ವಿಜಯಪುರ: ಬಸವ ನಾಡು(Basava Nadu) ವಿಜಯಪುರದ(Vijayaura) ಬಹು ನಿರೀಕ್ಷಿತ ವಿಮಾನ ನಿಲ್ದಾಣ(Air Port) ಕಾಮಗಾರಿಯನ್ನು ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ(December Month End) ಪೂರ್ಣಗೊಳಿಸಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ(Water Resources Minister Govind Karajol) ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಗಡುವು ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ಬುರಣಾಪುರ ಬಳಿ ನಡೆಯುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಕಾಮಗಾರಿಯ ಪರಿಶೀಲನೆ ನಡೆಸಿ ಮಾತನಾಡಿದರು.
ಐತಿಹಾಸಿಕ ವಿಜಯಪುರ ನಗರಕ್ಕೆ ಇನ್ನಷ್ಟು ಮೆರುಗು ನೀಡುವ ನಿಟ್ಟಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು. ವಿಶ್ವವಿಖ್ಯಾತ ಗೋಳ ಗುಮ್ಮಟ ವೀಕ್ಷಣೆಗಾಗಿ ವಿಜಯಪುರಕ್ಕೆ ಬರುವ ಜನರು ವಿಮಾನ ನಿಲ್ದಾಣಕ್ಕೂ ಭೇಟಿ ನೀಡಿ ನೋಡುವಂತೆ ಆಕರ್ಷಣೀಯವಾಗಿ ನಿಲ್ದಾಣವನ್ನು ನಿರ್ಮಿಸಬೇಕು. ವಿಮಾನ ನಿಲ್ದಾಣಕ್ಕೆ ಯಾವುದೇ ರೀತಿಯ ಹಣಕಾಸಿನ ಕೊರತೆ ಇಲ್ಲ. ಸರಕಾರದಿಂದ ಬೇಕಾದ ಎಲ್ಲ ಸಹಕಾರವನ್ನು ಮಾಡಿಕೊಡುವುದಾಗಿ ತಿಳಿಸಿದ ಸಚಿವರು, 2023ರ ಸಂಕ್ರಮಣದ ಸಮಯದಲ್ಲಿ ಜಿಲ್ಲೆಯಲ್ಲಿ ವಿಮಾನ ಹಾರಾಡುವಂತಾಗಬೇಕು ಎಂದು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಎಟಿಆರ್-72 ವಿಮಾನಗಳ ಹಾರಟಕ್ಕಾಗಿ ವಿಜಯಪುರ ವಿಮಾನ ನಿಲ್ದಾಣಕ್ಕೆ ರೂ. 220 ಕೋ. ಹಣ ಮಂಜೂರಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ರೂ. 220 ಕೋ. ಕಾಮಗಾರಿ ಪೈಕಿ ಮೊದಲನೇ ಹಂತದ ಕಾಮಗಾರಿಗೆ ರೂ. 95 ಕೋ. ಮತ್ತು ಎರಡನೇ ಹಂತದ ಕಾಮಗಾರಿಗೆ ರೂ. 125 ಕೋಟಿ ರೂ ಕಾಯ್ದಿರಿಸಲಾಗಿದೆ. ಮೊದಲನೇ ಹಂತದ ಕಾಮಗಾರಿಯಲ್ಲಿ ರನ್ ವೇ, ಟ್ಯಾಕ್ಸಿ ವೇ, ಎಪ್ರಾನ್, ಐಸೋಲೇಶನ್ ಬೇ, ಕೂಡು ರಸ್ತೆ, ಒಳ ರಸ್ತೆ, ಪೆರಿಪೆರಲ್ ರಸ್ತೆಗಳು ಹಾಗೂ ಇನ್ನೀತರ ಕಾಮಗಾರಿ ಮಾಡಲಾಗುತ್ತಿದೆ. ಎರಡನೇ ಹಂತದಲ್ಲಿ ರೂ. 125 ಕೋ. ವೆಚ್ಚದಲ್ಲಿ ಪುನಃ ಎರಡು ಕಾಮಗಾರಿಗಳನ್ನು ವಿಂಗಡಿಸಲಾಗಿದೆ. ಸಿವಿಲ್ ಕಾಮಗಾರಿಗೆ ರೂ. 106 ಕೋ. ಹಾಗೂ ಏವಿಯೋನಿಕ್ಸ್, ಸೆಕ್ಯೂರಿಟಿ ಇಕ್ವ್ಯೂಪಮೆಂಟ್ ಉಪಕಾಮಗಾರಿಗೆ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಸಿವಿಲ್ ಉಪ ಕಾಮಗಾರಿಯು ಪ್ರಗತಿಯಲ್ಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಏವಿಯೋನಿಕ್ಸ್, ಸೆಕ್ಯೂರಿಟಿ ಇಕ್ವ್ಯೂಪಮೆಂಟ್ ಉಪಕಾಮಗಾರಿ ಅಭಿವೃದ್ಧಿ ಪಡಿಸಲು ಟೆಂಡರ್ ಪ್ರಕ್ರಿಯೆಯಲ್ಲಿದೆ. ಮೊದಲನೇ ಹಂತದ ಕಾಮಗಾರಿ ಇಂದಿನವರೆಗೆ ಶೇ.62ರಷ್ಟು ಭೌತಿಕ ಮತ್ತು ಶೇ. 62 ಆರ್ಥಿಕ ಪ್ರಗತಿಯಾಗಿದೆ ಎಂದು ಅವರು ತಿಳಿಸಿದರು.
ವಿಮಾನ ನಿಲ್ದಾಣದ ಹಂತ-2ರ ಕಾಮಗಾರಿಯು ಪ್ರಾರಂಭಿಸಲಾಗಿದ್ದು ಟರ್ಮಿನಲ್ ಕಟ್ಟಡದ ತಳಪಾಯ ಅಗೆತದ ಕೆಲಸ ಪ್ರಗತಿಯಲ್ಲಿದೆ, ವಿಜಯಪುರ ವಿಮಾನ ನಿಲ್ದಾಣವನ್ನು ಏಟಿಆರ್-72 ದಿಂದ ಏರ್ ಬಸ್- 320 ವಿಮಾನಗಳ ಹಾರಾಟಕ್ಕೆ ಮೇಲ್ದರ್ಜೇಗೇರಿಸುವ ಪ್ರಕ್ರಿಯೆ ನಡೆಯುತ್ತಿರುವುದರಿಂದ ರನ್ ವೇ, ಟ್ಯಾಕ್ಸಿ ವೇ, ಎಪ್ರಾನ್, ಐಸೋಲೇಶನ್ ಬೇ ಇತರೆ ಕಾಮಗಾರಿಗಳ ವಿನ್ಯಾಸದಲ್ಲಿ ವ್ಯತ್ಯಾಸವಾಗುತ್ತಿರುವುದರಿಂದ ಮೂರನೇ ಹಂತದ ವಿಮಾನ ನಿಲ್ದಾಣವನ್ನು ಮೇಲ್ದರ್ಜೇಗೇರಿಸುವ ಕಾಮಗಾರಿಗೆ ಅವಶ್ಯವಿರುವ ರೂ. 120 ಕೋ. ಗೆ ಈಗಾಗಲೇ ವರದಿ ತಯಾರಿಸಿ ಸಲ್ಲಿಸುವ ಷರತ್ತಿಗೊಳಪಟ್ಟು ಇನ್ ಪ್ರಿನ್ಸಿಪಲ್ ಅಪ್ರೂವಲ್ ದೊರೆತಿದೆ. ವಿಮಾನ ನಿಲ್ದಾಣವನ್ನು ಮೇಲ್ದರ್ಜೇಗೇರಿಸುವ ಮೂರನೇ ಹಂತದ ಕಾಮಗಾರಿಯ ವರದಿ ತಯಾರಿಸಿ ಅನುಮೋದನೆಗಾಗಿ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಗೋವಿಂದ ಕಾರಜೋಳ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ಬಿ. ದಾನಮ್ಮನವರ, ಲೋಕೊಪಯೋಗಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಬಿ. ವೈ. ಪವಾರ, ಕಾರ್ಯನಿರ್ವಹಣೆ ಎಂಜಿನಿಯರ್ ವಿ. ಆರ್. ಹಿರೇಗೌಡರ, ಸಹಾಯಕ ಕಾರ್ಯ ನಿರ್ವಹಣೆ ಎಂಜಿನಿಯರ್ ರಾಜು ಮುಜುಮದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.