Green Village: ಬರದ ನಾಡನ್ನು ಹಸಿರು ಬೀಡನ್ನಾಗಿ ಮಾಡಿದವರ ಸ್ವಾಗತಕ್ಕೆ ಸಜ್ಜಾಗಿದೆ ಸಂಗಾಪುರ ಎಸ್. ಎಚ್.- ಅಚ್ಚರಿ ಎನಿಸುವಂತಿದೆ ಈ ಗ್ರಾಮದ ಅಭಿವೃದ್ಧಿ

ಮಹೇಶ ವಿ. ಶಟಗಾರ

ವಿಜಯಪುರ, 01- ಬರದ ನಾಡನ್ನು ಹಸಿರು ಬೀಡನ್ನಾಗಿ ಮಾಡಲು ಕಾರಣರಾದ ನಾಯಕರನ್ನು ಆಹ್ವಾನಿಸಿ ಗೌರವಿಸಲು ಸಂಗಾಪುರ ಎಸ್. ಎಚ್. ಗ್ರಾಮಸ್ಥರು ಸಜ್ಜಾಗಿದ್ದಾರೆ. 

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್. ಎಚ್. ಗ್ರಾಮದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಕಮರಿಮಠದ ಜಾತ್ರಾ ಮಹೋತ್ಸವ ಹಾಗೂ ಶ್ರೀ ಸಿದ್ದಲಿಂಗೇಶ್ವರರ ನೂತನ ರಥೋತ್ಸವ, ಶ್ರೀ ಚಂದ್ರಶೇಖರ ಮಹಾಸ್ವಾಮಿಗಳ ಪುಣ್ಯಾರಾಧನೆ, ಲಿಂ. ತಿಮ್ಮಜ್ಜನವರ 25ನೇ ಪುಣ್ಯಾರಾಧನೆ ಮತ್ತು ಯಾತ್ರಾ ನಿವಾಸದ ಉದ್ಘಾಟನೆ ಕಾರ್ಯಕ್ರಮದ ಅಂಗವಾಗಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ಕಾರ್ಯಕ್ರಮಕ್ಕೆ ಸಜ್ಜಾಗುತ್ತಿರುವ ವೇದಿಕೆ

 

ಈ ಕಾರ್ಯಕ್ರಮದ ಮಹತ್ವದ ಘಟ್ಟವಾದ ಯಾತ್ರಾ ನಿವಾಸದ ಉದ್ಘಾಟನೆ ಕಾರ್ಯಕ್ರಮ ಸೋಮವಾರ ಮೇ 2 ರಂದು ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಸೇರಿದಂತೆ ನಾನಾ ಕಾಂಗ್ರೆಸ್ ಶಾಸಕರು ಮತ್ತು ಮುಖಂಡರು ಪಾಲ್ಗೋಳ್ಳುತ್ತಿದ್ದಾರೆ.  ಕಾರ್ಯಕ್ರಮಕ್ಕಾಗಿ ವೇದಿಕೆ ಸಿದ್ಧಪಡಿಸಲಾಗಿದ್ದು, ಯಾತ್ರಾ ನಿವಾಸವೂ ಲೋಕಾರ್ಪಣೆಗೆ ಸಜ್ಜಾಗಿದೆ.

ಸಿದ್ಧರಾಮಯ್ಯ, ಎಂ. ಬಿ. ಪಾಟೀಲ ಆಹ್ವಾನದ ಹಿಂದಿದೆ ಕೃತಜ್ಞತೆ ಭಾವ

ಸಂಗಾಪುರ ಎಸ್. ಎಚ್. ಗ್ರಾಮದಲ್ಲಿ ಪ್ರತಿ ವರ್ಷ ಫೆಬ್ರವರಿಯಲ್ಲಿ ಶ್ರೀ ಸಿದ್ಧಲಿಂಗೇಶ್ವರ ಕಮರಿಮಠದ ಜಾತ್ರಾ ಮಹೋತ್ಸವ ನಡೆಯುತ್ತಿದೆ.  ಆದರೆ, ಈ ಬಾರಿ ಉತ್ಸವಕ್ಕೆ ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಮತ್ತು ಎಂ. ಬಿ. ಪಾಟೀಲ ಹಾಗೂ ಇತರ ನಾಯಕರ ಆಹ್ವಾನದ ಹಿಂದೆ ರೈತರ ಕೃತಜ್ಞತಾ ಭಾವವಿದೆ.  ಇದಕ್ಕೆ ಕಾರಣ ಈ ಊರಿನ ಈಗಿನ ಪರಿಸ್ಥಿತಿ.

ಲೋಕಾರ್ಪಣೆಗೆ ಸಜ್ಜಾದ ರೈತರ ರಥ

ಗ್ರಾಮದ ಮುಖಂಡರಾದ ಮಲ್ಲು ದಳವಾಯಿ ಹೇಳುವಂತೆ ಸಂಗಾಪುರ ಎಸ್. ಎಚ್. ಗ್ರಾಮದಲ್ಲಿ 400 ಮನೆಗಳಿವೆ.  ಸುಮಾರು 3000 ಜನಸಂಖ್ಯೆಯಿದೆ. ನಮ್ಮದು ಪುಟ್ಟ ಗ್ರಾಮ.  ಆದರೆ, ಈಗ ಈ ಸಣ್ಣ ಗ್ರಾಮಕ್ಕೆ ದೊಡ್ಡ ನಾಯಕರ ದಂಡು ಬರುತ್ತಿದೆ.  ಕೇವಲ ಏಳೆಂಟು ವರ್ಷಗಳ ಹಿಂದೆ ನಮ್ಮ ಊರು ಬರದಿಂದ ತತ್ತರಿಸಿತ್ತು.  ನನ್ನ 60 ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದ ದ್ರಾಕ್ಷಿ ಮತ್ತೀತರ ಬೆಳೆಗಳು 2008ರಿಂದಲೇ ಒಣಗಿ ಹಾಳಾಗಿ ಹೋಗಿದ್ದವು.  35 ವರ್ಷಗಳಲ್ಲಿ ಸುಮಾರು 100 ಬೋರವೆಲ್ ಕೊರೆಸಿದ್ದೆ.  ಎಲ್ಲವೂ ಬತ್ತಿ ಹೋಗಿದ್ದವು.  ಅವುಗಳಲ್ಲಿ ಸುಮಾರು 10 ಬೋರವೆಲ್ ಗಳು ಒಂದು ಸಾವಿರ ಅಡಿಯವರೆಗೆ ಆಳವಾಗಿದ್ದವು.  ಆದರೆ, ಅವುಗಳೆಲ್ಲ ನಿಷ್ಪ್ರಯೋಜಕವಾಗಿದ್ದವು.  ಆದರೆ, ಸಿದ್ಧರಾಮಯ್ಯ ಸರಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಎಂ. ಬಿ. ಪಾಟೀಲ ಅವರು ಈ ಭಾಗದಲ್ಲಿ ಕೈಗೊಂಡ ನೀರಾವರಿ ಯೋಜನೆಗಳು ಮತ್ತು ಈ ಯೋಜನೆಗಳು ಪೂರ್ಣವಾಗಲು ಸಂಪೂರ್ಣ ಹಣ ನೀಡಿದ ಎಸ್. ಸಿದ್ಧರಾಮಯ್ಯ ಅವರ ಉಪಕಾರ ಎಂದಿಗೂ ಮರೆಯಲು ಸಾಧ್ಯವಿಲ್ಲ.  ಕಾತ್ರಾಳ ಮತ್ತು ಯಕ್ಕುಂಡಿ ಕೆರೆಗಳನ್ನು ಮಲಘಾಣ ಪಶ್ಚಿಮ ಕಾಲುವೆಗಳ ಮೂಲಕ ನೀರು ಹರಿಸಿ ತುಂಬಿಸುವಾಗ ಹಳ್ಳಕೊಳ್ಳಗಳಿಗೆ ನೀರು ಬಿಡಲಾಗುತ್ತಿದೆ.  ಇದರಿಂದಾಗಿ ನಮ್ಮ ಗ್ರಾಮದಲ್ಲಿ ಅಂತರ್ಜಲ ಹೆಚ್ಚಿದೆ. ಪರಿಣಾಮ ಈಗ  50 ಅಡಿಗೆ ನೀರು ಸಿಗುತ್ತಿದೆ.  ಅಷ್ಟೇ ಅಲ್ಲ, ಈ ಹಿಂದೆ ತೋಡಿದ್ದ ಎರಡು ತೆರೆದ ಭಾವಿಗಳೂ ರಿಚಾರ್ಜ್ ಆಗಿವೆ.  ಹಳೆಯ ನಾಲ್ಕು ಭೋರವೆಲ್ ಮೂಲಕ ಎಲ್ಲ 60 ಎಕರೆ ಭೂಮಿಯಲ್ಲಿ ನೀರಾವರಿ ಮಾಡಲಾಗಿದೆ.  ಈ ಮುಂಚೆ ಯಾರೂ ನಮ್ಮೂರ ನಸೀಬು ತೆರೆಯುತ್ತದೆ ಎಂದುಕೊಂಡಿರಲಿಲ್ಲ.  ನಮ್ಮ ಅಜ್ಜ, ಅಪ್ಪ ಅಮ್ಮ ನೀರಾವರಿ ಕನಸು ಕಂಡಿದ್ದರು.  ಈಗ ಕೇವಲ ಐದು ವರ್ಷಗಳಲ್ಲಿ ನೀರಾವರಿ ಸೌಲಭ್ಯ ಸಿಕ್ಕಿರುವುದು ನಮ್ಮ‌ ನಸೀಬು ತೆರೆಸಿದೆ.  ಯಾವ ಸರಕಾರ, ಸಚಿವರು, ಶಾಸಕರಿಂದಲೂ ಆಗದ ಕೆಲಸವನ್ನು ಎಂ. ಬಿ. ಪಾಟೀಲ ಮಾಡಿದ್ದಾರೆ ಎಂದು ಎಂದು ಸಂತಸ ಹಂಚಿಕೊಂಡರು.

ಒಂದು ಕಾಲದಲ್ಲಿ ಬರದ ನಾಡಾಗಿದ್ದ ಸಂಗಾಪುರ ಎಸ್. ಎಚ್. ಗ್ರಾಮದಲ್ಲಿ ಹುಲುಸಾಗಿ ಬೆಳೆಯುತ್ತಿರುವ ಕಬ್ಬು

ಈ ಭಾಗದಲ್ಲಿ ನೀರಾವರಿಯಾದ ಮೇಲೆ ನಮ್ಮೂರಿನ ಚಿತ್ರಣವೇ ಬದಲಾಗಿದೆ.  ನಮ್ಮೂರಿನಲ್ಲಿ ಜನ ಜಮೀನಿದ್ದರೂ ನೀರಿಲ್ಲದ ಕಾರಣ ಪ್ರತಿವರ್ಷ ಜನೇವರಿಯಿಂದ ಮೇ ಅಂತ್ಯದವರೆಗೆ ಉದ್ಯೋಗ ಅರಸಿ ನೆರೆಯ ರಾಜ್ಯಗಳಿಗೆ ದುಡಿಯಲು ಹೋಗುತ್ತಿದ್ದರು.  ಈಗ ನೀರಾವರಿ ಸೌಲಭ್ಯ ಸಿಕ್ಕಿರುವ ಹಿನ್ನೆಲೆಯಲ್ಲಿ ಎಲ್ಲರೂ ವಾಪಸ್ಸಾಗಿದ್ದಾರೆ.  ಕಳೆದ ನಾಲ್ಕೈದು ವರ್ಷಗಳಿಂದ ಯಾರೂ ಗುಳೆ ಹೋಗುತ್ತಿಲ್ಲ.  ಭೂಮಿತಾಯಿಗೆ ನೀರುಣಿಸಿದ ಪರಿಣಾಮ ಕೈತುಂಬ ಕೆಲಸ ಸಿಕ್ಕಿದೆ.  ಭರಪೂರ ಬೆಳೆ ಬಂದು ರೈತರಿಗೆ ಕೈತುಂಬ ಹಣ ಸಿಗುತ್ತಿದೆ.  ನೆಮ್ಮದಿಯ ಜೀವನ ನಮ್ಮದಾಗುತ್ತಿದೆ ಎಂದು ಕಸ್ತೂರಿಬಾಯಿ ಮಂಜುನಾಥ ಬಡ್ರಿ, ಶೈಲಾ ನೇಟಕತ್ತಿ ಸಂತಸ ವ್ಯಕ್ತಪಡಿಸುತ್ತಾರೆ.

ಈ ಮುಂಚೆ ನಮ್ಮೂರಿನಲ್ಲಿ ದೊಡ್ಡ ರೈತರು ಸುಮಾರು ರೂ. 50 ಲಕ್ಷದಿಂದ ರೂ. ಒಂದು ಕೋ. ವರೆಗೆ ಸಾಲ ಮಾಡಿದ್ದರು.  ಮಧ್ಯಮ ಮತ್ತು ಸಣ್ಣ ರೈತರು ರೂ. 5 ರಿಂದ ರೂ. 10 ಲಕ್ಷದ ವರೆಗೆ ಬ್ಯಾಂಕಗಳು ಮತ್ತು ಖಾಸಗಿಯಾಗಿ ಸಾಲ ಮಾಡಿದ್ದರು.  ಆದರೂ, ಸಕಾಲಕ್ಕೆ ಮಳೆಯಾಗದೆ ಕೈಗೆ ಬೆಳೆ ಬಾರದೆ ಸಾಲ ಮತ್ತು ಬಡ್ಡಿ ಹೆಚ್ಚುತ್ತಲೆ ಸಾಗಿತ್ತು.  ಈಗ ಕಳೆದ ನಾಲ್ಕೈದು ವರ್ಷಗಳಿಂದ ಎಲ್ಲರೂ ನೀರಾವರಿ ಆಧಾರಿತ ಬೆಳೆ ಬೆಳೆಯುತ್ತಿದ್ದೇವೆ.  ಕಬ್ಬು ಆದಾಯದ ರೂಪದಲ್ಲಿ ಸಿಹಿ ನೀಡಿದೆ.  ಬಹುತೇಕ ಎಲ್ಲರೂ ಸಾಲ ತೀರಿಸಿದ್ದೇವೆ.  ಇನ್ನೋಂದು ವರ್ಷದಲ್ಲಿ ಎಲ್ಲರೂ ಋುಣಮುಕ್ತರಾಗುತ್ತಿದ್ದೇವೆ.  ನಮ್ಮ ಊರಿನಲ್ಲಿ ಕಳೆದ ನಾಲ್ಕೈದು ವರ್ಷಗಳಲ್ಲಿ 35 ಕಾರುಗಳು ಬಂದಿವೆ.  ಪ್ರತಿ ಮನೆಗೂ ಕನಿಷ್ಠ ಒಂದರಿಂದ ಐದಾರು ಬೈಕ್ ಗಳು ಬಂದಿವೆ.  ಸುಮಾರು 1500ರ ವರೆಗೆ ಬೈಕ್ ಗಳಿವೆ ಎಂದು ಗ್ರಾಮದ ಯುವಕ ರಮೇಶ ಶಂಕ್ರೆಪ್ಪ ಬರಗಿ ಮತ್ತು ಹಣಮಂತ ಚೀರಲದಿದಿನ್ನಿ ಸಂತಸ ವ್ಯಕ್ತಪಡಿಸಿದ್ದಾರೆ.

ಫಲ ನೀಡಲು ಸಿದ್ಧವಾಗಿರುವ ಬಾಳೆ ಗಿಡಗಳು

ದುಡ್ಡಿನ ಅಡಚಣೆಯಿಂದಾಗಿ ನಮ್ಮ ಮಕ್ಕಳಿಗೆ ಉತ್ತಮ ಶಾಲೆಗೆ ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ.  ಈಗ ನೀರಾವರಿಯಿಂದಾಗಿ ಆದಾಯ ಹೆಚ್ಚಾಗಿದ್ದು, ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಬೇರೆ ಬೇರೆ ಊರೂಗಳಲ್ಲಿ ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದೇವೆ.  ಈಗಾಗಲೇ ಹಲವಾರು ಜನ ಬಿ ಎಸ್ಸಿ(ಕೃಷಿ), ಬಿಇ, ಮೆಡಿಕಲ್ ಮತ್ತು ಡೆಂಟಲ್ ಓದುತ್ತಿದ್ದಾರೆ ಎಂದು ಸಂಗಾಪುರ ಎಸ್.  ಎಚ್. ಗ್ರಾಮದ ರೇಣುಕಾ ಬರಗಿ ಮತ್ತು ಇಂದ್ರಾವಾಯಿ ನೇಟಕತ್ತಿ ಹೇಳಿದ ಮಾತುಗಳು ಈ ಭಾಗ ಸಮೃದ್ದಿಯಾಗಿರುವುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿವೆ.

ಒಟ್ಟಾರೆ ಈ ಗ್ರಾಮದಲ್ಲಿ ಈಗ ರೈತರ ಜೊತೆ ಕೂಲಿಕಾರರ ಮಕ್ಕಳಿಗೂ ಉತ್ತಮ ಮತ್ತು ಉನ್ನತ ಶಿಕ್ಷಣ ಲಭ್ಯವಾಗುತ್ತಿದೆ.  ಇದಕ್ಕೆಲ್ಲ ಕಾರಣ ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಮತ್ತು ಅವರು ಸಿಎಂ ಆಗಿದ್ದಾಗ ಜಲಸಂಪನ್ಮೂಲ ಸಚಿವರಾಗಿದ್ದ ಎಂ. ಬಿ. ಪಾಟೀಲ ಅವರು.  ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ಅವರನ್ನು ನಮ್ಮೂರಿಗೆ ಕರೆಯಿಸಬೇಕೆಂದರೆ ಸಮಯ ಸಿಕ್ಕಿರಲಿಲ್ಲ.  ಈಗ ನಮ್ಮೂರಿಗೆ ಉಪಕಾರ ಮಾಡಿದವರನ್ನು ಸ್ಮರಿಸಿ ಗೌರವಿಸುವ ಕಾಲ ಕೂಡಿ ಬಂದಿದೆ.  ಹೀಗಾಗಿ ಅವರನ್ನು ಕರೆಯಿಸುತ್ತಿದ್ದೇವೆ ಎಂದು ಗ್ರಾಮದ ಮುಖಂಡ ರಮೇಶ ಬಡ್ರಿ ಸಂತಸ ವ್ಯಕ್ತಪಡಿಸಿದರು.

ಅಷ್ಟೇ ಅಲ್ಲ, ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜಲಸಂಪನ್ಮೂಲ ಸಚಿವರಾಗಿದ್ದ ಎಂ. ಬಿ. ಪಾಟೀಲ ಅವರು, ಸಂಗಾಪುರ ಎಸ್. ಎಚ್. ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಕಮರಿಮಠ ಆವರಣದಲ್ಲಿ ಯಾತ್ರಿ ನಿವಾಸ ನಿರ್ಮಿಸಲು ರೂ. 25 ಲಕ್ಷ ಅನುದಾನ ನೀಡಿದ್ದರು.  ಈಗ ಆ ಯಾತ್ರಿ ನಿವಾಸ ಜನಸೇವೆಗೆ ಸಿದ್ಧವಾಗಿದೆ.  ಅಲ್ಲದೇ, ಇಲ್ಲಿಯೇ ಸಮುದಾಯ ಭವನ ನಿರ್ಮಾಣಕ್ಕೆ ರೂ. 50 ಲಕ್ಷ ಅನುದಾನ ನೀಡಿದ್ದರು.  ಆ ಕಾಮಗಾರಿ ಪೂರ್ಣವಾಗುವ ಹಂತದಲ್ಲಿದೆ.

ಪರ ಊರಿನ ಭಕ್ತರು ತಂಗಲು ಲೋಕಾರ್ಪಣೆಗೆ ಸಜ್ಜಾಗಿರುವ ಯಾತ್ರಿ ನಿವಾಸ

.ಸಿದ್ಧರಾಮಯ್ಯರಿಂದ ಯಾತ್ರಾ ನಿವಾಸ ಲೋಕಾರ್ಪಣೆ

ಮೇ 2 ರಂದು ಸೋಮವಾರ ಸಂಗಾಪುರ ಎಸ್. ಎಚ್. ಗ್ರಾಮದಲ್ಲಿರುವ ಶ್ರೀ ಸಿದ್ದಲಿಂಗೇಶ್ವರ ಕಮರಿಮಠದ ಆವರಣದಲ್ಲಿ ನಿರ್ಮಿಸಲಾಗಿರುವ ಯಾತ್ರಾ ನಿವಾಸವನ್ನು ಸಿದ್ಧರಾಮಯ್ಯ ಅವರು ಉದ್ಘಾಟಿಸಲಿದ್ದಾರೆ.  ಈ ಕಾರ್ಯಕ್ರಮಕ್ಕೂ ಮುನ್ನ ಬರದ ನಾಡಾಗಿದ್ದ ಊರನ್ನು ಸಿರಿಯ ಗ್ರಾಮವನ್ನಾಗಿ ಮಾಡಿದ ನಾಯಕರನ್ನು ಪೂರ್ಣಕುಂಭ ಹೊತ್ತ ಮಹಿಳೆಯರು ಕುಂಭಮೇಳದಲ್ಲಿ ಸ್ವಾಗತಿಸಿ ಕರೆತರಲಿದ್ದಾರೆ.  ಗ್ರಾಮದಲ್ಲಿರುವ ಅಂಬೇಡ್ಕರ್ ವೃತ್ತದಿಂದ ಮಠದ ಆವರಣದವರೆಗೆ ಸುಮಾರು ಒಂದು ಕಿ. ಮೀ. ಈ ಕುಂಭಮೇಳ ನಡೆಯಲಿದ್ದು, ತೆರೆದ ಜೀಪಿನಲ್ಲಿ ನಾಯಕರನ್ನು ಮೆರವಣಿಗೆಯಲ್ಲಿ ಸ್ವಾಗತಿಸಿ ವೇದಿಕೆಯವರೆಗೆ ಕರೆತರಲಿದ್ದಾರೆ.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.  ಈ ಕಾರ್ಯಕ್ರಮದಲ್ಲಿ, ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಜಮಖಂಡಿ ಶಾಸಕ ಆನಂದ ನ್ಯಾಮಗೊಂಡ ಸೇರಿದಂತೆ ವಿಧಾನ ಪರಿಷತ ಸದಸ್ಯರಾದ ಆರ್. ಬಿ. ತಿಮ್ಮಾಪುರ, ಪ್ರಕಾಶ ರಾಠೋಡ, ಸುನೀಲಗೌಡ ಪಾಟೀಲ, ಮಾಜಿ ಶಾಸಕರಾದ ಪ್ರೊ. ರಾಜು ಆಲಗರೂ, ಸಿ. ಎಸ್. ನಾಡಗೌಡ, ಶರಣಪ್ಪ ಸುಣಗಾರ, ವಿಠ್ಠಲ ಕಟಕದೊಂಡ ಹಾಗೂ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಪಾಲ್ಗೋಳ್ಳುತ್ತಿದ್ದಾರೆ.  ಮಠದ ಶ್ರೀಗಳಾದ ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದ ನಾನಿಧ್ಯ ವಹಿಸಲಿದ್ದಾರೆ.

Leave a Reply

ಹೊಸ ಪೋಸ್ಟ್‌