Devotees Math: ನೊಂದವರು, ಅನಾಥರಿಗೆ ತಾಯಿ, ಅಂಧರಿಗೆ ಕಣ್ಣು, ಕುಷ್ಠ ರೋಗಿಗಳಿಗೆ ವೈದ್ಯ, ರಾಗಿ, ವಿದ್ಯಾರ್ಥಿಗಳಿಗೆ ಶಿಕ್ಷಕರಾಗಿ ದುಡಿದ ಸಂತರ ಈ ಮಠದ ಮಹಿಮೆ ಅಪಾರ

ಮಹೇಶ ವಿ. ಶಟಗಾರ

ವಿಜಯಪುರ: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್. ಎಚ್. ಗ್ರಾಮದಲ್ಲಿರುವ ಶ್ರೀ ಸಿದ್ಧಲಿಂಗೇಶ್ವರ ಕಮರಿಮಠ ಭಕ್ತರ ಪ್ರೀತಿಯ ಮಠ ಎಂದೇ ಹೆಸರುವಾಸಿಯಾಗಿದೆ.  ಭಕ್ತರ ಒತ್ತಾಯದ ಹಿನ್ನೆಲೆಯಲ್ಲಿ ಆರಂಭವಾದ ಈ ಮಠ ಈ ಗ್ರಾಮದ ಮೊದಲ ಮಠವೂ ಹೌದು.  ಸ್ವಾಮೀಜಿಯೊಬ್ಬರ ಜನಸೇವೆಗೆ ಮನಸೋತ ಗ್ರಾಮಸ್ಥರು ಆ ಸ್ವಾಮೀಜಿಯನ್ನು ತಮ್ಮ ಗ್ರಾಮಕ್ಕೆ ಪ್ರೀತಿಯಿಂದ ಆಹ್ವಾನಿಸಿ ಅಲ್ಲಿಯೇ ಮಠ ಸ್ಥಾಪನೆಗೆ ಕಾರಣರಾಗಿದ್ದಾರೆ.  ಭಕ್ತರ ಮಠದ ಜಾತ್ರೆ ಈಗ ಆರಂಭವಾಗಿದ್ದು, ಮೇ 3ರ ವರೆಗೆ ನಡೆಯಲಿದೆ. 

ಈ ಮಠದ ಹಿನ್ನೆಲೆಯಲ್ಲಿ ಗಮನಿಸುತ್ತ ಹೋದರೆ ಅಲ್ಲಿ ಈ ಮಠದ ಸಂಸ್ಥಾಪಕರಾದ ಲಿಂ. ಚಂದ್ರಶೇಖರ ಮಹಾಸ್ವಾಮಿಗಳ ಜನ, ಜಾನುವಾರು, ಪ್ರಾಣಿ, ಪಕ್ಷಿಗಳಿಗೆ ಮಾಡಿದ ಸೇವೆಯ ಒಂದೊಂದೆ ಹೃದಯಸ್ಪರ್ಷಿ ಕಾರ್ಯಗಳು ಅನಾವರಣಗೊಳ್ಳುತ್ತ ಹೋಗುತ್ತವೆ.  ಅನಾಥರಿಗೆ ತಾಯಿಯಾಗಿ, ರೋಗಿಗಳಿಗೆ ವೈದ್ಯರಾಗಿ, ಕಡುಬಡವರಿಗೆ ಪೋಷಕರಾಗಿ ಬಹುಪಯೋಗಿ ಕೆಲಸ ಮಾಡಿದ ರೀತಿ ಎಂದೆಂದಿಗೂ ಎಲ್ಲರಿಗೂ ಸ್ಪೂರ್ತಿಯ ಸೆಲೆಯಾಗಿ ನಿಲ್ಲುತ್ತವೆ.  ನಾನಾ ಸಮಾಜಮುಖಿ ಕಾರ್ಯಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ.

ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು ಮೂಲತಃ ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದ ಶರಣ ದಂಪತಿಯಾದ ಶಿವಶರಣ ರೇವಪ್ಪ ಮತ್ತು ಶಿವ ಶರಣೆ ಭೀಮಾದೇವಿ ಅವರ ಪುತ್ರರು.  01.01.1938ರಲ್ಲಿ ಜನಿಸಿದ ಅವರು,  ಬಾಲ್ಯದಲ್ಲಿಯೇ ಶರಣರ ತತ್ವಗಳಡೆಗೆ ಆಕರ್ಷಿತರಾಗಿ ಕಾಯಕವೇ ಕೈಲಾಸ ಎಂಬ ನಾಣ್ಣುಗೆ ತಕ್ಕಂತೆ ಬದುಕುತ್ತಿದ್ದರು.  ಪರರ ಸೇವೆಯಲ್ಲಿ ದೇವರನ್ನು ಕಾಣುವ ಸ್ವಭಾವವನ್ನು ಮೈಗೂಡಿಸಿಕೊಂಡಿದ್ದ ಶ್ರೀಗಳು ಆಧ್ಯಾತ್ಮದ ಜೊತೆಯಲ್ಲಿ ಕೃಷಿ ಕಾಯಕವನ್ನು ಮಾಡುತ್ತಿದ್ದಾಗ ಲಚ್ಯಾಣ ಶ್ರೀ ಸಿದ್ದಲಿಂಗ ಮಹಾರಾಜ ಸಂಪ್ರದಾಯದ ಶ್ರೀ ಸದ್ಗುರು ಮರುಳಸಿದ್ಧರ ಸಂಪರ್ಕಕ್ಕೆ ಬಂದು ಲಿಂಗದೀಕ್ಷೆ ಪಡೆದರು.

ಲಿಂ. ಚಂದ್ರಶೇಖರ ಮಹಾಸ್ವಾಮಿಗಳು

ಬಳಿಕ ವಿಜಯಪುರ ನಗರದಲ್ಲಿ ಲಿಂ. ವೇದಾಂತ ಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಜ್ಞಾನ ಯೋಗಾಶ್ರಮ ಆಶ್ರಮದಲ್ಲಿ ಗೋಪಾಲಕರಾಗಿ ಕೆಲಸ ಮಾಡಿದರು.  ಅಲ್ಲದೇ, ಅಲ್ಲಿ ಸಸಿಗಳನ್ನು ನೆಡುವ ಮೂಲಕ ಹಸಿರು ವಾತಾವರಣ ಸೃಷ್ಠಿಸಿದರು.  ಶ್ರೀ ಸಿದ್ಧೇಶ್ವರ ಶ್ರೀಗಳ ಒಡನಾಟ ಹೊಂದಿದ್ದ ಇವರು, ಹಿರೇ ರೂಗಿಯ ಶ್ರೀ ಬಸವಲಿಂಗ ಗಿರಿಜಾ ಮಾತೆಯವರಿಂದ ಸನ್ಯಾಸ ದೀಕ್ಷೆ ಪಡೆದರು.

ನಂತರ ಜನ ಮತ್ತು ಜಗದ್ದೋರಾಕ್ಕಾಗಿ ಕೊಲ್ಹಾರ ತಾಲೂಕಿನ ಹಳ್ಳದ ಗೆಣ್ಣೂರಿನಲ್ಲಿ ಬಂದು ಅಲ್ಲಿಯ ಆರಂಭದಲ್ಲಿ ತಮ್ಮ ನೆಚ್ಚಿನ ಮರುಳಸಿದ್ಧರ ಗದ್ದುಗೆಯೊಂದನ್ನು ನಿರ್ಮಿಸಿ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತಲ್ಲೀನರಾಗುತ್ತಿದ್ದರು.

ಮಠವಿಲ್ಲದ ಊರಿಗೆ ಶ್ರೀಗಳನ್ನು ಆಹ್ವಾನಿಸಿ ಮಠ ಸ್ಥಾಪಿಸಿದ ಭಕ್ತರು

ಈ ಊರದ ಪಕ್ಕದಲ್ಲಿರುವ ಸಂಗಾಪುರ ಎಸ್. ಎಚ್. ಗ್ರಾಮದಲ್ಲಿ ದೇವಸ್ಥಾನಗಳಿದ್ದರೂ ಒಂದೂ ಮಠವಿರಲಿಲ್ಲ.  ಹೀಗಾಗಿ ಇಲ್ಲಿನ ಭಕ್ತರು ಹಳ್ಳದ ಗೆಣ್ಣೂರಿಗೆ ಶ್ರೀಗಳನ್ನು ಭೇಟಿಯಾಗಿ 10 ವರ್ಷಗಳ ಕಾಲ ಪ್ರವಚನ, ಸತ್ಸಂಗಳಲ್ಲಿ ಪಾಲ್ಗೋಳ್ಳುತ್ತಿದ್ದರು.  ಈ ಭಕ್ತಿ ಎಲ್ಲಿಗೆ ಬಂತೆಂದರೆ ಸಂಗಾಪುರ ಎಸ್. ಎಚ್. ಗ್ರಾಮಸ್ಥರು ತಮ್ಮೂರಿನಲ್ಲಿ ಒಂದೂ ಮಠವಿಲ್ಲ.  ತಾವು ಬಂದು ಮಠ ಸ್ಥಾಪಿಸಿ ನಮಗೂ ತಮ್ಮಿಂದ ಪುಣ್ಯ ಸಿಗುವಂತೆ ಮಾಡಿ ಎಂದು ಪಟ್ಟು ಹಿಡಿದರು.  ಆಗ, ಭಕ್ತರ ಪ್ರೀತಿಯ ಭಕ್ತಿಗೆ ಮನಸೋತ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು 1984ರಲ್ಲಿ ಮೊದಲಿಗೆ ಕೇವಲ 20 ಗುಂಟೆಯಲ್ಲಿ ಸಣ್ಣದೊಂದು ಮಠ ಸ್ಥಾಪಿಸಿದರು.  ಅಲ್ಲದೇ, ಅದಕ್ಕೆ ಶ್ರೀ ಲಚ್ಯಾಣ ಸಿದ್ಧಲಿಂಗೇಶ್ವರ ಕಮರಿಮಠ ಸಂಗಾಪುರ ಎಸ್. ಎಚ್. ಮಠ ಎಂದು ಹೆಸರಿಟ್ಟರು.  ಈಗ ಈ ಮಠ ಭಕ್ತರ ಭಕ್ತಿಯ ಪ್ರತೀಕವಾಗಿ ಆರು ಎಕರೆಯಷ್ಟು ವಿಸ್ತೀರ್ಣವಾಗಿರುವುದು ಗಮನಾರ್ಹವಾಗಿದೆ.

ಕಳೆದ ಸುಮಾರು 38 ವರ್ಷಗಳಲ್ಲಿ ಶ್ರೀಗಳು ನಡೆಸಿದ ತ್ರಿವಿಧ ದಾಸೋಹ ಇಲ್ಲಿನ ಗ್ರಾಮದ ಜನಮಾನಸದಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದೆ.  ತಾವು ಸ್ವತಃ ಉಪವಾಸವಿದ್ದರೂ, ತಮ್ಮನ್ನು ನಂಬಿದ ಬಡವರು, ಅನಾಥ ಜನರು, ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಯಾವತ್ತೂ ಉಪವಾಸ ಇರಲು ಬಿಡಲಿಲ್ಲ.  ತಾವು ರೊಟ್ಟಿಯ ಜೊತೆ ಕೇವಲ ಬೇವಿನ ತಪ್ಪಲನ್ನು ಸೇವಿಸುತ್ತ, ಭಕ್ತರು ತಮಗೆ ನೀಡುತ್ತಿದ್ದ ಸಿಹಿಯಾದ ಪದಾರ್ಥಗಳನ್ನು ಬಡವರಿಗೆ, ಪ್ರಾಣಿ ಮತ್ತು ಪಕ್ಷಿಗಳಿಗೆ ಉಣಬಡಿಸುವ ಮೂಲಕ ಸಕಲ ಜೀವಿಗಳಿಗೆ ತಾಯಿಯ ರೂಪದಲ್ಲಿ ತೋರಿದ ಪ್ರೀತಿಯ ಕಾಳಜಿ ಇಂದಿಗೂ ಸ್ಮರಣೀಯವಾಗಿದೆ.

 

 

ಅನಾಥರಿಗೆ, ಕಡು ಬಡವರಿಗೆ ಕೇವಲ ಆಶ್ರಯ ನೀಡಿದ್ದಷ್ಟೇ ಅಲ್ಲ, ಅದರ ಜೊತೆ 130ಕ್ಕೂ ಹೆಚ್ಚು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ನೆರವಾಗಿದ್ದಾರೆ.  ಮಠಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಜಾತಿ ಪದ್ಧತಿಯನ್ನು ತೊರೆದು ಶಿವಾ ಎಂದು ಮಠದೊಳಗೆ ಬನ್ನಿ ಎಂದು ತಮ್ಮ ಶಿಷ್ಯ ವರ್ಗಕ್ಕೆ ಇವರು ಸಾರುತ್ತಿದ್ದ ಶ್ರೀಗಳು ಖಾಲಿ ಕೂಡ್ರುವದಕ್ಕಿಂತ ಕೂಲಿ ಮಾಡುವುದು ಲೇಸು ಎಂದು ಹೇಳುತ್ತಿದ್ದ ಮಾತುಗಳು ಮತ್ತು ಮಾತಿಗಿಂತ ಹೆಚ್ಚಾಗಿ ಕೃತಿಯಲ್ಲಿ ತಮ್ಮ ಆಚಾರ ವಿಚಾರಗಳನ್ನು ವ್ಯಕ್ತಪಡಿಸುತ್ತಿದ್ದ ರೀತಿ ಎಲ್ಲರಿಗೂ ಸ್ಪೂರ್ತಿದಾಯಕವಾಗಿವೆ ಎನ್ನುತ್ತಾರೆ ಶ್ರೀಮಠದ ಶಿಷ್ಯರಲ್ಲೊಬ್ಬರಾದ ಕುಬಕಡ್ಡಿ ಗ್ರಾಮದ ಶ್ರೀಶೈಲ ಬಿರಾದಾರ.

ಸಂಸಾರದಲ್ಲಿ ನೊಂದವರಿಗೆ, ಅನಾಥರಿಗೆ ಅನಾಥರಿಗೆ ತಾಯಿಯಾಗಿ, ಅಂಧರಿಗೆ ಊರುಗೋಲಾಗಿ, ಕುಷ್ಠ ರೋಗಿಗಳಿಗೆ ವೈದ್ಯರಾಗಿ, ವಿದ್ಯಾರ್ಥಿಗಳಿಗೆ ಶಿಕ್ಷಕರಾಗಿ ಸೇವೆ ಮಾಡುತ್ತ ಪರರ ಸುಖದಲ್ಲಿ ದೇವರನ್ನು ಕಾಣು ಎಂಬ ತತ್ವದಡಿ ಕಾರ್ಯೋನ್ಮುಖರಾಗಿದ್ದರು.  ವೈದ್ಯರೂ ಮುಟ್ಟಲು ಹಿಂಜರಿಯುವ ರೋಗಿಗಳ ದಿನನಿತ್ಯದ ಕ್ರಿಯಾಕರ್ಮಗಳಿಗೆ ನೆರವಾಗುವ ಮೂಲಕ ಮಾತೃಹೃದಯಿಯಾಗಿದ್ದರು.  ರೋಗಿಗಳಿಗೆ ಹಸಿವಾದರೆ ಸ್ವತಃ ರೊಟ್ಟಿ, ಚಟ್ನಿ ತಯಾರಿಸಿ ಅಡುಗೆ ಮಾಡಿ ಉಣಬಡಿಸುತ್ತಿದ್ದದ್ದು ಇವರ ಪ್ರೀತಿಗೆ ಸಾಕ್ಷಿಯಾಗಿದೆ ಎನ್ನುತ್ತಾರೆ ಗ್ರಾಮದ ಮುಖಂಡರಾದ ರಮೇಶ ಬಡ್ರಿ.

ತಮಗೆ ವಯಸ್ಸಾಗುತ್ತಿರುವ ಹಿನ್ನೆಲೆಯಲ್ಲಿ ಶ್ರೀಗಳು 2015ರಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯನಗರದ ಶ್ರೀ ಅಭಿವನ ಸಿದ್ದಲಿಂಗ ಶ್ರೀಗಳನ್ನು ತಮ್ಮ ಪಟ್ಟದ ಶಿಷ್ಯರನ್ನಾಗಿ ಮಾಡಿಕೊಂಡಿದ್ದರು.

ತಮ್ಮ ಶಿಷ್ಯವರ್ಗಕ್ಕೆ ಭಕ್ತಿ, ಜ್ಞಾನ, ತ್ಯಾಗ, ಕರುಣೆ, ಶಿಸ್ತುಗಳೆಂಬ ಪರಿಪೂರ್ಣ ಅಂಶಂಗಳನ್ನು ಕಲಿಸಿದ ಗುರುಗಳು, ಬಡವ ಬಲ್ಲಿದ, ಮೇಲು ಕೀಳುಗಳೆನ್ನದೆ ಎಲ್ಲರನ್ನು ಏಕೋಭಾವದಿಂದ ಕಂಡ ಮಹಾನ್ ಸಂತರಾಗಿದ್ದರು.  ಶ್ರೀ ಚಂದ್ರಶೇಖರ ಶ್ರೀಗಳು ತಮ್ಮ 84ನೇ ವಯಸ್ಸಿನಲ್ಲಿ 01.05.2021ರಂದು ಲಿಂಗೈಕ್ಯರಾದರು.

ಈಗ ಈ ಶಿಷ್ಯರ ನೇತೃತ್ವದಲ್ಲಿ ಚಂದ್ರಶೇಖರ ಸ್ವಾಮೀಜಿಗಳ ಪ್ರಥಮ ಪುಣ್ಯಾರಾಧನೆ ಕಾರ್ಯಕ್ರಮ ನಡೆಯುತ್ತಿದೆ.  ಒಂದು ವಾರ ನಡೆಯುತ್ತಿರುವ ಶ್ರೀ ಸಿದ್ದಳಿಂಗೇಶ್ವರ ಕಮರಿಮಠದ ಜಾತ್ರಾ ಮಹೋತ್ಸವದ ನಾಲ್ಕನೇ ದಿನವಾದ ಮೇ 2 ರಂದು ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಸ್ಥಳೀಯ ಬಬಲೇಶ್ವರ ಶಾಸಕ ಎಂ. ಬಿ. ಪಾಟೀಲ ಸೇರಿದಂತೆ ನಾನಾ ಮುಖಂಡರು ಪಾಲ್ಗೋಳ್ಳುತ್ತಿದ್ದಾರೆ.

ಒಂದೂ ಮಠವಿಲ್ಲದ ಊರಿನಲ್ಲಿ ಮಠ ನಿರ್ಮಿಸಿ ಶರಣರ ತತ್ವಾದರ್ಶದಂತೆ ನಡೆದು ಅತೀ ಸಣ್ಣ ಗ್ರಾಮ ಸಂಗಾಪುರ ಎಸ್. ಎಚ್. ಈಗ ನಾಡಿನಾದ್ಯಂತ ಹೆಸರು ಮಾಡಲು ಕಾರಣರಾದ ಶ್ರೀ ಚಂದ್ರಶೇಖರ ಮಹಾಸ್ವಾಮಿಜಿಗಳ ಕಾರ್ಯ ಎಂದೆಂದಿಗೂ ಅಜರಾಮರವಾಗಿವೆ ಎನ್ನುತ್ತಾರೆ ಮಠದ ಹಾಲಿ ಗುರುಗಳಾಗಿರುವ ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು.

Leave a Reply

ಹೊಸ ಪೋಸ್ಟ್‌