Farmers Chariot: ಒಂದು ಗಂಟೆಯಲ್ಲಿ ಹಣ ಸಂಗ್ರಹ, ಒಂದು ವರ್ಷದಲ್ಲಿ ನಿರ್ಮಾಣ, ಈಗ ಲೋಕಾರ್ಪಣೆಗೆ ಸಜ್ಜುಗೊಂಡ ಸಂಗಾಪುರ ಎಸ್. ಎಚ್. ಗ್ರಾಮದ ರಥ

ಮಹೇಶ ವಿ. ಶಟಗಾರ

ವಿಜಯಪುರ: ವಿಜಯಪುರ(Vijayapura) ಜಿಲ್ಲೆಯ(District) ಬಬಲೇಶ್ವರ ತಾಲೂಕಿನ(Babaleshwar Taluku) ಸಂಗಾಪುರ (ಎಸ್.ಎಚ್)(Sangapur S H) ಗ್ರಾಮದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಕಮರಿಮಠದ ರೈತರ ರಥ(Chariot) ಲೋಕಾರ್ಪಣೆಗೆ ಸಜ್ಜುಗೊಂಡಿದೆ.

ಮಠದ ಜಾತ್ರಾ ಮಹೋತ್ಸವ ಹಾಗೂ ಶ್ರೀ ಸಿದ್ದಲಿಂಗೇಶ್ವರರ ನೂತನ ರಥೋತ್ಸವ, ಶ್ರೀ ಚಂದ್ರಶೇಖರ ಮಹಾಸ್ವಾಮಿಗಳ ಪುಣ್ಯಾರಾಧನೆ, ಲಿಂ. ತಿಮ್ಮಜ್ಜನವರ ೨೫ನೇ ಪುಣ್ಯಾರಾಧನೆ ಮತ್ತು ಯಾತ್ರಾ ನಿವಾಸದ ಉದ್ಘಾಟನೆ ಕಾರ್ಯಕ್ರಮದ ಅಂಗವಾಗಿ ರಥೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಈ ರಥ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಸಂಗಾಪುರ ಎಸ್.ಎಚ್.ಗ್ರಾಮದ ರೈತರೆ ಭರಿಸಿರುವುದು ಗ್ರಾಮದ ಸಮೃದ್ಧಿಯ ಸಂಕೇತವಾಗಿದೆ.

ಸಂಗಾಪುರ ಎಸ್ ಎಚ್ ಗ್ರಾಮದ ಪ್ರವೇಶ ದ್ವಾರ

ಸಾಮಾನ್ಯವಾಗಿ ರಥ ನಿರ್ಮಿಸಲು ಆ ಗ್ರಾಮದವರಷ್ಟೇ ಅಲ್ಲ ಬೇರೆ ಊರಿನ ಭಕ್ತರು, ಸಮಾಜ ಸೇವಕರು, ಉದ್ಯಮಿಗಳು ಹಾಗೂ ಜನಪ್ರತಿನಿಧಿಗಳಿಂದ ಗ್ರಾಮಸ್ಥರ ದೇಣಿಗೆ ಸಂಗ್ರಹಿಸುವುದು ವಾಡಿಕೆ ಆದರೆ ಸಂಗಾಪುರ ಎಸ್.ಎಚ್.ಗ್ರಾಮಸ್ಥರು ಇದಕ್ಕೆ ಹೊರತಾಗಿದ್ದಾರೆ. ಎರಡು ವರ್ಷಗಳ ಹಿಂದೆ ಕೊರೊನಾ ಆರಂಭಕ್ಕೂ ಮುಂಚೆ ನಡೆದ ಜಾತ್ರಾ ಮಹೋತ್ಸವದಲ್ಲಿ ಆಯೋಜಕರು ನೂತನ ರಥ ನಿರ್ಮಾಣದ ಘೋಷಣೆ ಮಾಡಿದರು. ಈ ಘೋಷಣೆಯಾದ ಒಂದು ಗಂಟೆಯಲ್ಲಿಯೇ ರಥ ನಿರ್ಮಾಣಕ್ಕೆ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ದೇಣಿಗೆ ಘೋಷಣೆ ಮಾಡಿದರು. ಆಗ ಸಂಗ್ರಹವಾದ ಮೊತ್ತ ರೂ. 70 ಲಕ್ಷ ಹಣ ಸಂಗ್ರಹಿಸಿ ಕಳೆದ ವರ್ಷ ದಾವಣಗೆರೆ ಜಿಲ್ಲೆ ಹರಪ್ಪನಹಳ್ಳಿಯ ಶಿಲ್ಪಿಗಳಿಗೆ ರಥ ನಿರ್ಮಾಣದ ಜವಾಬ್ದಾರಿ ನೀಡಲಾಯಿತು ಎನ್ನುತ್ತಾರೆ ಗ್ರಾಮದ ಮುಖಂಡ ರಮೇಶ ಬಡ್ರಿ.  ರಥ ಶಿಲ್ಪಿಗಳಾದ ಮರಕುಂಬಿ ಕಾಶೀನಾಥ ನಾ. ಬಡಿಗೇರ ಮತ್ತು ಹರಪ್ಪನಹಳ್ಳಿಯ ಅಪ್ಪಣ್ಣ ಕಾ. ಆಚಾರ್ಯ ಅವರ ಕೈಯಲ್ಲಿ ಸಮೃದ್ಧಿಯ ಸಂಕೇತವಾದ ರಥ ರೂಪಗೊಂಡು ಈಗ ಲೋಕಾರ್ಪಣೆಗೆ ಸಿದ್ಧವಾಗಿದೆ.

ಈ ರಥದಲ್ಲಿ ಬಂಥನಾಳ ಪರಂಪರೆಯ ಎಲ್ಲಾ ಮಠಾಧೀಶರ ಚಿತ್ರಗಳನ್ನು ಕೆತ್ತಲಾಗಿದ್ದು, ನವದುರ್ಗೆಯರು, ನವಗ್ರಹಗಳು, ಅಷ್ಟದಿಕ್ಪಾಲಕರು, ತ್ರೀಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರ ಚಿತ್ರಗಳು ಕಣ್ಮನ ಸೆಳೆಯುತ್ತಿವೆ. ಸುಮಾ 42 ಅಡಿ ಎತ್ತರದ ಸಾಗುವಾನಿ ಕಟ್ಟಿಗೆಯಿಂದ ನಿರ್ಮಿಸಲಾಗಿರುವ ರಥ ಇದಾಗಿದೆ ಎಂದು ಸಂಗಾಪುರ ಎಸ್.ಎಚ್. ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ಕಮರಿ ಮಠದ ಮಠಾಧೀಶರಾದ ಶ್ರೀ ಅಭಿನವ ಸಿದ್ಧಲಿಂಗ ಮಹಾಸ್ವಾಮಿಗಳು ತಿಳಿಸಿದ್ದಾರೆ.

ದೇಣಿಗೆ ಸಂಗ್ರಹದ ವೈಶಿಷ್ಟ್ಯ

ಸಂಗಾಪುರ ಎಸ್.ಎಚ್.ಗ್ರಾಮದಲ್ಲಿ ದೇಣಿಗೆ ಸಂಗ್ರಹದ ವಿಶಿಷ್ಟ ಆಚರಣೆಯೊಂದಿದೆ. ಪ್ರತಿವರ್ಷ ಜಾತ್ರೆಯ ಸಂದರ್ಭದಲ್ಲಿ ಎಲ್ಲ ಗ್ರಾಮಗಳಂತೆ ಮನೆಮನೆಗೆ ತೆರಳಿ ದೇಣಿಗೆ ಸಂಗ್ರಹಿಸುವ ಪದ್ಧತಿ ಇಲ್ಲಿ ಇಲ್ಲ. ಬದಲಾಗಿ ಜಾತ್ರೆಯ ಸಂದರ್ಭದಲ್ಲಿ ಮಠದ ಬಳಿ ಇರುವ ಆಲದ ಮರಕ್ಕೆ ಜೋಳಿಗೆಯೊಂದನ್ನು ಕಟ್ಟಿರುತ್ತಾರೆ. ನಾಲ್ಕೆöÊದು ದಿನ ಕಟ್ಟಲಾಗುವ ಈ ಜೋಳಿಗೆಗೆ ಭಕ್ತರು ತಮ್ಮಿಷ್ಟದಂತೆ ದೇಣಿಗೆಯನ್ನು ಹಾಕುವುದು ಇಲ್ಲಿಯ ವಾಡಿಕೆಯಾಗಿದೆ.

ಸಂಗಾಪುರ ಎಸ್. ಎಚ್. ಗ್ರಾಮದ ಮಠದ ಆವರಣದಲ್ಲಿರುವ ಆಲದ ಮರ

ಕೇವಲ ಏಳೆಂಟು ವರ್ಷಗಳ ಹಿಂದೆ ಬರದಿಂದ ತತ್ತರಿಸಿದ್ದ ಸಂಗಾಪುರ ಎಸ್.ಎಚ್. ಗ್ರಾಮಸ್ಥರು ಸಾಲಕ್ಕೂ ಸಿಲುಕಿದ್ದರು. ಆದರೆ, ಈ ಹಿಂದೆ ಎಸ್.ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಜಲಸಂಪನ್ಮೂಲ ಸಚಿವರು ಮತ್ತು ಈ ಭಾಗದ ಹಾಲಿ ಶಾಸಕರಾದ ಎಂ. ಬಿ. ಪಾಟೀಲ ಅವರು ನೀರಾವರಿ ಯೋಜನೆಗಳನ್ನು ಕೈಗೊಂಡ ಪರಿಣಾಮ ತಮ್ಮ ಆರ್ಥಿಕ ಪರಿಸ್ಥಿತಿ ಸುದಾರಿಸಿದೆ ಎಂಬುದು ಇಲ್ಲಿನ ರೈತ ಮುಖಂಡ ರಮೇಶ ಶಂಕ್ರೆಪ್ಪ ಬರಗಿ ತಿಳಿಸಿದರು.

ಗ್ರಾಮಗಳಲ್ಲಿ ದೇವಸ್ಥಾನಗಳು ಮತ್ತು ಮಠಗಳ ರಥಗಳು ಆ ಹಳ್ಳಿಗಳ ಅಭಿವೃದ್ಧಿಯ ಸೂಚಕ ಎಂದೇ ಹೇಳಬಹುದು. ಕೇವಲ ಏಳೆಂಟು ವರ್ಷಗಳ ಹಿಂದೆ ಗುಳೆ ಹೋಗುತ್ತಿದ್ದ ಸಂಗಾಪುರ ಎಸ್.ಎಚ್. ಗ್ರಾಮದಲ್ಲಿ ಈಗ ರೈತರೇ ಸ್ವಂತ ಖರ್ಚಿನಲ್ಲಿ ನೂತನ ರಥ ನಿರ್ಮಿಸಿರುವುದು ಈ ಗ್ರಾಮ ಅಭಿವೃದ್ಧಿಯಾಗಿರುವುದಕ್ಕೆ ಸಾಕ್ಷಿಯಾಗಿದೆ ಎನ್ನಬಹುದು.

ಈ ಬಾರಿ ಈ ಜಾತ್ರಾ ಮಹೋತ್ಸವದಲ್ಲಿ ಮೇ 2 ರಂದು ಮಾಜಿ ಮುಖ್ಯಮಂತ್ರಿಗಳಾದ ಎಸ್.ಸಿದ್ಧರಾಮಯ್ಯ, ಕೆ.ಪಿ.ಸಿ.ಸಿ. ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಸೇರಿದಂತೆ ನಾನಾ ಮುಖಂಡರು ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಮೇ 3 ರಂದು ಜಾತ್ರೆಯ ಕೊನೆಯ ದಿನ ರಥೋತ್ಸವ ಕಾರ್ಯಕ್ರಮದಲ್ಲಿ ಈ ರಥ ಲೋಕಾರ್ಪಣೆಯಾಗಲಿದೆ.

Leave a Reply

ಹೊಸ ಪೋಸ್ಟ್‌