ಮತ್ತೆ ಜೆಡಿಎಸ್ ತೊರೆಯಲು ನಿರ್ಧರಿಸಿದ ಮಾಜಿ ಎಂ ಎಲ್ ಸಿ ಬಿ. ಜಿ. ಪಾಟೀಲ ಹಲಸಂಗಿ- ಯಾವ ಪಕ್ಷ ಸೇರಬಹುದು ಗೊತ್ತಾ?

ವಿಜಯಪುರ: ಜನತಾ(Janata) ಪರಿವಾರದ(Pariwar) ಹಿರಿಯ ಮುಖಂಡ(Senior Leader) ಮಾಜಿ ಎಂಎಲ್‌ಸಿ(Former MLC) ಬಿ. ಜಿ. ಪಾಟೀಲ ಹಲಸಂಗಿ(B. G. Patil Halasangi) ಮತ್ತೋಮ್ಮೆ ಜೆಡಿಎಸ್ ತೊರೆಯಲು ನಿರ್ಧರಿಸಿದ್ದಾರೆ.

ಬಸವ ನಾಡಿಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಏ. 23ರ ನಂತರ ಬಿ. ಜಿ. ಪಾಟೀಲ ಹಲಸಂಗಿ ತಮ್ಮ ಮುಂದಿನ ನಿರ್ಧಾರ ಪ್ರಕಟಿಸಲಿದ್ದಾರೆ.  ಏ. 23ರ ವರೆಗೆ ವಿಜಯಪುರ ಜಿಲ್ಲೆಯ ನಾನಾ ಕಡೆಗಳಲ್ಲಿ ಜೆಡಿಎಸ್ ಕೈಗೊಂಡಿರುವ ಜನತಾ ಜಲಧಾರೆ ಕಾರ್ಯಕ್ರಮ ಆಯೋಜಿಸಲಾಗಿದೆ.  ಈ ಕಾರ್ಯಕ್ರಮ ಮುಗಿದ ನಂತರ ಅವರು ಜೆಡಿಎಸ್ ತೊರೆಯುವುದು ಬಹುತೇಕ ಖಚಿತವಾಗಿದೆ.

2004ರಲ್ಲಿ ಜೆಡಿಎಸ್ ಎಂಎಲ್‌ಸಿ ಆಗಿದ್ದ ಬಿ. ಜಿ. ಪಾಟೀಲ ಹಲಸಂಗಿ ನಂತರ ನಡೆದ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ಇಂಡಿ ವಿಧಾನ ಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.  ನಂತರ ಬಹುವರ್ಷಗಳ ಕಾಲ ಕಾಂಗ್ರೆಸ್ಸಿನಲ್ಲಿಯೇ ಇದ್ದ ಅವರು, ಎರಡು ವರ್ಷಗಳ ಹಿಂದೆ ಕಾಂಗ್ರೆಸ್ ತೊರೆದು ಮತ್ತೆ ಮಾತೃಪಕ್ಷ ಸೇರಿದ್ದರು.

ಈಗ ಜೆಡಿಎಸ್ ವರಿಷ್ಠರ ವರ್ತನೆಯಿಂದ ಬೇಸತ್ತಿರುವ ಬಿ. ಜಿ. ಪಾಟೀಲ ಹಲಸಂಗಿ ಮತ್ತೆ ಜೆಡಿಎಸ್ ತೊರೆಯಲು ನಿರ್ಧರಿಸಿದ್ದಾರೆ.  ಜೆಡಿಎಸ್ ನಿಂದ ರಾಜ್ಯಸಭೆ ಎಂಪಿ, ವಿಧಾನ ಪರಿಷತ ಸದಸ್ಯರ ಮತ್ತು ಸಚಿವ ಸ್ಥಾನ ಸೇರಿದಂತೆ ನಾನಾ ಅಧಿಕಾರ ಅನುಭವಿಸಿ ಕಾಂಗ್ರೆಸ್ ಸೇರಿದ್ದ ನಾಯಕರೊಬ್ಬರು 10 ವರ್ಷಗಳ ಕಾಲ ಜೆಡಿಎಸ್ ವರಿಷ್ಠರು, ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ನಾನಾ ಮುಖಂಡರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.  ಈಗ ಮತ್ತೆ ಅವರಿಗೆ ಪಕ್ಷದಲ್ಲಿ ಪ್ರಾಧಾನ್ಯತೆ ನೀಡಲಾಗಿದೆ.  ತಾವು ಕಳೆದ ಹಲವಾರು ವರ್ಷಗಳಿಂದ ಜೆಡಿಎಸ್ ನಲ್ಲಿದ್ದರೂ ತಮಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎಂಬ ಬೇಸರ ಬಿ. ಜಿ. ಪಾಟೀಲ ಹಲಸಂಗಿ ಅವರಲ್ಲಿದೆ.

ವಿಧಾನ ಪರಿಷತ ಮಾಜಿ ಸದಸ್ಯ ಬಿ. ಜಿ. ಪಾಟೀಲ ಹಲಸಂಗಿ

ಈ ಹಿನ್ನೆಲೆಯಲ್ಲಿಯೇ ಅವರು ಪಕ್ಷ ಸಂಘಟನೆಯಿಂದ ದೂರ ಸರಿಯಲು ನಿರ್ಧರಿಸಿದ್ದಾರೆ.  ಎರಡು ದಿನಗಳ ಹಿಂದೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ನಡೆದ ಜೆಡಿಎಸ್ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸ್ಥಾನದಲ್ಲಿ ಕುಳಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದ ಬಿ. ಜಿ. ಪಾಟೀಲ ಅವರನ್ನು ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ, ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ಇತರರು ವೇದಿಕೆಗೆ ಕರೆದು ಕುಳ್ಳಿರಿಸಿ ಸಮಾಧಾನ ಪಡಿಸಲು ಪ್ರಯತ್ನಿಸಿದ್ದರು.

ಆದರೆ, ಪಕ್ಷಕ್ಕಾಗಿ ಪ್ರಾಮಾಣಿಕತೆಯಿಂದ ದುಡಿದ ತಮ್ಮನ್ನು ಜೆಡಿಎಸ್ ಸರಿಯಾಗಿ ನಡೆಸಿಕೊಳ್ಳದ ಹಿನ್ನೆಲೆಯಲ್ಲಿ ಜೆಡಿಎಸ್ ತೊರೆಯುತ್ತಿರುವುದಾಗಿ ಬಿ. ಜಿ. ಪಾಟೀಲ ಹಲಸಂಗಿ ಈಗ ಮತ್ತೋಮ್ಮೆ ಜೆಡಿಎಸ್ ತೊರೆಯಲು ನಿರ್ಧರಿಸಿರುವುದಾಗಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿ. ಜಿ. ಪಾಟೀಲ ಹಲಸಂಗಿ ವಿಜಯಪುರ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ಪ್ರಬಲ ಗಾಣಿಗ ಸಮುದಾಯದ ಮುಖಂಡರಾಗಿದ್ದು, ಏ. 23ರ ನಂತರ ಆಪ್ತರೊಂದಿಗೆ ಚರ್ಚಿಸಿ ಬಹುಷಃ ಬಿಜೆಪಿ ಸೇರುವ ಸಾಧ್ಯತೆ ಇವೆ ಎಂದು ಮೂಲಗಳು ಬಸವ ನಾಡಿಗೆ ತಿಳಿಸಿವೆ.

Leave a Reply

ಹೊಸ ಪೋಸ್ಟ್‌