ವಿಜಯಪುರ: ಬಸವ ನಾಡು(Basava Nadu) ವಿಜಯಪುರದಲ್ಲಿ(Vijayapura) ಇದೇ ಮೊದಲ(First) ಬಾರಿಗೆ(Time) ರಾಜ್ಯಮಟ್ಟದ ಲಿಂಬೆ ಉತ್ಸವ-2022(State Level Lemon Fest-2022) ಭರದಿಂದ ಸಾಗಿದೆ.
ವಿಜಯಪುರ ನಗರದ ಶ್ರೀ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಆರಂಭವಾಗಿರುವ ಈ ಉತ್ಸವದಲ್ಲಿ ಕೇಂದ್ರ ಸರಕಾರದ ಮಹಾತ್ಮಕಾಂಕ್ಷಿ ಯೋಜನೆ ಮತ್ತು ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣೆ-ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ವಿಜಯಪೂರ ಜಿಲ್ಲೆಗೆ ಲಿಂಬೆ ಬೆಳೆ ಆಯ್ಕೆಯಾದ ಹಿನ್ನೆಲೆಯಲ್ಲಿ ಏಪ್ರೀಲ್ 23 ಮತ್ತು ಏಪ್ರೀಲ್ 24ರಂದು ಎರಡು ದಿನಗಳ ಕಾಲ ನಗರದಲ್ಲಿ ಲಿಂಬೆ ಉತ್ಸವವನ್ನು ಆಯೋಜಿಸಲಾಗಿದೆ.
ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಿಂದಗಿ ಬಿಜೆಪಿ ಶಾಸಕ ರಮೇಶ ಭೂಸನೂರ ಅವರು ಚಾಲನೆ ನೀಡಿದರು. ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಈ ಉತ್ಸವದ ಅಂಗವಾಗಿ ಎರಡು ದಿನ ನಾನಾ ವಿಚಾರ ಸಂಕಿರಣ, ರಾಜ್ಯ ಮಟ್ಟದ ಲಿಂಬೆ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕುರಿತು ತರಬೇತಿ ಲಿಂಬೆ ಉತ್ಸವ, ನುರಿತ ತಜ್ಞರಿಂದ ಲಿಂಬೆ ಹಾಗೂ ಸಿರಿಧಾನ್ಯಗಳ ಸಂಸ್ಕರಣೆ, ಮಾರುಕಟ್ಟೆ, ರಫ್ತು ಅವಕಾಶಗಳ ಕುರಿತು ವಿಚಾರ ಸಂಕಿರಣ ನಡೆಯಲಿದೆ.
ಈ ಉತ್ಸವದಲ್ಲಿ ಲಿಂಬೆ ಹಾಗೂ ಸಿರಿಧಾನ್ಯದ ನಾನಾ ಪದಾರ್ಥಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಮಾಡಲಾಗಿದೆ.
ಈ ಕಾರ್ಯಕ್ರಮ ಲಿಂಬೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಶೋಕ ಅಲ್ಲಾಪೂರ, ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಸಂತೋಷ ಸಪ್ಪಂಡಿ, ಮಂಡಳಿಯ ಸಹಾಯಕ ನಿರ್ದೇಶಕ ಆನಂದ ಬಿರಾದಾರ ಹಾಗೂ ಇನ್ನೀತರ ಮಹನೀಯರ ಜನಪರ ಕಾಳಜಿಯಿಂದ ಆಯೋಜಿಸಲು ಸಾಧ್ಯವಾಗಿದೆ.
ಇದೇ ವೇಳೆ ಲಿಂಬೆ ಸೇರಿದಂತೆ ನಾನಾ ತೋಟಗಾರಿಕೆ ಬೆಳೆಗಳಲ್ಲಿ ಸಾಧನೆ ತೋರಿದ ಪ್ರಗತಿಪರ ರೈತರಿಗೆ ಸನ್ಮಾನಿಸಲಾಯಿತು. 22 ಸಹಕಾರ ಉತ್ಪಾದಕರ ಸಂಘಗಳನ್ನು ಇದೆ ಸಂದರ್ಭದಲ್ಲಿ ಉದ್ಘಾಟಿಸಲಾಯಿತು. ಟ್ರೇಡ್ ಮಾರ್ಕನ್ನು ಕೂಡ ಬಿಡುಗಡೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ರಾಹುಲ ಶಿಂಧೆ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ರಾಜಶೇಖರ ವಿಲಿಯಮ್ಸ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಿದ್ಧರಾಮಯ್ಯ ಬರಗಿಮಠ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೆಡಶ್ಯಾಳ, ಡಿ. ಆರ್. ಪಾಟೀಲ, ಎಸ್. ಐ. ಹಣಮಶೆಟ್ಟಿ, ಸಿದ್ಧು ಪೂಜಾರಿ, ಡಾ. ಕಲಘಟಗಿ, ಮಹಾದೇವ ಅಂಬಲಿ, ಸದಾಶಿವ ಪಾಟೀಲ, ರಾಘವೇಂದ್ರ ಬಗಲಿ, ಗುರುರಾಜ ಕಕ್ಕಮರಿ ಮುಂತಾದವರು ಉಪಸ್ಥಿತರಿದ್ದರು.