ವಿಜಯಪುರ: ಅಂತೂ ಇಂತೂ ಅಳೆದು ತೂಗಿ ಕೈ(Congress) ಪಡೆ ವಿಧಾನ ಪರಿಷತ್ತಿನ(MLC) ವಾಯುವ್ಯ(North West) ಶಿಕ್ಷಕರ ಮತಕ್ಷೇತ್ರಕ್ಕೆ(Teachers Constituency) ಮಾಜಿ ಸಚಿವ ಪ್ರಕಾಶ ಹುಕ್ಕೇರಿ(Prakash Hukkeri) ಅವರಿಗೆ ಟಿಕೆಟ್ ನೀಡಿದೆ.
ಈ ವಿಚಾರ ಈಗ ಕೆಪಿಸಿಸಿ ಮುಖಂಡ ಸಂಗಮೇಶ ಬಬಲೇಶ್ವರ ಅವರಿಗೆ ತೀವ್ರ ಬೇಸರ ತರಿಸಿದ್ದು, ಹೈಕಮಾಂಡ ನಿರ್ಧಾರದಿಂದ ಅಚ್ಚರಿಗೊಂಡಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ವಾಯುವ್ಯ ಶಿಕ್ಷಕರ ಮತಕ್ಷೇತ್ರದಿಂದ ಮಾಜಿ ಸಚಿವ ಪ್ರಕಾಶ ಹುಕ್ಕೆರಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ನನಗೆ ಟಿಕೆಟ್ ಸಿಗುವ ನಿರೀಕ್ಷೆಯಿತ್ತು. ಆದರೆ, ಈಗ ಪಕ್ಷ ಹಿರಿಯರಾದ ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಅವರ ಹೆಸರನ್ನು ಘೋಷಣೆ ಮಾಡಿದೆ ಎಂದು ಹೇಳಿದ್ದಾರೆ.
ಪಕ್ಷಕ್ಕೆ ಯುವಕರಿಗಿಂತ ವಯೋವೃದ್ಧರೇ ಹೆಚ್ಚು ಅಪ್ಯಾಯಮಾನವಾದಂತೆ ಕಾಣುತ್ತದೆ. ಪಕ್ಷದ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಆದರೆ, ಸೂಕ್ತ ಸಮಯಕ್ಕೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ನಾನು ಸಂಪೂರ್ಣ ಸ್ವತಂತ್ರನಾಗಿದ್ದೇನೆ.
ಎಂ ಬಿ. ಪಾಟೀಲ ಅವರು ನನಗಾಗಿ ಹಗಲಿರುಳು ಟಿಕೆಟ್ ಕೊಡಿಸಲು ಪ್ರಯತ್ನಿಸಿದ್ದಾರೆ. ಅವರು ಬೆಂಗಳೂರಿನಿಂದ ವಿಜಯಪುರಕ್ಕೆ ಬಂದ ನಂತರ ಅವರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಯುವಕರಿಗೆ ಆದ್ಯತೆ ಕೊಟ್ಟಿದ್ದರೆ ಇನ್ನೂ ಒಳ್ಳೆಯದಾಗುತ್ತಿತ್ತು ಎನ್ನುವುದು ನನ್ನ ವೈಯಕ್ತಿಕ ಭಾವನೆ. ಆದಷ್ಟು ಬೇಗನೆ ನನ್ನನ್ನು ಅಭ್ಯರ್ಥಿಯನ್ನಾಗಿಸಲು ಶ್ರಮಿಸಿದ ಪಕ್ಷದ ಮುಖಂಡರು ಮತ್ತು ನನ್ನ ಹಿತೈಷಿಗಳನ್ನು ಸಂಪರ್ಕಿಸಿ.ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು ಎಂಬ ಸದಾಶಯದಿಂದ ನನಗೆ ಬೆಂಬಲ ಸೂಚಿಸುತ್ತ ಬಂದಿರುವ ಶಿಕ್ಷಕ ಬಂಧುಗಳನ್ನು ಕೂಡ ಭೇಟಿಯಾಗಿ ನಿರ್ಧಾರ ಪ್ರಕಟಿಸುವುದಾಗಿ ಸಂಗಮೇಶ ಬಬಲೇಶ್ವರ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಸಂಗಮೇಶ ಬಬಲೇಶ್ವರ ಕಾನೂನು ಪದವೀಧರರಾಗಿದ್ದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಮತ್ತು ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಅವರ ಪರಮಾಪ್ತರಲ್ಲಿ ಒಬ್ಬರಾಗಿದ್ದಾರೆ. ಅಲ್ಲದೇ, ಇವರ ಪರ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೈ ಟಿಕೆಟ್ ಗಾಗಿ ಸಾಕಷ್ಟು ಅಭಿಯಾನ ಕೂಡ ಕೈಗೊಂಡಿದ್ದರು. ಸಂಗಮೇಶ ಬಬಲೇಶ್ವರ ಕೂಡ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ, ಈಗ ಕಾಂಗ್ರೆಸ್ ಹೈಕಮಾಂಡ್ ಪ್ರಕಾಶ ಹುಕ್ಕೆರಿ ಅವರಿಗೆ ಟಿಕೆಟ್ ನೀಡಿರುವುದು ಅವರಲ್ಲಿ ಬೇಸರ ಮೂಡಿಸಿದೆ.