ವಿಜಯಪುರ: 2023ರ ಸಾರ್ವತ್ರಿಕ ಚುನಾವಣೆ(2023 General Ecletion) ತಯಾರಿ ಆರಂಭಿಸಿರುವ ಮಾಜಿ ಸಿಎಂ(Former Chief Minister) ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ(JDS State President) ಎಚ್. ಡಿ. ಕುಮಾರಸ್ವಾಮಿ(H D Kumarswamy) ಬಸವ ನಾಡು(Basava Nadu) ವಿಜಯಪುರದಿಂದ ಜನತಾ ಜಲಧಾರೆ ಕಾರ್ಯಕ್ರಮದ ಮೂಲಕ ಸಿದ್ಧತೆ ಆರಂಭಿಸಿದ್ದಾರೆ.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಸುಕ್ಷೇತ್ರ ಯಲಗೂರಿನಲ್ಲಿರುವ ಯಲಗೂರೇಶ ದೇವಸ್ಥಾನಕ್ಕೆ ಆಗಮಿಸಿದ ಎಚ್. ಡಿ. ಕುಮಾರಸ್ವಾಮಿ ದೇವರ ದರ್ಶನ ಪಡೆದರು. ದವನದ ಹುಣ್ಣಿಮೆಯ ದಿನ ರಾಮಭಕ್ತ ಹನುಮಾನ ಜಯಂತಿಯೂ ಇರುವುದರಿಂದ ಇದೇ ದಿನ ಅದೂ ಕೂಡ ಜಾಗೃತ ಯಲಗೂರೇಶ ದೇವಸ್ಥಾನದಲ್ಲಿ ಸಂಕಲ್ಪ ಮಾಡಿದರು. ಅಲ್ಲದೇ, ಜಲಧಾರೆ ಕಾರ್ಯಕ್ರಮಕ್ಕೆ ಯಾವುದೇ ವಿಘ್ನಗಳು ಬಾರದಂತೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಅರ್ಚಕರು ಮಾಜಿ ಸಿಎಂ ಎಚ್ ಡಿ ಕೆ ಅವರನ್ನು ಬರಮಾಡಿಕೊಂಡು ದೇವರ ದರ್ಶನ ಮಾಡಿಸಿ ಸನ್ಮಾನಿಸಿ ಗೌರವಿಸಿದರು. ಅಲ್ಲದೇ, ಅವರಿಗೆ ಆಶೀರ್ವಾದ ಮಾಡಿ ಶುಭ ಕೋರಿದರು. ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ನಾಗಠಾಣ ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ, ಜೆಡಿಎಸ್ ಮುಖಂಡರಾದ ರಾಜುಗೌಡ ಪಾಟೀಲ ಮತ್ತು ಇತರರು ಉಪಸ್ಥಿತರಿದ್ದರು.
ಇದಾದ ಬಳಿಕ ನಿಡಗುಂದಿ ತಾಲೂಕಿನ ಆಲಮಟ್ಟಿಗೆ ತೆರಳಿದ ಅವರು, ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರದ ಮೇಲ್ಭಾಗದಲ್ಲಿರುವ ಉತ್ತರ ಕರ್ನಾಟಕದ ಜೀವ ನದಿ ಕೃಷ್ಣಾ ಹೊಳೆಗೆ ಪೂಜೆ ಸಲ್ಲಿಸಿದರು. ನಾನಾ ಮಂತ್ರಗಳನ್ನು ಪಠಿಸಿದ ಅರ್ಚಕರು ಜನತಾ ಜಲಧಾರೆ ಯೋಜನೆಯ ಯಶಸ್ಸಿಗೆ ಶುಭ ಕೋರಿದರು.
ಬಳಿಕ ತೆರೆದ ರಥದಲ್ಲಿ ಆಸೀನರಾದ ಕುಮಾರಸ್ವಾಮಿ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಮೂಲಕ ಉತ್ತರ ಕರ್ನಾಟಕದಲ್ಲಿ ತೆನೆ ಪಡೆ ಬಲಪಡಿಸಲು ಜೆಡಿಎಸ್ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಹನುಮ ಜಯಂತಿಯನ್ನು ಶೃದ್ದಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಈ ಪವಿತ್ರ ದಿನ ಯಾವುದೇ ಕೆಲಸಕ್ಕೂ ಹನುಮನ ಆಶಿರ್ವಾದ ದೊರಕಿದರೆ ಅದರಿಂದ ಯಶಸ್ಸು ಕಾಣುತ್ತೇವೆ ಎಂಬ ನಂಬಿಕೆ ನಮ್ಮಲ್ಲಿದೆ. ಈ ಕ್ಷಣದಿಂದ ಜನತಾ ಜಲಧಾರೆ ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ಹನುಮಂತ ಸಂಪೂರ್ಣ ಶಕ್ತಿಯನ್ನು ಜೆಡಿಎಸ್ ಪಕ್ಷಕ್ಕೆ ತುಂಬಿಲ ಎಂಬುದೇ ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.
ನಾಡಿನ ನಮ್ಮ ನದಿಯ ನೀರನ್ನು ನಾವು ಬಳಕೆ ಮಾಡುವ ಸಂಕಲ್ಪ ಮಾಡುತ್ತಿದ್ದೇವೆ. ಪ್ರತಿ ಕುಟುಂಬಕ್ಕೆ ಶುದ್ದ ಕುಡಿಯುವ ನೀರನ್ನು ಕೊಡುವ ಉದ್ದೇಶ ಇಟ್ಟುಕೊಂಡಿದ್ದೇವೆ. ಮುಂಬರುವ ಐದು ವರ್ಷಗಳಲ್ಲಿ ನಾಡಿನ ಎಲ್ಲ ನೀರಾವರಿ ಯೋಜನೆ ಪೂರ್ಣಗೊಳಿಸುತ್ತೇವೆ. ನಾಡನ್ನು ಹಸಿರು ಮಾಡುವ ಸಂಕಲ್ಪ ಹೊಂದಿದ್ದೇವೆ. ಹನುಮಾನ ಜಯಂತಿಯಂದೇ ಈ ಹೋರಾಟ ಪ್ರಾರಂಭವಾಗಿರುವ ಕಾರಣ ಹನುಮನ ಶಕ್ತಿ ಪಕ್ಷಕ್ಕೆ ಅನುಗ್ರಹಿಸಲಿ ಎಂದು ಕುಮಾರಸ್ವಾಮಿ ಹೇಳಿದರು.