ವಿಜಯಪುರ: ವಿಜಯಪುರ(Vijayapura) ಜಿಲ್ಲಾ ಪಂಚಾಯಿತಿ(Zilla Panchayat) ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ(Chief Executive Officer) ರಾಹುಲ ಶಿಂಧೆ(Rahul Shindhe) ಅವರು ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾ, ರೂಗಿ ಮತ್ತು ಬಬಲಾದ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ(Visits Various Gram Panchayats Officers), ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಸಿಬ್ಬಂದಿಯ ಹಾಜರಾತಿ, ಪ್ರಸ್ತುತ ಸಾಲಿನ ತೆರಿಗೆ ವಸೂಲಾತಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ವೇತನದ ಕುರಿತು ಅವರು ಪರಿಶೀಲನೆ ನಡೆಸಿದರು. ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳ ತರಬೇತಿ ಹೊಂದಿರುವ ಸದಸ್ಯರನ್ನು ಸ್ವಚ್ಚ ವಾಹಿನಿಯ ವಾಹನದ ಚಾಲಕರನ್ನಾಗಿ ನೇಮಿಸಲು ಅವರು ಸೂಚನೆ ನೀಡಿದರು.
ನಂತರ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನಿರ್ಮಾಣವಾದ ಗೋಧಾಮು ಕಾಮಗಾರಿಯನ್ನು ಪರಿಶೀಲಿಸಿ ಆಯಾ ಗ್ರಾಮದ ನರೇಗಾ ಕೂಲಿಕಾರರಿಗೆ ನಿರಂತರ ಕೆಲಸ ಒದಗಿಸಬೇಕು ಎಂದು ಪಿಡಿಓ ಗಳಿಗೆ ಸೂಚನೆ ನೀಡಿದರು.
ತಡವಲಗಾ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವೈದ್ಯರ ಮತ್ತು ಸಿಬ್ಬಂದಿಯ ಹಾಜರಾತಿಯನ್ನು ಪರಿಶೀಲಿಸಿ ಆಸ್ಪತ್ರೆಯಲ್ಲಿ ರಾತ್ರಿ ವೇಳೆಯೂ ಸಹ ವೈದ್ಯರು ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದ ರಾಹುಲ ಶಿಂಧೆ, ಆಸ್ಪತ್ರೆಯ ಎಲ್ಲಾ ಕೊಠಡಿಗಳನ್ನು ವೀಕ್ಷಿಸಿದರು. ಅಲ್ಲದೇ, ತಡವಲಗಾ ಗ್ರಾಮದ ಪಶು ಚಿಕಿತ್ಸಾಲಯ ಕೇಂದ್ರಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯ ನಿರ್ವಾಹಕ ಅಧಿಕಾರಿ ಸುನೀಲ್ ಮದ್ದಿನ, ಸಹಾಯಕ ನಿರ್ದೇಶಕ ಸಂಜಯ್ ಖಡಗೇಕರ, ಪೃಥ್ವಿರಾಜ ಪಾಟೀಲ, ಗ್ರಾಮ ಪಂಚಾಯಿತಿಯ ಅಧಿಕಾರಿ ಮಹೇಶ ನಾಯಕ, ಬಸವರಾಜ ಬಬಲಾದ, ಸಿದ್ದರಾಯ ಬಿರಾದಾರ ಮತ್ತು ಇತರರು ಉಪಸ್ಥಿತರಿದ್ದರು.