Corona Meeting: ಕೋವಿಡ್ 4ನೇ ಅಲೆ: ನಿಯಂತ್ರಣ ಕ್ರಮಕ್ಕಾಗಿ ವಿಜಯಪುರ ಜಿಲ್ಲಾಧಿಕಾರಿಗಳಿಂದ ತುರ್ತು ಸಭೆ

ವಿಜಯಪುರ: ಕೊರೊನಾ ನಾಲ್ಕನೇ ಅಲೆ(Corona Fourth Wave) ನಿಯಂತ್ರಣಕ್ಕಾಗಿ(Control) ವಿಜಯಪುರ ಜಿಲ್ಲಾಧಿಕಾರಿ(Vijayapura Deputy Commissioner) ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ(Dr Vijayamahantesh B Danammanavar) ಅಧಿಕಾರಿಗಳೊಂದಿಗೆ ತುರ್ತು ಸಭೆ(Officers Emergency Meeting) ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೊರೊನಾ ನಾಲ್ಕನೇ ಅಲೆಯ ನಿಯಂತ್ರಣಕ್ಕೆ ಕೈಗೊಳ್ಳಲಾಗಿರುವ  ಕ್ರಮಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಿದ ಅವರು, ನಾಲ್ಕನೇ ಅಲೆಯನ್ನು ಎದುರಿಸಲು ಅವಶ್ಯವಿರುವ ಮಾಸ್ಕ, ಸ್ಯಾನಿಟೈಜರ್ ಮತ್ತು ಔಷಧಿ ಸಾಮಗ್ರಿಗಳನ್ನು ಅಗತ್ಯ ಪ್ರಮಾಣದಲ್ಲಿ ಸಿದ್ದತೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಕೊರೊನಾ ನಾಲ್ಕನೇ ಅಲೆ ನಿಯಂತ್ರಣ ಕುರಿತು ಅಧಿಕಾರಿಗಳೊಂದಿಗೆ ವಿಜಯಪುರ ಜಿಲ್ಲಾಧಿಕಾರಿ ತುರ್ತು ಸಭೆ ನಡೆಸಿದರು

ಈಗಾಗಲೇ ನೋಡಲ್ ಅಧಿಕಾರಿಗಳು ನೇಮಕವಾಗಿದ್ದರೆ ಅವರು ಖಾಸಗಿ ಆಸ್ಪತ್ರೆಗಳ ಬೆಡ್ ಮ್ಯಾನೇಜಮೇಂಟ್ ವ್ಯವಸ್ಥೆಯನ್ನು ಸರಿಯಾಗಿ ನೋಡಿಕೊಳ್ಳಬೇಕು.  ಜಿಲ್ಲಾ ತಜ್ಞರ ಸಮಿತಿಯ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳಿಗೆ ಕಾಲಕಾಲಕ್ಕೆ ಅಗತ್ಯ ಸೂಚನೆಗಳನ್ನು ಪಾಲನೆ ಮಾಡಲು ತಿಳಿಸಬೇಕು.   ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಕೆ ಸರಾಗವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಎಂದು ಡಿಸಿ ನಿರ್ದೇಶನ ನೀಡಿದರು.

ಜಿಲ್ಲಾಸ್ಪತ್ರೆಯಲ್ಲಿ ಹಳೆಯ ಡಯಾಲಿಸಿಸ್ ವಾರ್ಡ ಬದಲಾಯಿಸಿ 10 ವೆಂಟಿಲೇಟರಗಳುಳ್ಳ ಚಿಕ್ಕಮಕ್ಕಳ ತುರ್ತು ನಿಗಾ ಘಟಕ ಮತ್ತು ಹೆಚ್ಚುವರಿ 14 ಹಾಸಿಗೆಯ ಎಚ್ಡಿಯು ಸಾಮಾನ್ಯ ತೀವ್ರ ನಿಗಾ ಘಟಕ ಸ್ಥಾಪನೆಯ ಬಗ್ಗೆ ಅಧಿಕಾರಿಗಳಿಂದ ಅವರು ಮಾಹಿತಿ ಪಡೆದರು.

ಸಾರ್ವಜನಿಕರಲ್ಲಿ ಮನವಿ

ಕೋವಿಡ್ ತಡೆಗೆ ಮಾಸ್ಕ್ ಕೂಡ ರಾಮಭಾಣವಿದ್ಧಂತೆ. ಸಾರ್ವಜನಿಕರು ಇನ್ಮುಂದೆ ಕಡ್ಡಾಯವಾಗಿ ಮಾಸ್ಕ ಧರಿಸಬೇಕು.  ಸಾಮಾಜಿಕ ಅಂತರ ಪಾಲನೆ ಮಾಡಬೇಕು.  ಮಾಸ್ಕ ಧರಿಸದೇ ಇದ್ದರೆ ದಂಡ ವಿದಿಸಲು ಕ್ರಮ ಕೈಗೊಳ್ಳಲಾಗುವುದು.  ಹೀಗಾಗಿ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ ಧರಿಸಿ, ಸಾಮಾಜಿಕ ಅಂತರ ಪಾಲನೆ ಮಾಡಿ ಜಿಲ್ಲಾಡಳಿತ ಜೊತೆ ಸಹಕರಿಸಬೇಕು ಎಂದು ಜಿಲ್ಲೆಯ ಸಾರ್ವಜನಿಕರಲ್ಲಿ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ಚೆಕ್ ಪೋಸ್ಟನಲ್ಲಿ ಬಿಗೀ ಕ್ರಮಕ್ಕೆ ಸೂಚನೆ

ಕೊರೊನಾ ನಾಲ್ಕನೇ ಅಲೆ ಬೆಂಗಳೂರು, ಮಂಗಳೂರು, ವಿಜಯಪುರ ಹೀಗೆ ಗಡಿ ಜಿಲ್ಲೆಗಳಲ್ಲಿ ಹೆಚ್ಚಿಗೆ ಕಾಣಿಸಿಕೊಳ್ಳುತ್ತಿದೆ.  ಹೀಗಾಗಿ ಯಾವುದೇ ಸಂದರ್ಭದಲ್ಲಿಯೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಬಹುದು.  ಆದ್ದರಿಂದ ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕು.  ಜಿಲ್ಲೆಯ ಎಲ್ಲಾ ಚೆಕ್ ಪೋಸ್ಟನಲ್ಲಿ ಬಿಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು.  ಗಂಟಲು ದ್ರವದ ಪರೀಕ್ಷೆಯನ್ನು ತೀವ್ರಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್‌ ಶಿಂಧೆ ಮಾತನಾಡಿ, ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಸಿದ್ದಾಪುರ, ಶಿರಾಡೋಣ, ಧೂಳಖೇಡ ಚೆಕಪೋಸ್ಟ್ ಗಳ ಮೂಲಕ ಮಹಾರಾಷ್ಟ್ರದಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಿಜಯಪುರ ಜಿಲ್ಲೆಯನ್ನು ಪ್ರವೇಶಿಸುತ್ತಾರೆ.  ಅಲ್ಲದೇ, ಮಹಾರಾಷ್ಟ್ರದ ಪಂಢರಾಪುರ, ಸೋಲಾಪುರ, ಸಾಂಗಲಿ ಕಡೆಗೆ ವಿಜಯಪುರ ಜಿಲ್ಲೆಯ ಜನ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಮಾಡುತ್ತಾರೆ.  ಕೊರೊನಾ ಹಿನ್ನೆಲೆಯಲ್ಲಿ ಜನತೆ ಮುನ್ನೆಚ್ಚರಿಕೆ ವಹಿಸಬೇಕು.  ಅಗತ್ಯವಿದ್ದರೆ ಮಾತ್ರ ಪ್ರಯಾಣ ಮಾಡಬೇಕು ಎಂದು ಸಲಹೆ ನೀಡಿದರು.

ಕೊರೊನಾ ಪಾಜಿಟೀವ್ ಪ್ರಕರಣಗಳು ಏಪ್ರಿಲ್ 19 ಮತ್ತು 20ಕ್ಕೆ ತಲಾ ಒಂದು, ಏ.23‌ ಮತ್ತು ಏ. 24ಕ್ಕೆ ತಲಾ ಮೂರು, ಏ.25ಕ್ಕೆ ಎರಡು, ಏಪ್ರೀಲ್ 26ಕ್ಕೆ 4 ಪ್ರಕರಣಗಳು ವರದಿಯಾಗಿವೆ.  ಪಾಜಿಟೀವ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಆರ್ಟಿಪಿಸಿಆರ್ ಪರೀಕ್ಷಾ ಕಿಟ್, ಮಾಸ್ಕ ಮತ್ತು ಔಷಧಿ ಅಗತ್ಯ ಪ್ರಮಾಣದಲ್ಲಿ ಲಭ್ಯವಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ, ಡಬ್ಲ್ಯುಎಚ್ಓ ಎಸ್ಎಂಓ ಡಾ. ಮುಕುಂದ ಗಲಗಲಿ, ಡಿಎಚ್ಓ ಡಾ. ರಾಜಕುಮಾರ ಯರಗಲ, ಡಿಎಸ್ಓ ಡಾ. ಕವಿತಾ ದೊಡಮನಿ, ಆರ್ ಸಿ ಎಚ್ ಅಧಿಕಾರಿ ಡಾ. ಕೆ. ಡಿ. ಗುಂಡಬಾವಡಿ, ಡಾ. ಈರಣ್ಣ ಧಾರವಾಡಕರ ಮತ್ತೀತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌