ಈ ಹೋರಾಟ ಮಾಡುತ್ತಿದ್ದೇನೆ. ನಾನು ಸದನದಲ್ಲಿ ಆಡಿರುವ ಮಾತುಗಳನ್ನು ಉಳಿಸಿಕೊಳ್ಳಲು ಮತ್ತು ಈ ಯೋಜನೆಗಳನ್ನು ತ್ವರಿತವಾಗಿ ಕಾರ್ಯರೂಪ ತರಲು ಒತ್ತಾಯಿಸಲು ಹಾಗೂ ಎಲ್ಲರಿಗೂ ನ್ಯಾಯ ದೊರೆಯಬೇಕು ಎಂಬ ಉದ್ದೇಶದಿಂದ ಈ ಪಾದಯಾತ್ರೆ ಕೈಗೊಂಡಿದ್ದೇನೆ. ನಾನೇನು ಬೇರೆ ಬೇಡಿಕೆ ಇಟ್ಟಿಲ್ಲ. ನಾನು ಯಾವುದೇ ಸರಕಾರ, ರಾಜಕಾರಣಿ, ಪಕ್ಷವನ್ನು ಬೈಯ್ಯುವುದಿಲ್ಲ. ಉತ್ತರ ಕರ್ನಾಟಕ ಸಮೃದ್ಧ ಕರ್ನಾಟಕವಾಗಲಿ ಎಂಬ ಉದ್ದೇಶದಿಂದ ಈ ಹೋರಾಟ ಕೈಗೊಂಡಿದ್ದೇನೆ ಎಂದು ತಿಳಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ನ್ಯಾಯಮೂರ್ತಿ ಬ್ರಿಜೆಶಕುಮಾರ 2010ರ ಡಿಸೆಂಬರ್ 30 ರಂದು ತೀರ್ಪು ನೀಡಿದ್ದಾರೆ. ಈ ತೀರ್ಪು ಹೊರಬಂದು 12 ವರ್ಷ ಕಳೆದರೂ ಯೋಜನೆ ಜಾರಿಗೆ ಕೇಂದ್ರ ಸರಕಾರ ನೊಟಫಿಕೇಶನ್ ಮಾಡಿಲ್ಲ. ಕಾವೇರಿ ವಿಷಯದಲ್ಲಿ ವ್ಯಾಜ್ಯ ಇದ್ದಾಗಲೂ ನೋಟಿಫಿಕೇಶನ್ ಮಾಡಿದ್ದರು. ಕೃಷ್ಣಾ ವಿಷಯದಲ್ಲಿಯೂ ಇದೇ ಮಾನದಂಡ ಅನುಸರಿಸಬೇಕು. ನಾನು ಫೆ. 24 ರಂದು ದೆಹಲಿಯಲ್ಲಿ ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೇನೆ ಎಂದು ಅವರು ತಿಳಿಸಿದರು.
ಅಧಿವೇಶನದಲ್ಲಿಯೇ ಹೇಳಿದ್ದೆ
ಕೃಷ್ಣಾ ಮೇಲ್ದಂಡೆ ಯೋಜಡನೆ ಜಾರಿಗೆ ಆಗ್ರಹಿಸಿ ಹೋರಾಟ ಮಾಡುವುದಾಗಿ ನನ್ನ ಕೊನೆಯ ಅಧಿವೇಶನದಲ್ಲಿಯೇ ಹೇಳಿದ್ದೆ. ಈ ಅಧಿವೇಶನ ಮುಗಿದ ಮೇಲೆ ಹೊರಗೆ ಬರುತ್ತೇನೆ. ಹೋರಾಟ ಮುಂದುವರೆಸುತ್ತೇನೆ ಎಂದು ಹೇಳಿದ್ದೆ. ನನ್ನ ಅವಧಿ ಮುಗಿದ ಬಳಿಕ ಸುಮ್ಮನಾಗಿಬಿಟ್ಟಿದ್ದೀರಿ ಎಂದು ಕೆಲವುರ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಈ ಹಿಂದೆ ಹೇಳಿದಂತೆ ಟ್ರ್ಯಾಕ್ಟರ್ ಜಾಥಾ ಮಾಡುತ್ತಿದ್ದೇನೆ. ಯುಕೆಪಿ ಯೋಜನೆ ಪೂರ್ಣಗೊಂಡರೆ ವಿಜಯಪುರ ಜಿಲ್ಲೆಗೆ 80 ಟಿಎಂಸಿ ನೀರು ಸಿಗಲಿದೆ. ಇದರಿಂದ ಇಡೀ ಬಾಗಲಕೋಟೆ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ನೀರಾವರಿಯಾಗಲಿವೆ ಎಂದು ಅವರು ತಿಳಿಸಿದರು.
ವಿಜಯಪುರ ಜಿಲ್ಲೆಯ 14 ಗ್ರಾಮಗಳು ಈ ಯೋಜನೆಯಡಿ ಮುಳುಗಡೆಯಾಗಲಿದ್ದು, ಅವುಗಳ ಮೌಲ್ಯಮಾಪನ ಇನ್ನೂ ಆಗಿಲ್ಲ. ಕೂಡಲೇ ಈ ಗ್ರಾಮಗಳ ಭೂಮಿಗೂ ಬೆಲೆ ನಿಗದಿಯಾಗಬೇಕು. ಕಳೆದ ವರ್ಷ ಅ. 2ರಿಂದ ಘಟಪ್ರಭಾ ನದಿಯಿಂದ ಕೃಷ್ಣಾ ನದಿಯವರೆಗೆ ಪಾದಯಾತ್ರೆ ಮಾಡಿದ್ದೆ. ಎರಡೇ ದಿನಗಳಲ್ಲಿ ಮನವಿ ಮಾಡಿದಾಗ ಆ ಮೆರವಣಿಗೆಯಲ್ಲಿ 25 ಸಾವಿರ ಜನ ಸೇರಿದ್ದರು. ಅಂದು ಸದನದಲ್ಲಿ ನುಡಿದಂತೆ ಈಗ ನಡೆಯುತ್ತಿದ್ದೇನೆ. ಬಸವಣ್ಣನ ನಾಡಿನಿಂದ ಬಂದಿರುವ ನಾನು ನಡೆ ಮತ್ತು ನುಡಿ ಪಾಲಿಸುತ್ತೇನೆ ಎಂದು ಅವರು ಹೇಳಿದರು.
ಬನ್ನಿ ಕೃಷ್ಣಾ, ಮಹಾದಾಯಿ, ನವಲಿ ಸಂಕಲ್ಪ ಯಾತ್ರೆಗೆ
ಇದೇ ವೇಳೆ ಏ. 13 ರಿಂದ ಆರಂಭವಾಗಲಿರುವ ಬನ್ನಿ ಕೃಷ್ಣಾ, ಮಹಾದಾಯಿ, ನವಲಿ ಸಂಕಲ್ಪ ಯಾತ್ರೆಗೆ ಆರಂಭವಾಗಲಿದೆ. ಕೃಷ್ಣಾ ಮೇಲ್ದಂಡೆ ಯೋಜನೆ, ಮಹಾದಾಯಿ ಯೋಜನೆ ಮತ್ತು ನವಲಿ ಬಳಿ ತುಂಗಭದ್ರಾ ನದಿಗೆ ಸಮತೋಲನ ಜಲಾಷಯ ನಿರ್ಮಾಣಕ್ಕೆ ಆಗ್ರಹಿಸಿ ರಾಜ್ಯದ ಬಜೆಟ್ಟಿನಲ್ಲಿ ಶೇ. 15 ರಷ್ಟು ಹಣ ಮತ್ತು ಸಂಪೂರ್ಣ ಸಿಬ್ಬಂದಿ ಒದಗಿಸಿ ಎರಡು ವರ್ಷಗಳಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಿ ಗುಳೆ ಹೋಗುವವರ ಬೀಡನ್ನು ಹಸಿರು ನಾಡಾಗಿಸಿ ಸಮೃದ್ಧ ಉತ್ತರ ಕರ್ನಾಟಕ ನಿರ್ಮಿಸಲು ಈ ಹೋರಾಟ ಆರಂಭವಾಗಲಿದೆ. ಫೆ. 13 ರಂದು ಬೆ. 9ಕ್ಕೆ ಜಗದ್ಗುರು ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಗದಗ ಜಿಲ್ಲೆಯ ನರಗುಂದದಿಂದ ಆರಂಭವಾಗಿ ಈ ಟ್ರ್ಯಾಕ್ಟರ್ ಜಾಥಾ ಕೊಣ್ಣೂರು, ಹೊಳೆಆಲೂರು, ಬಾದಾಮಿ ಮೂಲಕ ಬಾಗಲಕೋಟೆ ಹಾಗು ವಿಜಯಪುರ ಜಿಲ್ಲೆಗಳಲ್ಲಿ ಸಂಚಿರಿಸಿ ಫೆ. 17 ರಂದು ರವಿವಾರ ಮ. 3.30ಕ್ಕೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿಯಲ್ಲಿ ಬಾಪೂಜಿ ಅಂತಾರಾಷ್ಟ್ರೀಯ ಶಾಲೆಯ ಮೈದಾನದಲ್ಲಿ ಟ್ರ್ಯಾಕ್ಟರ್ ಜಾಥಾದ ಬೃಹತ್ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಎಸ್. ಆರ್. ಪಾಟೀಲ ತಿಳಿಸಿದರು.
ಈ ಸಂದರ್ಭದಲ್ಲಿ ಹೋರಾಟಗಾರರಾದ ಭೀಮಶಿ ಕಲಾದಗಿ, ರಾಜುಗೌಡ ಚೌಧರಿ, ಮಲ್ಲಯ್ಯ ಸಾರಂಗಮಠ, ಬಸವರಾಜ ಕುಂಬಾರ ಮುಂತಾದವರು ಉಪಸ್ಥಿತರಿದ್ದರು.