ವಿಜಯಪುರ: ಪೀರಾಪುರ-ಬೂದಿಹಾಳ(Peerapur Budihal) ಏತ ನೀರಾವರಿ ಯೋಜನೆ(Lift Irrigation Scheme) ಮಾಡಿದವರು ಮಾಜಿ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಮತ್ತು ಮಾಜಿ ಜಲಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ(S Siddharamaiah And M B Patil) ಅವರು ಎಂಬುದು ಜಗತ್ತಿಗೆ ಗೊತ್ತಿರುವ ವಿಚಾರ. ಆದರೆ ಬಿಜೆಪಿ ಶಾಸಕರಿಬ್ಬರು(Two BJP MLAs) ಈ ಯೋಜನೆಯನ್ನು ನಾನು ಮಾಡಿದ್ದು, ನಾನು ಮಾಡಿದ್ದ ಎಂದು ಪೈಪೋಟಿಗೆ ಇಳಿದಂತೆ ಕ್ರೆಡಿಟ್ ಗಾಗಿ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ವಿಜಯಪುರ- ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ ಕಾಂಗ್ರೆಸ್ ಶಾಸಕ ಸುನೀಲಗೌಡ ಪಾಟೀಲ(MLC Sunilgouda Patil) ಹೇಳಿದ್ದಾರೆ.
ವಿಜಯಪುರದಲ್ಲಿ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿಯೇ ಪ್ರಗತಿಯಲ್ಲಿದ್ದ ಮತ್ತು ಕುಂಠಿತಗೊಂಡಿದ್ದ ಹಾಗೂ ಹೊಸದಾಗಿ ನೂರಾರು ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿದ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಅವರು ಸಿಎೞ ಅವಧಿಯಲ್ಲಿ ನೀರಾವರಿ ಇಲಾಖೆಗೆ ನೀಡಿದ ಹೆಚ್ಚಿನ ಅನುದಾನವನ್ನು ನೀಡಿದ್ದರು. ಈ ಅನುದಾನವನ್ನು ಸದುಪಯೋಗ ಪಡಿಸಿಕೊಂಡು, ಕೇವಲ ಗುದ್ದಲಿ ಪೂಜೆ ಮಾಡದೆ ಸಾಕ್ಷಾತ್ ನೀರು ಹರಿಸಿದವರು ಎಂ. ಬಿ. ಪಾಟೀಲ ಅವರು. ಇದು ಇಡೀ ಜಗತ್ತಿಗೆ ಗೊತ್ತಿದೆ ಎಂದು ಹೇಳಿದರು.
ಜಾತಿಗಳ ಮಧ್ಯೆ ಜಗಳ ಹಚ್ಚಿ, ರಾಜಕೀಯ ಲಾಭ ಪಡೆಯಲು ಸಾಧ್ಯವಿಲ್ಲ. ಹಳ್ಳಿಗಳಲ್ಲಿ ಹಿಂದು- ಮುಸ್ಲಿಮರು ಸೌಹಾರ್ದತೆಯಿಂದ ಬಾಳುತ್ತಿದ್ದಾರೆ. ಮುಸ್ಲಿಂ ದೇವರ ಜಾತ್ರೆಯನ್ನು ಹಿಂದುಗಳೇ ಮಾಡುತ್ತಿದ್ದಾರೆ. ಇವರ ಮಾತು ಕೇಳಿ, ನಿಲ್ಲಿಸಲು ಆಗುವದಿಲ್ಲ. ತಿಕೋಟಾ ಪಟ್ಟಣದ ಹಾಜಿಮಸ್ತಾನ, ಬಡಕಲ್ ಸಾಹೇಬ್ ದರ್ಗಾಕ್ಕೆ ನಮ್ಮ ಹಿಂದುಗಳ ಮನೆಯಿಂದಲೇ ಮಾದಲಿಯ ನೈವೈದ್ಯೆ ಹೋಗುತ್ತದೆ. ತಿಗಣಿ ಬಿದರಿಯ ಲಾಲ್ ಸಾಹೇಬ ದೇವರ ಜಾತ್ರೆಯನ್ನು ಗ್ರಾಮದವರೆಲ್ಲ ಕೂಡಿ ಮಾಡುತ್ತಾರೆ. ಇದನೇಲ್ಲ ನಿಲ್ಲಿಸಬೇಕೇ? ಎಂದು ಶಾಸಕರು ಖಾರವಾಗಿ ಪ್ರಶ್ನಿಸಿದರು.
ಬಿಜೆಪಿ ಪಕ್ಷ ಶಿಸ್ತಿನ ಪಕ್ಷ ಎಂದು ಹೇಳುತ್ತಾರೆ. ಆದರೆ ಅತ್ಯಂತ ಅಶಿಸ್ತಿನ ವ್ಯಕ್ತಿಗಳು ಈ ಪಕ್ಷದಲ್ಲಿದ್ದಾರೆ. ಆರ್ ಎಸ್ ಎಸ್ ಸಂಘಟನೆಯವರು ಮದ್ಯ, ಮಾಂಸದ ವಿರೋಧಿಗಳು ಎಂದು ಹೇಳುತ್ತಾರೆ. ಆದರೆ ಅವುಗಳನ್ನು ಮಾರುವವರಿಗೆ ಟಿಕೆಟ್ ನೀಡುತ್ತಾರೆ ಎಂದು ವಿಜಯಪುರ ಜಿಲ್ಲೆಯಲ್ಲಿರುವ ಕೆಲವು ಬಿಜೆಪಿ ನಾಯಕರ ಹೆಸರು ಹೇಳದೇ ಟೀಕಿಸಿದ ಅವರು, ಕಾಂಗ್ರೆಸ್ ಪಕ್ಷ ನೂರು ವರ್ಷಗಳ ಇತಿಹಾಸದಲ್ಲಿ ನಂಬಿದ ತತ್ವ, ಸಿದ್ದಾಂತಗಳನ್ನು ಕೈ ಬಿಡದೆ ದೇಶವನ್ನು ಉಳಿಸಿದ ಪಕ್ಷ ಎಂದು ಹೇಳಿದರು.
ಅತೀ ಹೆಚ್ಚು ಕಾಂಗ್ರೆಸ್ ಸದಸ್ಯರನ್ನು ನೋಂದಣಿ ಮಾಡಿದ ವಿಜಯಪುರ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ವಿದ್ಯಾರಾಣಿ ತುಂಗಳ, ಜಾಫರ್ ಇನಾಮದಾರ, ವೀರೇಶ ಸಿಂಧೂರ, ದಾನಮ್ಮ ಜೀರಲಿ, ಆನಂದ ನಡುವಿನಮನಿ, ಗೀತಾಂಜಲಿ ಪಾಟೀಲ, ಗೋದಾಬಾಯಿ ವಿಮನದ, ಕಸ್ತೂರಿ ಬಿರಾದಾರ, ಶೃತಿ ಬಬಲೇಶ್ವರ, ಶ್ರೀಶೈಲ ಶೇಗುಣಶಿ, ಸವಿತಾ ಸುಂದರಪಾಲ ರಾಠೋಡ, ಹಣಮಂತ ಸೊನ್ನದ, ಶ್ರೀಕಾಂತ ಹಡಪದ, ಶ್ರೀಶೈಲ ಕೋಲಕಾರ, ನವೀನ ಇಮನದ ಕಾರ್ಯಕರ್ತರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಪ್ರಸ್ತಾವಿಕವಾಗಿ ಮಾತನಾಡಿದ ಡಾ. ಮಹಾಂತೇಶ ಬಿರಾದಾರ, ಸಾಮಾಜಿಕ ಜಾಲತಾಣಗಳ ಹಾಗೂ ಕೆಲವು ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿಗಳನ್ನು ಸೃಷ್ಠಿಸಿ, ಬಿತ್ತರಿಸಿ, ಜನರಿಗೆ ದ್ರೋಹ ಬಗೆಯುತ್ತಿರುವ ಈ ಕಾಲದಲ್ಲಿ ನಿಜಸುದ್ದಿಯನ್ನು ಜನರಿಗೆ ತಲುಪಿಸುವ ಹಾಗೂ ಸುಳ್ಳುಗಳ ಮುಖವಾಡಗಳನ್ನು ಕಳಚುವ ಕೆಲಸವನ್ನು ಯುವಕರು ಮುಖ್ಯವಾಗಿ ಮಾಡಬೇಕಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಕಾಂತ ಛಾಯಾಗೋಳ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ ಮಾತನಾಡಿದರು.
ಈ ಸಂದರ್ಭದಲ್ಲಿ ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ ಮುಂತಾದವರು ಉಪಸ್ಥಿತರಿದ್ದರು.