ಧರ್ಮದ ಕುರಿತು ಸಂಘ ಪರಿವಾರ, ಬಿಜೆಪಿಯವರು ನೀಡುವ ಪ್ರಚೋದನೆಗೆ ಒಳಗಾಗಬಾರದು ಎಂದು ಅಲ್ಪಸಂಖ್ಯಾತರಿಗೆ ಕರೆ ನೀಡಿದ ಎಸ್. ಎಂ‌. ಪಾಟೀಲ ಗಣಿಹಾರ

ವಿಜಯಪುರ: ಧರ್ಮದ ವಿಚಾರದಲ್ಲಿ(Religion Issue) ಸಂಘ ಪರಿವಾರ(Sangha Pariwar) ಮತ್ತು ಬಿಜೆಪಿಯವರು ನೀಡುವ ಪ್ರಚೋದನೆಗೆ(Provocation) ಒಳಗಾಗಬಾರದು ಎಂದು ಕೆಪಿಸಿಸಿ ವಕ್ತಾರ ಮತ್ತು ಅಲ್ಪಸಂಖ್ಯಾತರ ಮುಖಂಡ ಎಸ್. ಎಂ. ಪಾಟೀಲ ಗಣಿಹಾರ(S M Patil Ganihar) ಮುಸ್ಲಿನರಿಗೆ ಮನವಿ ಮಾಡಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ಚುನಾವಣೆಯ ಮುಗಿಯುವವರೆಗೆ ಸಂಘ ಪರಿವಾರ ಮತ್ತು ಬಿಜೆಪಿ ಮುಸ್ಲಿಮರನ್ನು ಪ್ರಚೋದಿಸಲಿವೆ. ಈ ಹಿನ್ನೆಲೆಯಲ್ಲಿ ಯಾರೂ ಪ್ರಚೋದನೆಗೆ ಒಳಗಾಗಬಾರದು. ಸಂವಿಧಾನದ ಮೇಲೆ ವಿಶ್ವಾಸವಿಟ್ಟು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಲು ಮುಸ್ಲಿಂ ಹಿರಿಯರು, ಬುದ್ಧಿಜೀವಿಗಳು ಪ್ರವಾಸ ಮಾಡಬೇಕು. ಇಲ್ಲದಿದ್ದರೆ ಪ್ರಚೋದನೆಯ ಧಾವಂತದಲ್ಲಿ ನಡೆಯುವ ಘಟನೆಗಳಿಂದ ಇಡೀ ಸಮಾಜಕ್ಕೆ ಕೆಟ್ಟ ಹೆಸರು ತರಲು ವಿರೋಧಿಗಳು ಪ್ರಯತ್ನಿಸುತ್ತಾರೆ. ಅಲ್ಲದೇ, ಅನಾಯಕರಿಗೆ ತೊಂದರೆಯಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ವಿಜಯಪುರದಲ್ಲಿ ಕೆಪಿಸಿಸಿ ವಕ್ತಾರ ಎಸ್. ಎಂ. ಪಾಟೀಲ ಗಣಿಹಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

2023ರ ಚುನಾವಣೆ ಹಿನ್ನೆಲೆಯಲ್ಲಿ ಮುಸ್ಲಿಮರ ವಿರುದ್ಧ ಮುಸ್ಲಿಂ ಹೊರತಾದವರನ್ನು ಎತ್ತಿ ಕಟ್ಟುವ ಕೆಲಸ ನಡೆಯುತ್ತಿದೆ. ಶಿವಮೊಗ್ಗ ಕೊಲೆ, ಹುಬ್ಬಳ್ಳಿ ಗಲಾಟೆ ಹಿಂದೆ ಸಂಘ ಪರಿವಾರದ ಕೈವಾಡವಿದೆ. ಸಂಘ ಪರಿವಾರವನ್ನು ಓಲೈಸಿಕೊಳ್ಳಲು ಸಿಎಂ ಬೊಮ್ಮಾಯಿ‌ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಈ ವರ್ಷ ಪೂರ್ತಿ ಪ್ರಚೋದಿಸುವ ಕೆಲಸವನ್ನು ಬಿಜೆಪಿ ಮಾಡಲಿದೆ. ಮುಸ್ಲಿಮರು ಯಾವುದೇ ಪ್ರಚೋದನೆಗೆ ಒಳಗಾಗದೇ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಚುನಾವಣೆ ಮುಗಿಯುವವರೆಗೆ ಎಲ್ಲರೂ ಸಹನಶಕ್ತಿ ಹೆಚ್ಚಿಸಿಕೊಳ್ಳಬೇಕು. ಚುನಾವಣೆಯ ವರೆಗೆ ಸಂಯಮದಿಂದ ಇರಬೇಕು ಎಂದು ಅವರು ಹೇಳಿದರು.

ಈಶ್ವರಪ್ಪ ಅವರನ್ನು ಬಂಧಿಸಬೇಕು

ಇದೇ ವೇಳೆ, ಬೆಳಗಾವಿ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ‌ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಸೆಕ್ಷನ್ ನಡಿ ದೂರು ದಾಖಲಾಗಿದೆ. ಜಾಮಿನು ರಹಿತ ಸೆಕ್ಷನ್ ಇದಾಗಿದೆ. ಆದರೆ, ಈವರೆಗೆ ಅವರನ್ನು ಏಕೆ ಬಂಧಿಸಿಲ್ಲ? ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಮೊದಲು ಗುತ್ತಿಗೆದಾರನ ಬಗ್ಗೆ ಪರಿಚಯ ಇಲ್ಲ ಎಂದಿದ್ದರು. ಈಗ ಸಂತೋಷ ಪಾಟೀಲ ಬಗ್ಗೆ ಅನುಕಂಪವಿದೆ ಎಂದು ಹೇಳಿದ್ದಾರೆ. ಪೊಲೀಸರು ಈ ಕುರಿತು ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ ಮಾಡಿದರೆ ಸಿಎಂ ಕಾಂಗ್ರೆಸ್ ಏನು ಜಡ್ಜಾ ಎಂದು ಪ್ರಶ್ನಿಸುತ್ತಾರೆ. ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾದಾಗ ಇದೇ ಈಶ್ವರಪ್ಪ ಮುಸ್ಲಿಮರನ್ನು ಗೂಂಡಾ ಎಂದು ಆರೋಪಿಸಿದ್ದರು. ಆಗ ಇನ್ನೂ ತನಿಖೆಯೇ ಆರಂಭವಾಗಿರಲಿಲ್ಲ. ಆಗ ಅವರು ಜಡ್ಜ್ ಆಗಿದ್ದರಾ ಎಂದು ಕೆಪಿಸಿಸಿ ವಕ್ತಾರರು ಪ್ರಶ್ನಿಸಿದರು.

ಸರಕಾರ ತಕ್ಷಣ ಈಶ್ವರಪ್ಪ ಅವರನ್ನು ಬಂಧಿಸಬೇಕು. ಬೇರೆ ಬೇರೆ ಪ್ರಕರಣಗಳಲ್ಲಿ ರಾತ್ರೋರಾತ್ರಿ ಜನರನ್ನು ಬಂಧಿಸುತ್ತೀರಿ. ಎಫ್ ಐ ಆರ್ ದಾಖಲಾಗದಿದ್ದರೂ ಬಂಧಿಸುತ್ತೀರಿ. ಈಗ ಈಶ್ವರಪ್ಪ ಅವರನ್ನು ಬಂಧಿಸಲು ಏಕೆ ಹಿಂಜರಿಯುತ್ತೀರಿ ಎಂದು ಅವರು ಪ್ರಶ್ನಿಸಿದರು.

ಹುಬ್ಬಳ್ಳಿ ಘಟನೆಯಲ್ಲಿ ಅಮಾಯಕ ಜನರನ್ನು ಬಂಧಿಸಲಾಗಿದೆ. ಸರಕಾರ ನ್ಯಾಯದ ಪರ ಇರಬೇಕು. ಪ್ರತಿನಿತ್ಯ ಪ್ರಚೋದನಾತ್ಮಕ ಹೇಳಿಕೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಭಾರತದಲ್ಲಿ ಸಾವಿರಾರು ವರ್ಷಗಳಿಂದ ಹಿಂದೂ-ಮುಸ್ಲಿಮರು ಭಾವೈಕ್ಯತೆಯಿಂದ ಬದುಕುತ್ತಿದ್ದಾರೆ. ಆದರೆ, ಚೈತ್ರಾ ಕುಂದಾಪುರ ಎಂಬುವರು ಅಜಾನ್ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಸ್. ಎಂ. ಪಾಟೀಲ‌ ಗಣಿಹಾರ ಆಗ್ರಹಿಸಿದರು.

ಸಿ. ಟಿ. ರವಿ ವಿರುದ್ಧ ವಾಗ್ದಾಳಿ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಮುಸ್ಲಿಮರು ಉಗ್ರವಾದಿಗಳಾಗಲು ಕುರಾನ್ ನಲ್ಲಿನ ಅಂಶಗಳೇ ಕಾರಣ ಎನ್ನುತ್ತಿದ್ದಾರೆ. ಮುಸ್ಲಿಮರ ಹೊರತಾದವರನ್ನು ಕೊಲ್ಲು ಎಂದು ಕುರಾನ್ ನಲ್ಲಿ ಹೇಳಲಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಸಿ. ಟಿ. ರವಿ ಹಸಿ ಸುಳ್ಳು ಹೇಳುತ್ತಿದ್ದಾರೆ. ಕುರಾನ್ ನಲ್ಲಿ ಆ ರೀತಿ ಹೇಳಿಲ್ಲ. ಎಲ್ಲ ಧರ್ಮ‌ಗ್ರಂಥಗಳು ಅಧರ್ಮದ ಪರ ಇರುವವರು ನಿಮ್ಮ ಮೇಲೆ ಧಾಳಿ ಮಾಡಿದರೆ ಅಂಥವರನ್ನು ಶಿಕ್ಷಿಸು ಎಂದು ಹೇಳುತ್ತವೆ. ಭಗವದ್ಗೀತೆಯಲ್ಲಿಯೂ ಇದರ ಬಗ್ಗೆ ಉಲ್ಲೇಖವಿದೆ. ಸಿ‌. ಟಿ. ರವಿ ಹೇಳಿಕೆಗಳಿಗೆ ಕಟ್ಟಳೆ ಹಾಕಬೇಕು ಎಂದು ಎಸ್. ಎಂ. ಪಾಟೀಲ ಗಣಿಹಾರ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಅಕ್ರಮ‌ ಮಾಶ್ಯಾಳಕರ, ನ್ಯಾಯವಾದಿ ಮತ್ತು ಡಿ ಎಸ್ ಎಸ್ ಮುಖಂಡ ನಾಗರಾಜ‌‌ ಲಂಬು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌