ವಿಜಯಪುರ: ವಾಣಿಜ್ಯ ಬೆಳೆಗಳಾದ(Commercial Crop) ಲಿಂಬೆ(Lemon), ದಾಳಿಂಬೆ(Pomegranate), ಸೀತಾಫಲ(Custard Apple), ದ್ರಾಕ್ಷಿಯಂತಹ(Grapes) ಬೆಳೆಗಳನ್ನು ಹೆಚ್ಚಾಗಿ ಬೆಳೆದು ಆರ್ಥಿಕವಾಗಿ ಮುಂದೆ ಬರಬೇಕು ಎಂದು ಅರಣ್ಯ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ವಿ.ಕತ್ತಿ ರೈತರಿಗೆ ಸಲಹೆ ನೀಡಿದ್ದಾರೆ.
ವಿಜಯಪುರ ನಗರದ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಯ ಲಿಂಬೆ ಉತ್ಸವ-2022 ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಾಣಿಜ್ಯ ಬೆಳೆಗಳನ್ನು ಬೆಳೆಯುವ ರೈತರು ಸಂಸ್ಕರಣ ಘಟಕಗಳ್ನು ಸ್ಥಾಪಿಸಲು ಬಯಸಿದರೆ ಅವರಿಗೆ ಡಿಸಿಸಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕವೂ ಸಾಲಸೌಲಭ್ಯ ಒದಗಿಸಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏ. 26ಕ್ಕೆ ವಿಜಯಪುರ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ರೈತರು ಆಗಮಿಸಿ, ಅಹವಾಲು ಸಲ್ಲಿಸಿದಲ್ಲಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಲಾಗುವುದು. ಸರಕಾರದ ಸಬ್ಸಿಡಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆತ್ಮನಿರ್ಭರ ಭಾರತ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆ ಯೋಜನೆಯಡಿ ಒಂದು ಜಿಲ್ಲೆ ಒಂದು ಬೆಳೆಗೆ ಜಿಲ್ಲೆಯ ಲಿಂಬೆ ಬೆಳೆಯು ಆಯ್ಕೆಯಾಗಿದೆ. ಜಿಲ್ಲೆಯ ರೈತರು ಹೆಚ್ಚಿನ ಪ್ರಮಾಣದಲ್ಲಿ ಲಿಂಬೆಯಂಥ ವಾಣಿಜ್ಯ ಬೆಳೆಗಳನ್ನು ಬೆಳೆಯಬೇಕು. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಿಂಬೆ ಸಂಸ್ಕರಣ ಘಟಕಗಳು, ಶೀತಲೀಕರಣ ಘಟಕಗಳು ಆರಂಭವಾದರೆ ರೈತರಿಗೆ ಅನುಕೂಲವಾಗಲಿದೆ. ಲಿಂಬೆಯನ್ನು ಸಂಸ್ಕರಣ ಘಟಕಕ್ಕೆ ಒಳಪಡಿಸಿದರೆ ಲಿಂಬೆ, ಲಿಂಬೆ ಉತ್ಪನ್ನಗಳಿಂದ ಹೆಚ್ಚಿನ ಆರ್ಥಿಕ ಲಾಭ ಪಡೆದುಕೊಳ್ಳಬಹುದಾಗಿದೆ ಎಂದು ಉಮೇಶ ಕತ್ತಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಲಿಂಬೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಶೋಕ ಅಲ್ಲಾಪೂರ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ಎಸ್ಪಿ ಎಚ್. ಡಿ. ಆನಂದಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ, ಲಿಂಬೆ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಸಂತೋಷ ಸಪ್ಪಂಡಿ, ಮಂಡಳಿಯ ಸಹಾಯಕ ನಿರ್ದೇಶಕ ಆನಂದ ಬಿರಾದಾರ, ಬುರಣಾಪುರದ ಮಾತೇಶ್ವರಿ, ಅರವಿಂದ ದೇಶಪಾಂಡೆ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ರಾಜಶೇಖರ ವಿಲಿಯಮ್ಸ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಿದ್ಧರಾಮಯ್ಯ ಬರಗಿಮಠ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೆಡಶ್ಯಾಳ, ಡಿ. ಆರ್. ಪಾಟೀಲ, ಎಸ್. ಐ. ಹಣಮಶೆಟ್ಟಿ, ಸಿದ್ಧು ಪೂಜಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.