ಮಹೇಶ ವಿ. ಶಟಗಾರ
ವಿಜಯಪುರ: ವಿಜಯಪುರ ಜಿಲ್ಲಾಧಿಕಾರಿ(Vijayapura Deputy Commissioner) ಕಚೇರಿ(Office) ಶುಕ್ರವಾರ(Friday) ಅಪೂರ್ವ ಕ್ಷಣಗಳಿಗೆ(Memorable Moments) ಸಾಕ್ಷಿಯಾಯಿತು. ಈ ಸಂದರ್ಭದಲ್ಲಿ ನಿರ್ಗಮಿತ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರ ನಡೆ ಕೂಡ ಇತರರಿಗೆ ಮಾದರಿ(Model) ಎಂಬಂತಿತ್ತು.
ವಿಜಯಮಹಾಂತೇಶ ಬಿ. ದಾನಮ್ಮನವರ ವಿಜಯಪುರ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ನಿರ್ಗಮಿತ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ಎಸ್ಪಿ ಎಚ್. ಡಿ. ಆನಂದ ಕುಮಾರ, ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಉಪಸ್ಥಿತರಿದ್ದದ್ದು ಉತ್ತಮ ಸಂಪ್ರದಾಯಕ್ಕೆ ನಾಂದಿ ಹಾಡಿತು.
ಈ ಮೊದಲು ನಾನು ಕಂಡಂತೆ ಹೊಸ ಜಿಲ್ಲಾಧಿಕಾರಿಗಳು ಅಧಿಕಾರ ವಹಿಸಿಕೊಳ್ಳುವಾಗ ನಿರ್ಗಮಿತ ಡಿಸಿಗಳು ಉಪಸ್ಥಿತರಿದ್ದದ್ದು ಬಲು ಅಪರೂಪ. ಅಷ್ಟೇ ಅಲ್ಲ, ಹಿರಿಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇರುವುದೂ ಅತೀ ಕಡಿಮೆ. ಮೇಲಾಗಿ ನೂತನ ಜಿಲ್ಲಾಧಿಕಾರಿಗಳು ತಮ್ಮ ಕುಟುಂಬ ಸದಸ್ಯರೊಂದಿಗೆ ಬಂದು ಅಧಿಕಾರ ವಹಿಸಿಕೊಂಡಿದ್ದೂ ವಿರಳ.
ಇದನ್ನು ಓದಿ:
ನಿರ್ಗಮಿತ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಕೊರೊನಾ ತೀವ್ರ ಕಾಟ ಕೊಟ್ಟಿದ್ದ ಸಮಯದಲ್ಲಿ ವಿಜಯಪುರ ಜಿಲ್ಲೆಯ ಅಧಿಕಾರ ವಹಿಸಿಕೊಂಡಿದ್ದರು. ಅಷ್ಟೇ ಅಲ್ಲ, ಇವರು ಕೊರೊನಾ ಆರ್ಭಟದ ನಡುವೆಯೇ ಭೀಮಾ ತೀರದಲ್ಲಿ ಉಂಟಾದ ಭೀಕರ ಪ್ರವಾಹ ಕೂಡ ಇವರು ಎದುರಿಸಿ ಪ್ರಮುಖ ಸವಾಲುಗಳಲ್ಲೊಂದಾಗಿತ್ತು. ಎಡೆಬಿಡದೆ ತಿರುಗಾಡಿ ಎಲ್ಲವನ್ನು ಸಮರ್ಥವಾಗಿ ನಿಭಾಯಿಸಿದ್ದೂ ಇವರ ಚಾಕಚಕ್ಯತೆಗೆ ಸಾಕ್ಷಿ. ಯಾವುದೇ ಸಮಸ್ಯೆಗಳಿದ್ದರೂ ಇಂದಿನ ಅಗತ್ಯಕ್ಕೆ ತಕ್ಕಂತೆ ಅತೀ ವೇಗದಲ್ಲಿ ಸ್ಪಂದಿಸುತ್ತಿದ್ದ ಅವರು, ಸಾಮಾಜಿಕ ಜಾಲತಾಣ ವಾಟ್ಸಾಪ್ ಮೂಲಕ ಅಧಿಕಾರಿಗಳಿಗೆ ಸಮಸ್ಯೆ ಬಗ್ಗೆ ಸಂದೇಶ ರವಾನಿಸಿ ತಕ್ಷಣ ಕ್ರಮ ಕೈಗೊಳ್ಳಲು ಸೂಚಿಸುತ್ತಿದ್ದದ್ದು ಜನಪರ ಅಧಿಕಾರಿಗಿರುವ ನೈಜ ಕಾಳಜಿಯಾಗಿತ್ತು. ಅಷ್ಟೇ ಅಲ್ಲ, ಸೋಮಾರಿ ಸಿಬ್ಬಂದಿಗಳಿಗೆ ಬಿಸಿಯನ್ನೂ ಮುಟ್ಟಿಸುವ ಮೂಲಕ ಆಡಳಿತ ವ್ಯವಸ್ಥೆಯಲ್ಲಿ ಚುರುಕು ಮುಟ್ಟಿಸಿದ್ದರು.
ಈಗ ತಮ್ಮನ್ನು ವರ್ಗಾವಣೆ ಮಾಡಿದರೂ ಅದರಲ್ಲೂ ಯಾವುದೇ ಹುದ್ದೆಯನ್ನು ಸರಕಾರ ತೋರಿಸದಿದ್ದರೂ ಬೇಸರಿಸಿಕೊಳ್ಳದೇ ಪಿ. ಸುನೀಲ ಕುಮಾರ ವಿಜಯಪುರ ಜಿಲ್ಲಾಧಿಕಾರಿ ಕಚೇರಿಗೆ ಬಂದು ನೂತನ ಡಿಸಿ ವಿಜಯಮಹಾಂತೇಶ ಬಿ. ದಾನಮ್ಮನವರ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಅಷ್ಟೇ ಅಲ್ಲ, ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಅವರ ಕೊಠಡಿಯಲ್ಲಿಯೇ ಕುಳಿತು ನಾನಾ ವಿಷಯಗಳ ಬಗ್ಗೆ ಚರ್ಚಿಸಿದ್ದು ಉತ್ತಮ ಸಂಪ್ರದಾಯಕ್ಕೆ ನಾಂದಿ ಹಾಡಿತು. ಈ ಮುಂಚೆ ನೂತನ ಜಿಲ್ಲಾಧಿಕಾರಿಗಳು ಅಧಿಕಾರ ವಹಿಸಿಕೊಳ್ಳುವಾಗ ನಿರ್ಗಮಿತ ಡಿಸಿಗಳು ಉಪಸ್ಥಿತರಿದ್ದದ್ದ ಬಲು ಕಡಿಮೆ. ಅಲ್ಲದೇ, ನೇರವಾಗಿ ಐಎಎಸ್ ಪಾಸು ಮಾಡಿದ ಅಧಿಕಾರಿಗಳಂತು ಕೆ ಪಿ ಎಸ್ ಸಿ ಪಾಸು ಮಾಡಿ ಬಡ್ತಿ ಹೊಂದಿರುವ ಜಿಲ್ಲಾಧಿಕಾರಿಗಳ ಜೊತೆ ಹೊಂದುವ ಒಡನಾಟ ಕೂಡ ಅಷ್ಟಕ್ಕಷ್ಟೇ. ಇಲ್ಲಿ ಪಿ. ಸುನೀಲ ಕುಮಾರ ಯು ಪಿ ಎಸ್ ಸಿ ಪರೀಕ್ಷೆಯಲ್ಲಿ ಐಎಎಸ್ ಪಾಸು ಮಾಡಿದ್ದರೆ, ನೂತನ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಕೆ ಪಿ ಎಸ್ ಸಿ ಪರೀಕ್ಷೆ ಪಾಸು ಮಾಡಿ ನಾನಾ ಹುದ್ದೆಗಳಲ್ಲಿ ಸೇವೆ ಮಾಡಿ ಐಎಎಸ್ ಬಡ್ತಿ ಹೊಂದಿರುವ ಪ್ರತಿಭಾವಂತ ಅಧಿಕಾರಿ. ಇದಾವುದರ ಭೇದಭಾವವಿಲ್ಲದೇ ಪಿ. ಸುನೀಲ ಕುಮಾರ ವಿನಮ್ರರಾಗಿ ಇತರ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಯ ಕಳೆದಿದ್ದು ಉಳಿದ ಅಧಿಕಾರಿಗಳಿಗೆ ಒಂದು ಉತ್ತಮ ಸಂದೇಶ ರವಾನಿಸಿದಂತಿತ್ತು. ಅಷ್ಟೇ ಅಲ್ಲ, ಕಚೇರಿಯ ಸಿಬ್ಬಂದಿಯೂ ಅಧಿಕಾರಿಗಳ ಮಧ್ಯೆ ಸೌಹಾರ್ಧತೆ ಹೀಗಿರಬೇಕು ಎಂದು ಮಾತನಾಡುವಂತೆ ಮಾಡಿತ್ತು.
ಅಂದಹಾಗೆ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಎಸ್ಪಿ ಎಚ್. ಡಿ. ಆನಂದ ಕುಮಾರ ಕೂಡ ಕನ್ನಡಿಗರಾಗಿದ್ದಾರೆ. ಇನ್ನು ವಿಜಯಪುರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಕೂಡ ಯು ಪಿ ಎಸ್ ಸಿ ಪರೀಕ್ಷೆ ಪಾಸು ಮಾಡಿ ಐಎಎಸ್ ಅಧಿಕಾರಿಯಾಗಿದ್ದು, ಅವರೂ ಕೂಡ ಕನ್ನಡಿಗರಾಗಿರುವುದು ವಿಶೇಷವಾಗಿದೆ.
ನಿರ್ಗಮಿತ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಇವರ ಮುಂದಿನ ಪಯಣ ಸುಗಮವಾಗಿರಲಿ. ಇವರಿಂದ ಜನತೆಗೆ ಮತ್ತಷ್ಟು ಜನೋಪಯೋಗಿ ಸೇವೆ ಸಿಗಲಿ ಎಂಬುದು ಬಸವ ನಾಡಿನ ಎಲ್ಲರ ಆಶಯವಾಗಿದೆ.