Bajava Jayanti: ಬಸವಣ್ಣನ ಜನ್ಮಸ್ಥಳದಲ್ಲಿ ಕಾಟಾಚಾರಕ್ಕೆ ಜಯಂತಿ ಆಚರಣೆ- ರಾಜ್ಯಕ್ಕೆ ಅಮಿತ್ ಶಾ ಆಗಮಿಸಿದ ಹಿನ್ನೆಲೆ ಸಿಎಂ ಬಿಡಲಿ, ಸಚಿವರೂ ಬರದೆ ನಿರ್ಲಕ್ಷ್ಯ ಆರೋಪ

ವಿಜಯಪುರ: ಬಸವಣ್ಣನವರ(Anna Basaveshwar) ಜನ್ಮಸ್ಥಳ(Birth Place) ವಿಜಯಪುರ ಜಿಲ್ಲೆಯ(Vijayapura District) ಬಸವನ ಬಾಗೇವಾಡಿಯಲ್ಲಿ(Basavana Bagewadi) ನಡೆದ ರಾಜ್ಯ ಮಟ್ಟದ ಬಸವ ಜಯಂತಿ(Basava Jayanti)  ಆಚರಣೆ ಕಾರ್ಯಕ್ರಮ ಕಾಟಾಚಾರಕ್ಕೆ ನಡೆಸಿದ ಆರೋಪ ಕೇಳಿ ಬಂದಿದೆ.  

ಈ ಭಾಗದ ಜನ ಮತ್ತು ಜನಪ್ರತಿನಿಧಿಗಳ ಒತ್ತಾಯದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಬಸವಣ್ಣನವರ ಜನ್ಮಸ್ಥಳದಲ್ಲಿ ರಾಜ್ಯಮಟ್ಟದ ಬಸವ ಜಯಂತಿ ಕಾರ್ಯಕರ್ಮ ಆಯೋಜನೆ ಮಾಡಲಾಗಿತ್ತು.  ಅಲ್ಲದೇ, ಈ ಕಾರ್ಯಕ್ರಮಕ್ಕೆ ಅದ್ಧೂರಿ ತಯಾರಿಯೂ ನಡೆಸಲಾಗಿತ್ತು.  ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲ ರಾಜಕೀಯ ಮುಖಂಡರು ಮತ್ತು ಜನಪ್ರತಿನಿಧಿಗಳು ತಾವು ಜನಚಿಂತಕರು, ಬಸವಣ್ಣನವರ ಅನುಯಾಯಿಗಳು ಎಂದೇ ಹೇಳಿಕೊಳ್ಳುತ್ತಾರೆ.  ಆದರೆ, 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರ ಜನ್ಮಸ್ಥಳದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸ್ಥಳೀಯ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಮತ್ತು ವಿಧಾನ ಪರಿಷತ ಕಾಂಗ್ರೆಸ್ ಮುಖ್ಯ ಸಚೇತಕ ಪ್ರಕಾಶ ರಾಠೋಡ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ಜಿ. ಪಂ. ಸಿಇಓ ರಾಹುಲ ಶಿಂಧೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಸಲವಂತರಾಯ ಪಾಟೀಲ ಮತ್ತು ಸ್ಥಳೀಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮಾತ್ರ ಪಾಲ್ಗೋಂಡಿದ್ದರು.

ಬಸವನ ಬಾಗೇವಾಡಿಯಲ್ಲಿ ನಡೆದ ರಾಜ್ಯ ಮಟ್ಟದ ಬಸವ ಜಯಂತಿ ಕಾರ್ಯಕ್ರಮ

ಬಸವಣ್ಣನವರ ಭಾವಚಿತ್ರದ ಮೆರವಣಿಗೆಯಲ್ಲಿ ವಿಧಾನ ಪರಿಷತ ಬಿಜೆಪಿ ಸದಸ್ಯರಾದ ಅರುಣ ಶಹಾಪುರ ಮತ್ತು ಪಿ. ಎಚ್. ಪೂಜಾರ ಪಾಲ್ಗೋಂಡಿದ್ದು ಗಮನ ಸೆಳೆಯಿತು.

ರಾಜ್ಯ ಮಟ್ಟದ ಕಾರ್ಯಕ್ರಮವೆಂದರೆ ಸ್ವತಃ ಮುಖ್ಯಮಂತ್ರಿಗಳೇ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಬೇಕಿತ್ತು.  ಆದರೆ, ಅವರಿಗೆ ಪುರುಸೊತ್ತು ಸಿಗದ ಹಿನ್ನೆಲೆಯಲ್ಲಿ ಆಮಂತ್ರಣ ಪತ್ರಿಕೆಯಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ ಕುಮಾರ ಅವರು ಹೆಸರನ್ನು ಹಾಕಲಾಗಿತ್ತು.  ಅಲ್ಲದೇ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಕೂಡ ಪಾಲ್ಗೋಳ್ಳಬೇಕಿತ್ತು.  ಆದರೆ ಆಗಿದ್ದೇ ಬೇರೆ.

ಇದನ್ನು ಓದಿ:

Basava Jayanti: ಫಲ ನೀಡಿದ ಬಸವ ನಾಡಿನ ಜನರ ಪ್ರಯತ್ನ- ಈ ಬಾರಿ ಬ. ಬಾಗೇವಾಡಿಯಲ್ಲಿ ರಾಜ್ಯ ಮಟ್ಟದ ಬಸವ ಜಯಂತಿ ಆಚರಣೆ

ಸಿಎಂ ಬಿಡಲಿ ಸಚಿವರೂ ಬರಲಿಲ್ಲ

ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯ ಆಗಮನದ ನಿರೀಕ್ಷೆಯಲ್ಲಿ ಬಸವ ನಾಡಿನ ಜನರಿದ್ದರು.  ಆದರೆ, ಮುಖ್ಯಮಂತ್ರಿಯ ಹೆಸರು ಆಮಂತ್ರಣ ಪತ್ರಿಕೆಯಲ್ಲಿ ಇರಲಿಲ್ಲ.  ಹೀಗಾಗಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡಲಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ ಕುಮಾರ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರಾದರೂ ಕಾರ್ಯಕ್ರಮಕ್ಕೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಬಸವ ಭಕ್ತರಿದ್ದರು. ಆದರೆ, ಇವರಾರೂ ಬಾರದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ನೋವು ವ್ಯಕ್ತಪಡಿಸಿದ ಬಸವಾನುಯಾಯಿಗಳು

ಉತ್ತರ ಕರ್ನಾಟಕದಲ್ಲಿ ತನ್ನ ಬಲವಾದ ನೆಲೆಯನ್ನು ಹೊಂದಿರುವ ಬಿಜೆಪಿಗೆ ಬಸವನಾನುಯಾಯಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲವಾಗಿ ನಿಲ್ಲುತ್ತಿರುತ್ತಾರೆ.  ಆದರೆ, ಸಿಎಂ ಮತ್ತು ಸಚಿವರ ಗೈರು ಈ ಬಸವಾನುಯಾಯಿಗಳಿಗೂ ನೋವುಂಟು ಮಾಡಿದೆ.  ರಾಜ್ಯ ಸರಕಾರ ರಾಜ್ಯಮಟ್ಟದ ಬಸವ ಜಯಂತಿ ಕಾರ್ಯಕ್ರಮ ಘೋಷಣೆ ಮಾಡಿದಾಗ ಬಸವ ನಾಡಿನ ಜನ ಸಂತಸಪಟ್ಟು ಸರಕಾರದ ಪ್ರತಿನಿಧಿಯಾಗಿರುವ ಜಿಲ್ಲಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಿದ್ದರು.  ತಮ್ಮ ಬಹುದಿನಗಳ ಬೇಡಿಕೆ ಈಡೇರಿದೆ ಎಂದೇ ಖುಷಿ ಪಟ್ಟಿದ್ದರು.  ಆದರೆ, ಸಿಎಂ ಮತ್ತು ಸಚಿವರು ಬಾರದಿರುವುದಕ್ಕೆ ಬಸವಾನುಯಾಯಿಗಳಲ್ಲಿ ಆಕ್ರೋಶ ಮಡುಗಟ್ಟುವಂತೆ ಮಾಡಿದೆ ಎಂದು ಬಸವ ಸೈನ್ಯ ಸಂಸ್ಥಾಪಕ ಶಂಕರಗೌಡ ಬಿರಾದಾರ ಬಸವ ನಾಡು ಗೆ ಪ್ರತಿಕ್ರಿಯೆ ನೀಡಿದ್ದಾರೆ.

 

ಅಮಿತ್ ಶಾ ಅವರನ್ನು ಕರೆದುಕೊಂಡು ಬರಬಹುದಿತ್ತು

ಬಸವ ಜಯಂತಿ ರಾಜ್ಯ ಮಟ್ಟದ ಕಾರ್ಯಕ್ರಮ ಘೋಷಣೆಯಾಗುವುದಕ್ಕೂ ಮುಂಚೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬೆಂಗಳೂರು ಭೇಟಿ ನಿಗದಿಯಾಗಿತ್ತು.  ಅದರಂತೆ ಅಮಿತ್ ಶಾ ಅವರು ಸೋಮವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ.  ಈ ಹಿನ್ನೆಲೆಯಲ್ಲಿಯೇ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಚಿವರಾದ ವಿ. ಸುನೀಲ ಕುಮಾರ ಹಾಗೂ ಉಮೇಶ ಕತ್ತಿ ಬಸವನ ಬಾಗೇವಾಡಿಯಲ್ಲಿ ನಡೆದ ರಾಜ್ಯ ಮಟ್ಟದ ಬಸವ ಜಯಂತಿ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದಾರೆ ಎಂದು ಹೇಳಲಾಗುತ್ತಿದೆ.  ವಿಶ್ವಗುರುವಿನ ಜಯಂತಿ ಕಾರ್ಯಕ್ರಮಕ್ಕೆ ಗೈರು ಹಾಜರಾಗುವ ಬದಲು ಸಿಎಂ ಮತ್ತು ಸಚಿವರು ತಮ್ಮ ಜೊತೆ ಅಮಿತ್ ಶಾ ಅವರನ್ನೂ ಬಸವನ ಬಾಗೇವಾಡಿಗೆ ಕರೆತಂದು ಈ ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರೆ ಇವರ ನಿಜವಾದ ಬಸವ ಪ್ರೇಮ ಅರ್ಥ ಬರುತ್ತಿತ್ತು ಎಂದು ಬಸವನ ಬಾಗೇವಾಡಿ ಪಟ್ಟಣದ ನಿವಾಸಿಗಳು ತಿಳಿಸಿದ್ದಾರೆ.

ಒಟ್ಟಾರೆ, ವಿಶ್ವಗುರು ಬಸವಣ್ಣನವರ ರಾಜ್ಯ ಮಟ್ಟದ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಗೊರವ ನೀಡಬೇಕಿದ್ದ ಸರಕಾರ, ವಿಜಯಪುರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೂಡಲ ಸಂಗಮ ಅಭಿವೃದ್ಧಿ ಮಂಡಳಿ ವತಿಯಿಂದ ಕೇವಲ ಕಾಚಾಚಾರಕ್ಕಾಗಿ ಮಾತ್ರ ಬಸವ ಜಯಂತಿ ಕಾರ್ಯಕ್ರಮ ಆಯೋಜಿಸಿದೆ ಎಂಬುದು ಬಸವ ನಾಡಿನ ಜನರ ಆರೋಪವಾಗಿದೆ.

Leave a Reply

ಹೊಸ ಪೋಸ್ಟ್‌