Dual Party System: ದ್ವಿಪಕ್ಷ ಪದ್ಧತಿ ಜಾರಿಗೆ ಆಗ್ರಹ: 42 ದಿನ 1500 ಕಿ. ಮೀ. ದೆಹಲಿಗೆ ಪಾದಯಾತ್ರೆ ಕೈಗೊಂಡು ಕೇಂದ್ರಕ್ಕೆ ಮನವಿ ಪತ್ರ ಸಲ್ಲಿಸಿದ ಬಸವ ನಾಡಿನ ಹಿರಿಯ ಮುತ್ಸದ್ದಿ

ವಿಜಯಪುರ: ದೇಶದಲ್ಲಿ ದ್ವಿಪಕ್ಷ ಪದ್ಧತಿ(Dual Party System) ಜಾರಿಯಾಗಬೇಕು.  ಮತ್ತು ಚಲಾವಣೆಯಾದ ಮತಗಳಲ್ಲಿ(Casted Votes) ಶೇ. 50ಕ್ಕಿಂತಲೂ ಹೆಚ್ಚು ಮತ ಪಡೆದ ಅಭ್ಯರ್ಥಿಯನ್ನು(Candidate) ಮಾತ್ರ ವಿಜಯಿ(Winner) ಎಂದು ಘೋಷಿಸುವಂತೆ ಆಗ್ರಹಿಸಿ ಬಸವ ನಾಡಿನ(ಬಸವ ನಾಡು) ಹಿರಿಯ ಮುತ್ಸದ್ದಿಯೊಬ್ಬರು 1500 ಕಿ. ಮೀ. ಪಾದಯಾತ್ರೆ ನಡೆಸಿ ಸಂಸದ ರಮೇಶ ಜಿಗಜಿಣಗಿ ಸಮ್ಮುಖದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥಸಿಂಗ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಎಲ್ಲ ಪಕ್ಷದವರೊಂದಿಗೆ ಆತ್ಮೀಯ ಸಂಬಂಧ ಹೊಂದಿರುವ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ 62 ವರ್ಷದ ಬಾಪುರಾಯ ಲೋಣಿ ಉನ್ನತ ವಿಚಾರಧಾರೆಗಳನ್ನು ಹೊಂದಿರುವ ಹಿರಿಯ ಮುತ್ಸದ್ದಿ.  ಈಗಿನ ಪ್ರಜಾಪ್ರಬುತ್ವ ವ್ಯವಸ್ಥೆಯಲ್ಲಿ ಇರುವ ಲೋಪದೋಷಗಳು, ಅವುಗಳನ್ನು ಸರಿಪಡಿಸುವ ಕುರಿತು ತಮ್ಮ ಆತ್ಮೀಯರೊಂದಿಗೆ ಬಹಳ ವರ್ಷಗಳಿಂದ ಚರ್ಚಿಸುತ್ತ ಬಂದವರು.  ಇದಕ್ಕಾಗಿ ಪಾದಯಾತ್ರೆ ಮಾಡುವ ವಿಚಾರವನ್ನು ಆಗಾಗ ವ್ಯಕ್ತಪಡಿಸುತ್ತ ಬಂದಿದ್ದರು.  ಆಗ ಕೆಲವರು ಇವರ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.  ಅಲ್ಲದೇ, ಪಾದಯಾತ್ರೆಯ ಬಗ್ಗೆಯೂ ಅಸಾಧ್ಯ ಎಂಬಂತೆ ಮಾತನಾಡಿದ್ದರು.

ಬಾಪುರಾಯ ಲೋಣಿ ಅವರು ಇತ್ತೀಚೆಗೆ ಅವರು ಶ್ರೀಶೈಲಕ್ಕೆ ಮಲ್ಲಯ್ಯನ ದರ್ಶನಕ್ಕೆ ಹೋದಾಗ ಅವರ ತಲೆಯಲ್ಲಿ ತಮ್ಮ ಮನಸ್ಸಿನಲ್ಲಿ ಬಹಳ ದಿನಗಳಿಂದ ಕೊರೆಯುತ್ತಿದ್ದ ವಿಚಾರ ನೆನಪಿಗೆ ಬಂದು ಅಲ್ಲಿಯೇ ಅವರು ಪಾದಯಾತ್ರೆ ಕೈಗೊಳ್ಳುವ ಸಂಕಲ್ಪ ಮಾಡಿದ್ದಾರೆ.  ದೇವಸ್ಥಾನದಿಂದ ಹೊರಗೆ ಬಂದವರೇ ತಮ್ಮೊಂದಿಗಿದ್ದ ಹಿರಿಯರಿಗೆ ತಾವು ದೆಹಲಿಗೆ ಪಾದಯಾತ್ರೆ ಕೈಗೊಳ್ಳುವ ಸಂಕಲ್ಪದ ಬಗ್ಗೆ ಹೇಳಿದ್ದಾರೆ.  ಆಗ, ಎಲ್ಲರೂ ಸುದೀರ್ಘ ಪಾದಯಾತ್ರೆ ಬೇಡ.  ನಿಮ್ಮ ವಯಸ್ಸಿನ ಬಗ್ಗೆಯೂ ಕಾಳಜಿ ವಹಿಸಿ ಎಂದು ಹೇಳಿದರೂ ಕೇಳದ ಅವರು, ದೇವರ ಮೇಲೆ ಭಾರ ಹಾಕಿ ತಮ್ಮ ಸಂಕಲ್ಪವನ್ನು ಮಾಡಿಯೇ ತೀರುವುದಾಗಿ ತಿಳಿಸಿದ್ದಾರೆ.

ಲೋಣಿ ಬಿ. ಕೆ. ಗ್ರಾಮದಲ್ಲಿ ಮಾ. 10 ರಂದು ಪಾದಯಾತ್ರೆ ಆರಂಭಿಸಿದಾಗ ಶುಭ ಕೋರಿದ ಸ್ವಾಮೀಜಿ, ಮುಖಂಡರು

ಅದರಂತೆ, ಮಾ. 10 ರಂದು ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಲೋಣಿ ಬಿ. ಕೆ. ಗ್ರಾಮದಲ್ಲಿ ನಡೆದ ಪಾದಯಾತ್ರೆ ಉದ್ಘಾಟನೆ ಸಂದರ್ಭದಲ್ಲಿ ಶ್ರೀಶೈಲ ಜಗದ್ಗುರುಗಳಾದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು, ಸಂಸದ ರಮೇಶ ಜಿಗಜಣಗಿ, ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ , ವಿಜಯಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮತ್ತು ಮಾಜಿ ಶಾಸಕ ಪ್ರೊ. ರಾಜು ಆಲಗೂರ, ಮಾಜಿ ಶಾಸಕ ವಿಠ್ಠಲ ಕಟಕದೊಂಡ, ಮುಖಂಡರಾದ ಬಿ. ಎಂ. ಕೋರೆ, ಕೆ. ಎಸ್. ಪಾಟೀಲ, ಎಚ್. ಆರ್. ಉಟಗಿ, ಬಿ. ಎಸ್. ಹಿಪ್ಪರಗಿ, ರಾಗವೇಂದ್ರ ಕಾಪಸೆ, ಸಿದ್ದಣ್ಣ ಕೋಳಿ ಮುಂತಾದವರು ಉಪಸ್ಥಿತರಿದ್ದು ಪಾದಯಾತ್ರೆಗೆ ಶುಭ ಕೋರಿದ್ದರು.

ಇದನ್ನು ಓದಿ:

https://basavanadu.com/2022/03/11/vijayaprua-senior-citizen-of-loni-b-k-started-padayatre-to-delhi-demanding-dual-party-system-in-india/

ದೆಹಲಿ ತಲುಪಿದ ಪಾದಯಾತ್ರೆ

ಇವರು ಕೈಗೊಂಡಿದ್ದ ಪಾದಯಾತ್ರೆ 42 ದಿನಗಳ ನಂತರ ದೆಹಲಿ ತಲುಪಿದೆ.  ಇವರನ್ನು ಲೋಣಿ ಬಿ. ಕೆ. ಗ್ರಾಮದ ಶಿಕ್ಷಕ ಗುರುಶಾಂತ ಕಾಪಸೆ, ತದ್ದೇವಾಡಿಯ ಮಹಾಂತೇಶ ಸ್ವಾಮೀಜಿ ಮತ್ತಿತರರು ದೆಹಲಿಯಲ್ಲಿ ಸ್ವಾಗತಿಸಿದ್ದಾರೆ.  ಈ ಸಂದರ್ಭದಲ್ಲಿ ಕರ್ನಾಟಕ ಭವನದಲ್ಲಿ ಕಾರ್ಯನಿಮಿತ್ತ ವಾಸ್ತವ್ಯವಿದ್ದ ಬೆಳಗಾವಿ ವಿಭಾಗೀಯ ಔಷಧ ನಿಯಂತ್ರಣಾಧಿಕಾರಿ ರಘುರಾಂ ಅವರೂ ಕೂಡ ಬಾಪುರಾಯ ಲೋಣಿ ಅವರನ್ನು ಭೇಟಿಯಾಗಿ ಶುಭ ಕೋರಿದ್ದರು.

ದೆಹಲಿಗೆ ಆಗಮಿಸಿದ ಬಾಪುರಾಯ ಲೋಣಿ ಅವರನ್ನು ಬರಮಾಡಿಕೊಂಡ ವಿಜಯಪುರ ಜಿಲ್ಲೆಯ ಮುಖಂಡರು

ಪ್ರಚಾರದ ಹಂಗಿಲ್ಲದೆ 42 ದಿನಗಳಲ್ಲಿ ಸುಮಾರು 1500 ಕಿ. ಮೀ. ಪಾದಯಾತ್ರೆ ನಡೆಸಿದ ಅವರನ್ನು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಕೂಡ ಸ್ವಾಗತಿಸಿದ್ದಾರೆ.  ಅಲ್ಲದೇ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾಪುರಾಯ ಲೋಣಿ ಅವರ ಪಾದಯಾತ್ರೆಯ ವಿಚಾರವನ್ನು ತಲುಪಿಸಿದ್ದಾರೆ.  ಪ್ರಧಾನಿಗಳಿಗೆ ಪೂರ್ವ ನಿಯೋಜಿತ ಕಾರ್ಯಕ್ರಮಗಳಿದ್ದ ಹಿನ್ನೆಲೆಯಲ್ಲಿ ಭೇಟಿಯಾಗಲು ಸಾಧ್ಯವಾಗದೇ ಅವರು ರಕ್ಷಣಾ ಸಚಿವ ರಾಜನಾಥಸಿಂಗ್ ಅವರ ಮೂಲಕ ಮನವಿಯನ್ನು ಸ್ವೀಕರಿಸುವ ವ್ಯವಸ್ಥೆ ಮಾಡಿದ್ದಾರೆ.

ತಮ್ಮ ವಿಚಾರವನ್ನು ದೆಹಲಿಯವರೆಗೆ ಮುಟ್ಟಿಸಲು ಪಾದಯಾತ್ರೆ ನಡೆಸಿದ ಹಿರಿಯ ಮುತ್ಸದ್ದಿ ಬಾಪುರಾಯ ಲೋಣಿ ಅವರು ತಮಗೆ ಸಹಕರಿಸಿದ ಎಲ್ಲ ಮುಖಂಡರು ಮತ್ತು ಕೇಂದ್ರಕ್ಕೆ ಸಂದೇಶ ತಲುಪಿಸಲು ನೆರವಾದ ಸಂಸದ ರಮೇಶ ಜಿಗಜಿಣಗಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.  ಲೋಣಿ ಬಿ. ಕೆ. ಗ್ರಾಮಸ್ಥರೂ ಕೂಡ ಸಂಸದರಿಗೆ ತಮ್ಮೂರಿನ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಅಂತೂ ಇಂತೂ ಬಸವ ನಾಡಿನ ಹಿರಿಯ ಮುತ್ಸದ್ದಿಯೊಬ್ಬರು ಪಾದಯಾತ್ರೆ ಮೂಲಕ ಜಗತ್ತಿನ ಮೊದಲ ಸಂಸತ್ತು ಅಂದರೆ ಅಣ್ಣ ಬಸವಣ್ಣನವರು ಸ್ಥಾಪಿಸಿದ್ದ ಅನುಭವ ಮಂಟಪದ ನೆಲದಿಂದ(ಕರ್ನಾಟಕ) ಹೊರಟು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಸಂಸತ್ತಿನ ಪ್ರಮುಖರಿಗೆ ತಮ್ಮ ಸಂದೇಶ ತಲುಪಿಸಿರುವುದು ಸ್ತುತ್ಯಾರ್ಹವಾಗಿದೆ.

Leave a Reply

ಹೊಸ ಪೋಸ್ಟ್‌