MP Jigajinagi: ಅವರ ಅಂಗಿ ನಾರುತ್ತಿದ್ದರೂ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ- ಸಂಸದ ರಮೇಶ ಜಿಗಜಿಣಗಿ ಹೇಳಿದ್ದು ಯಾರಿಗೆ ಗೊತ್ತಾ?

ವಿಜಯಪುರ: ವಿಜಯಪುರ ಬಿಜೆಪಿ ಸಂಸದ(Vijayapura BJP MP) ರಮೇಶ ಜಿಗಜಿಣಗಿ(Ramesh Jigajinagi) ಸಹನೆಗೆ ಹೆಸರಾದರೂ(Known For Patience) ಹಲವಾರು ಬಾರಿ ಅದನ್ನು ಮೀರಿ ತಮ್ಮ ಎದುರಾಳಿಗಳಿಗೆ ನೇರವಾಗಿಯೇ ಉತ್ತರ ನೀಡುವಲ್ಲಿ ನಿಸ್ಸೀಮರು(Expert).  ಈಗ ಕೂಡ ಅವರು ಭ್ರಷ್ಟಾಚಾರದ ಕುರಿತು ಬಿಜೆಪಿ ಮುಖಂಡರ ವಿರುದ್ಧವೇ ಮಾತನಾಡುವ ಸ್ವಪಕ್ಷೀಯ ನಾಯಕರೊಬ್ಬರ(Own Party Leader) ವಿರುದ್ಧ ಹೆಸರು ಹೇಳದೆ ಹರಿಹಾಯ್ದಿದ್ದಾರೆ. 

ವಿಜಯಪುರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾರಾರು ಎಷ್ಟು ರೊಕ್ಕ ಹೊಡಿತಾರ ಎಂಬುದು ನನಗೇನು ಗೊತ್ತಿಲ್ವಾ? ನಾನು ಎಂದಾದರೂ ನೀನು ರೊಕ್ಕಾ ತಿಂದಿದ್ದೀಯಾ ಎಂದು ಹೇಳಿದ್ದೇನಾ? ಎಂದು ಪತ್ರಕರ್ತರ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

 

ತಮ್ಮ ಪಕ್ಷದ ಮುಖಂಡರ ಹೆಸರು ಹೇಳದೇ ಅವರು ವಾಗ್ದಾಳಿ ನಡೆಸಿದರು.  ಮುಖ್ಯಮಂತ್ರಿಗಳ ಸಮ್ಮುಖದಲ್ಲಿಯೇ ಭ್ರಷ್ಟಾಚಾರದ ಕುರಿತು ನಿಮ್ಮವರೇ ಮಾತನಾಡಿದ್ದಾರಲ್ಲ ಎಂಬ ಪ್ರಶ್ನೆಗೆ ಗರಂ ಆದ ಅವರು,

ಅದು ಗಟ್ಸ್ ಬೇಕು.  ಇವೆಲ್ಲ ಹೇಳುತ್ತ ಹೋದರೆ ಆಗುವುದಿಲ್ಲ.  ಹಣ ಮುಂದೆ ತಂದು ಇಟ್ಟಾಗ ಏ ಇದನ್ನು ತೆಗಿ ಎಂದು ಹೇಳುವ ನೈತಿಕತೆ ಬೇಕು.  ಆವಾಗ ಗಂಡಸತನ ಬರುತ್ತದೆ.  ಅದನ್ನು ಬಿಟ್ಟು ಬರಿ ಕೂಗಾಡಿದರೆ ಆಗುವುದಿಲ್ಲ.  ರೊಕ್ಕ ಮುಂದಾ ಇಟ್ಟಾಗ ಮನಗೇ ಇದನ್ನು ತೆಗೆ ಎಂದು ಹೇಳುವ ನೈತಿಕತೆ ಇರಬೇಕು.  ಅದಕ್ಕೆ ಗಂಡಸುತನ ಅಂತಾರೆ.  ಅದನ್ನು ಬಿಟ್ಟು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಸಣ್ಣತನ ಎನಿಸುತ್ತದೆ ಎಂದು ಸಂಸದರು ವಾಗ್ದಾಳಿ ನಡೆಸಿದರು.

ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ

ನಮ್ಮ ಅಂಗಿ(ಶರ್ಟ್) ಸ್ವಚ್ಚವಾಗಿದ್ದರೆ ಮಾತನಾಡಬೇಕು.  ಆದರೆ, ಅವನ ಅಂಗಿ ಹೊಲಸು ನಾರುತ್ತಿದೆ.  ಪರಿಸ್ಥಿತಿ ಹೀಗಿರುವಾಗ ಇನ್ನೊಬ್ಬರ ಅಂಗಿ ಬಗ್ಗೆ ಮಾತನಾಡಿದರೆ ಏನು ಪ್ರಯೋಜನ? ನನಗೆ ಮಾತನಾಡುವ ನೈತಿಕತೆ ಇದೆ.  ಮಾತನಾಡುತ್ತೇನೆ.  ಬನ್ನಿ ಗಾಂಧಿ ಚೌಕಿನಲ್ಲಿಯೇ ಹೊಡೆಯುತ್ತೇನೆ.    ಇನ್ನು ನಾನು ಬಿಡುವುದಿಲ್ಲ.  ಪ್ರತಿಯೊಬ್ಬರದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದೇನೆ.  ಬರೆದು ಇಟ್ಟುಕೊಂಡಿಲ್ಲ.  ಗಾಂಧಿಚೌಕಿನಲ್ಲಿ ಒಂದು ದಿನ ಮಂಟಪ ಹಾಕಿ ಭಾಷಣ ಮಾಡುತ್ತೇನೆ. ನನ್ನ 50 ವರ್ಷಗಳ ರಾಜಕೀಯದಲ್ಲಿ ನನ್ನ ಬಳಿ ಬಂದು ದುಡ್ಡಿ ನೀಡಿದ್ದವರಿದ್ದರೆ ಬರಲಿ.  ಯಾರು ಬರುತ್ತಾರೆ ಬರಲಿ ಎಂದು ತಮ್ಮ ರಾಜಕೀಯ ಎದುರಾಳಿಗಳಿಗೆ ಸವಾಲು ಹಾಕಿದರು.

ಇದೇ ವೇಳೆ, ಕೇಂದ್ರ ಸರಕಾರ ವಿಜಯಪುರ ಜಿಲ್ಲೆಗೆ ಸುಮಾರು ಒಂದು ಲಕ್ಷ ಅನುದಾನ ನೀಡಿದೆ.  ನಾನಾ ಯೋಜನೆಗಳಡಿ ಈಗಾಗಲೇ ಸಹಸ್ರಾರು ಕೋಟಿ ರೂಪಾಯಿ ಹಣ ಖರ್ಚು ಮಾಡಿದೆ.  ವಿಜಯಪುರ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ರೂ. 1718.12 ಕೋ. ಅನುದಾನ ನೀಡಿದೆ.  ಮಹಾರಾಷ್ಟ್ರದ ಗಡಿಯಲ್ಲಿರುವ ಮಾಶ್ಯಾಳ- ಕರ್ಜಗಿ- ಇಂಡಿ- ಅಥರ್ಗಾ- ವಿಜಯಪುರ ಮತ್ತು ಕನಮಡಿ-ತಿಕೋಟಾ ಹೇಗೆ ಒಟ್ಟು 134 ಕಿ. ಮೀ. ರಸ್ತೆ ಮೇಲ್ದರ್ಜೆಗೇರಿಸುವ ಕೆಲಸ ಶೀಘ್ರದಲ್ಲಿ ಆರಂಭವಾಗಲಿದೆ.  ಸಿದ್ದಾಪುರ- ಅರಕೇರಿ- ಭೂತನಾಳ, ವಿಜಯಪುರ- ತೆಲಸಂಗ್ ಕ್ರಾಸ್, ವಿಜಯಪುರ- ಹುಬ್ಬಳ್ಳಿ 56 ಕಿ. ಮಿ. ಹಾಗೂ ಮೇಲ್ಸೇತುವೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.  ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ದ್ವಿಪಥ, ಚತುಷ್ಪಥ ಮತ್ತು ಷಟ್ಪಥ ರಸ್ತೆಗಳ ಅಭಿವೃದ್ಧಿಗೆ ಚಾಲನೆ ನೀಡಿದ್ದರು.  ನಂತರ ಅಧಿಕಾರಕ್ಕೆ ಬಂದ ಸರಕಾರಗಳು ನಿರ್ಲಕ್ಷ್ಯಿಸಿದ್ದವು.  ಈಗ ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ವಿಜಯಪುರ ಅಷ್ಟೇ ಅಲ್ಲ, ಇಡೀ ದೇಶಾದ್ಯಂತ ರಸ್ತೆ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ ಎಂದು ಕೇಂದ್ರ ಮಾಜಿ ಸಚಿವರೂ ಆಗಿರುವ ರಮೇಶ ಜಿಗಜಿಣಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಮತ್ತು ಬಿಜೆಪಿ ಹಿರಿಯ ನಾಯಕ ಅಪ್ಪು ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌