Panchamasali Yatnal: ಯತ್ನಾಳರಿಂದ ಪಂಚಮಸಾಲಿ ಸಮಾಜದ ಹೆಸರು ದುರ್ಬಳಕೆ ಆರೋಪ- ಬಿಜೆಪಿಯಿಂದ ಉಚ್ಛಾಟಿಸಲು ವಿಜಯಪುರ ಪಂಚಮಸಾಲಿ ಮುಖಂಡರ ಆಗ್ರಹ

ವಿಜಯಪುರ: ವಿಜಯಪುರ(Vijayapura) ನಗರ(Vity) ಬಿಜೆಪಿ ಶಾಸಕ(BJP MLA) ಬಸನಗೌಡ ಪಾಟೀಲ ಯತ್ನಾಳ(Basanagouda Patil Yatnal) ಪಂಚಮಸಾಲಿ(Panchamasali) ಸಮಾಜದ ಮುಖಂಡರು(Community Leaders) ಹರಿಹಾಯ್ದಿದ್ದಾರೆ. 

ವಿಜಯಪುರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿಯ ಪಂಚಮಸಾಲಿ ಮುಖಂಡರಾದ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ ಮತ್ತು ಮುಖಂಡ ಸುರೇಶ ಬಿರಾದಾರ, ಯತ್ನಾಳ ಪಂಚಮಸಾಲಿ ಸಮುದಾಯದ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಒಂದಿಲ್ಲೊಂದು ದಿನ ಸಮಾಜ ಇವರ ವಿರುದ್ಧ ವೈಲೆಂಟ್ ಆಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಶಾಸಕ ಯತ್ನಾಳ ಪಂಚಮಸಾಲಿ ಸಮಾಜವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ.  ಸರಕಾರವ‌ನ್ನು ಬ್ಲ್ಯಾಕಮೇಲ್ ಮಾಡುತ್ತಿದ್ದಾರೆ.  ಪಂಚಮಸಾಲಿ ಸಮಾಜದ ಹೆಸರಿಟ್ಟುಕೊಂಡು ಇಲ್ಲಸಲ್ಲದ್ದನ್ನು ಮಾತನಾಡಬಾರದು.  ಇದರಿಂದ ಬಿಜೆಪಿ ಮತ್ತು ಇತರ ಪಕ್ಷದಲ್ಲಿರುವ ಸಮಾಜದ ಮುಖಂಡರು ಮುಜುಗರ ಅನುಭವಿಸುವಂತಾಗಿದೆ.  ಪಂಚಮಸಾಲಿ ಸಮಾಜ ಶಿಸ್ತು ಹಾಗೂ ಒಗ್ಗಟ್ಟು ಕಾಯ್ದುಕೊಂಡಿದೆ.  ಆದರೆ, ಯತ್ನಾಳ ಅವರು ಪಂಚಮಸಾಲಿ ಸಮಾಜ ಎಂದು ಹೇಳಿ ಬಹಳಷ್ಟು ಕಡೆ ವೇದಿಕೆ ಮೇಲೆ ಪಕ್ಷದ ಮುಖಂಡರು ಹಾಗೂ ಹರಿಹರ ಪೀಠದ ಶ್ರೀಗಳ ವಿರುದ್ಧ ಮಾತಾಡುತ್ತಿದ್ದಾರೆ.  ಯತ್ನಾಳ ಅವರು 1994 ರಲ್ಲಿ ಮೊದಲ ಬಾರಿ ಶಾಸಕರಾದಾಗಿನಿಂದ ಇಲ್ಲಿಯವರೆಗೆ ಪಂಚಮಸಾಲಿ ಸಮಾಜದ ಎಷ್ಟು ಜನರನ್ನು ಬೆಳೆಸಿದ್ದಾರೆ? ಎಷ್ಟು ಜನ ಶಾಸಕರನ್ನಾಗಿ ಮಾಡಿದ್ದಾರೆ? ಎಷ್ಟು ಜನರನ್ನು ಜಿ. ಪಂ., ತಾ. ಪಂ. ಪಾಲಿಕೆ ಸದಸ್ಯರನ್ನಾಗಿ ಮಾಡಿದ್ದಾರೆ? ಸಮಾಜದ ಯಾರನ್ನು ಬೆಳೆಸಿದ್ದಾರೆ ಎಂದು ಪ್ರಶ್ನಿಸಿದರು.

ಬಿಜೆಪಿ ಪಂಚಮಸಾಲಿ ಮುಖಂಡ ಸುರೇಶ ಬಿರಾದಾರ

ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮೊದಲಿನಿಂದಲೂ 2ಎ ಮೀಸಲಾತಿಗೆ ಹೋರಾಡುತ್ತ ಬಂದಿದ್ದಾರೆ.  ಆದರೆ ಯತ್ನಾಳ ಯಾವಾಗಿನಿಂದ ಮೀಸಲಾತಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಸುರೇಶ ಬಿರಾದಾರ ಪ್ರಶ್ನಿಸಿದರು.

ಹರಿಹರ ಪೀಠದ ‌ಮೊದಲ ಜಗದ್ಗುರುವಿನ ಬಗ್ಗೆ ಅವಮಾನಕರವಾಗಿ ಮಾತನಾಡುತ್ತೀರಿ.  ಒಂದೆಡೆ ಹಿಂದುತ್ವದ ಬಗ್ಗೆ ಮಾತಾಡೋದು.  ಇನ್ನೊಂದು ಕಡೆ ಸಮಾಜದ ಬಗ್ಗೆ ಮಾತಾಡೋದು.  ಮತ್ತೊಂದು ಕಡೆ ಸ್ವಾಮೀಜಿಗಳನ್ನು ನಿಂದಿಸುವುದು ಎಷ್ಟರ ಮಟ್ಟಿಗೆ ಸರಿ? ಸಮಾಜಕ್ಕೆ ನಿಮ್ಮ ಕೊಡುಗೆ ಏನು? ಕೂಡಲ ಸಂಗಮಕ್ಕೆ ಸರಕಾರ ನೀಡಿದ ರೂ. 25 ಲಕ್ಷ ಅನುದಾನವನ್ನು ಮರಳಿ ಸರಕಾರಕ್ಕೆ ಕಳುಹಿಸಿರುವುದಾಗಿ ಹೇಳಿದ್ದೀರಿ.  ಅದರ ದಾಖಲೆ‌ ಎಲ್ಲಿದೆ? ಎಂದು ಭೀಮಾಶಂಕರ ಹದನೂರ ಪ್ರಶ್ನಿಸಿದರು.

ಇದನ್ನು ಓದಿ: https://basavanadu.com/2022/05/07/vijayaprua-bjp-mla-basanagouda-patil-yatnal-said-dkc-fearing-of-him-and-he-did-not-said-anything-against-party-high-command/

ಪಂಚಮಸಾಲಿ ಸಮಜದವರಿಗೆ ಬಿಜೆಪಿಯಲ್ಲಿ ಸ್ಥಾನಮಾನ ಕೊಟ್ಟಾಗ ‌ಅದನ್ನು ನೀವೇ ವಿರೋಧ ಮಾಡಿದ್ದೀರಿ.  ಮಳುಗೌಡ ಪಾಟೀಲ ವಿಜಯಪುರ ನಗರ ನಗರ ಮಂಡಲ ಅಧ್ಯಕ್ಷರಾದಾಗ ನೀವೇ ನಿಮ್ಮ ಬೆಂಬಲಿಗರನ್ನು ಕಳುಹಿಸಿ ವಿರೋಧ ಮಾಡಿದಿರಿ.  ಹೀಗಿರುವಾಗ ಸಮಾಜದ ಹೆಸರಲ್ಲಿ ಮಾತನಾಡವುದು ಸರಿಯಲ್ಲ.  ಕೂಡಲ ಸಂಗಮ ಶ್ರೀಗಳ ಬಗ್ಗೆ ನಮಗೆ ಗೌರವ ಇದೆ.  ತಾವೊಬ್ಬ ಸಮಾಜದ ವ್ಯಕ್ತಿಯಾಗಿ ಆಲಗೂರ ಮತ್ತು ಹರಿಹರ ಪೀಠದ ಸ್ವಾಮೀಜಿಗಳನ್ನೂ ಗೌರವದಿಂದ ಕಾಣಬೇಕು.  ಬೆಂಗಳೂರಿಲ್ಲಿ ಲಕ್ಷ ಲಕ್ಷ ಜನ ಸೇರಿದ್ದಾರೆಂದರೆ ಅದಕ್ಕೆ ಹರಿಹರ ಹಾಗೂ ಕೂಡಲ ಸಂಗಮ ಇಬ್ಬರೂ ಶ್ರೀಗಳು ಕಾರಣ.  ಸಮಾಜದ ಹೆಸರಿನಲ್ಲಿ, 2ಎ ಹೆಸರನ್ನು ನೀವು ದುರ್ಬಳಕೆ ಮಾಡಿಕೊಳ್ಳುತ್ತಿದ್ದೀರಿ ಎಂದು ಉಭಯ ಮುಖಂಡರು ಆರೋಪಿಸಿದರು.

ಬಿಜೆಪಿ ಪಂಚಮಸಾಲಿ ಮುಖಂಡ ಭೀಮಾಶಂಕರ ಹದನೂರ

ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲರನ್ನು ಟೀಕಿಸಿದ್ದೀರಿ.  ನಿಮ್ಮ ಜೊತೆಗೆ ಇದ್ದ ಶಾಸಕ ಅರವಿಂದ ಬೆಲ್ಲದ ಅವರ ಬಗ್ಗೆ ಏನು ಮಾತಾಡಿದ್ದೀರಿ? ನಿಮ್ಮಿಂದ ಪಕ್ಷದಲ್ಲಿರುವ ಸಮಾಜದ ಇನ್ನುಳಿದ ಮುಖಂಡರು ಮುಜುಗರ ಅನುಭವಿಸುವಂತಾಗಿದೆ.  ಸಮಾಜ ಎಂದರೆ ನೀವಷ್ಟೇನಾ? ಸಮಾಜದ ಮುಖಂಡನಾದವನು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು.  2ಎ ಮೀಸಲಾತಿಗೆ ವಚನಾನಂದ ಶ್ರೀಗಳು ಮೌನವಾಗಿ ಮತ್ತು ಕಾನೂನು ಬದ್ಧವಾಗಿ ಹೋರಾಟ ಮಾಡುತ್ತಿದ್ದಾರೆ.  ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ರಾಜ್ಯದ ಎಲ್ಲ ಲಿಂಗಾಯಿತರನ್ನು ಸೇರಿಸಲು ಶ್ರಮಿಸುತ್ತಿದ್ದಾರೆ.  ಮೀಸಲಾತಿ ಸಿಗುವುದಾದರೆ ಅದು ವಚನಾನಂದ ಶ್ರೀಗಳಿಂದ.  ಸಮಾಜ ಸೈಲೆಂಟ್ ಆಗಿದೆ.  ಪರಿಸ್ಥಿತಿ ಹೀಗೆ ಮುಂದುವರಿದರೆ ಒಂದಿಲ್ಲಾ ಒಂದು ದಿನ ವೈಲೆಂಟ್ ಆಗಬೇಕಾಗುತ್ತದೆ ಎಂದು ಸುರೇಶ ಬಿರಾದಾರ ಎಚ್ಚರಿಕೆ ನೀಡಿದರು.

ಬಿಜೆಪಿಯಿಂದ ಯತ್ನಾಳ ಅವರನ್ನು ಉಚ್ಛಾಟಿಸಲು ಆಗ್ರಹ

ಪದೇ ಪದೇ ಬಿಜೆಪಿ ಮತ್ತು ನಾಯಕರ ವಿರುದ್ಧ ಹೇಳಿಕೆ ನೀಡುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಭೀಮಾಶಂಕರ ಹದನೂರ ಆಗ್ರಹಿಸಿದರು.  ಶಾಸಕ ಯತ್ನಾಳ ಅವರಿಂದ ಬಿಜೆಪಿ ಪಕ್ಷಕ್ಕೆ ಎಂದೂ ಒಳಿತಿಲ್ಲ.  ಕೂಡಲೇ ಬಿಜೆಪಿ ಪಕ್ಷದಿಂದ ಯತ್ನಾಳ ಅವರನ್ನು ಉಚ್ಛಾಟಿಸಬೇಕು.  ಶಾಸಕ ಯತ್ನಾಳ ಸಚಿವ ಸ್ಥಾನಕ್ಕಾಗಿ ಪಂಚಮಸಾಲಿ ಸಮಾಜಕ್ಕೆ ಮೀಸಲು ಬೇಡಿಕೆ ಮುಂದಿಟ್ಟು ಬ್ಲಾಕಮೇಲ್ ಮಾಡುತ್ತಿದ್ದಾರೆ.  ಪಕ್ಷದ ಘನತೆಗೆ ಧಕ್ಕೆ ತರುವ ಕೆಲಸದಲ್ಲಿ ತೊಡಗಿರುವ ಅವರನ್ನು ಬಿಜೆಪಿ ಹೊರ ಹಾಕುವಂತೆ ಆಗ್ರಹಿಸಿದರು.

ಪ್ರತಿದಿನ ಒಂದಿಲ್ಲೋಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮಾಧ್ಯಮಗಳಲ್ಲಿ ನಿರೂಪಕರು ಕಾಣದಿರಬಹುದು, ಆದರೆ ಯತ್ನಾಳ ಹೇಳಿಕೆಗಳು ಕಾಣಿಸಿಸುತ್ತಿವೆ.  ಬಿಜೆಪಿ ಘನತೆಗೆ ಧಕ್ಕೆ, ಮುಜುಗರ ಉಂಟು ಮಾಡುತ್ತಿರುವ ಇವರನ್ನು ಕೂಡಲೇ ಉಚ್ಛಾಟಿಸಬೇಕು ಎಂದು ಅವರು ಆಗ್ರಹಿಸಿದರು.

ಯತ್ನಾಳ ಪಂಚಮಸಾಲಿ ಸಮಾಜದ ಹೆಸರಿನಲ್ಲಿ ಸಚಿವರಾಗಲು ಸಮಾಜವನ್ನು ದುರ್ಬಳಕೆ ಮಾಡಿಕೊಂಡು, ಬ್ಲಾಕ್ ಮೇಲ್ ಮಾಡುವ ಕೃತ್ಯದಲ್ಲಿ ತೊಡಗಿದ್ದಾರೆ.  ಪಕ್ಷ ಈ ಹಿಂದೆ ಅವರನ್ನು ಉಚ್ಚಾಟನೆ ಮಾಡಿದಾಗ ಮರಳಿ ಸೇರ್ಪಡೆ ಮಾಡಿಕೊಳ್ಳುವಾಗ ನಾವೆಲ್ಲ ವಿರೋಧ ಮಾಡಿದ್ದೇವು.  ಆದರೂ ಪಕ್ಷದ ನಾಯಕರು ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಪಕ್ಷ ಇದೀಗ ಮುಜುಗರ ಅನುಭವಿಸುವ ದುಸ್ಥಿತಿ ಉಂಟಾಗಿದೆ.  ವಾಜಪೇಯಿ ಸಂಪುಟದಲ್ಲಿ ಸಚಿವನಾಗಿದ್ದೆ ಎಂದು ರಾಜಕೀಯ ಮುತ್ಸದ್ದಿ ನಾಯಕನ ಹೆಸರು ದುರ್ಬಳಕೆ ಮಾಡಿ ಕೊಳ್ಳುತ್ತಿರುವ ಯತ್ನಾಳ ಅವರಿಗೆ ವಾಜಪೇಯಿ ಅವರ ಹೆಸರು ಹೇಳುವ ನೈತಿಕತೆ ಇಲ್ಲ.  ಈ ಹಿಂದೆ ಕಾಂಗ್ರೆಸ್ ಸೇರಲು ಹೊರಟಿದ್ದ ಯತ್ನಾಳ, ಬಿಜೆಪಿ ಅಧಿಕೃತ ಅಭ್ಯರ್ಥಿ ಮತ್ತು ಸರಳ ರಾಜಕಾರಣಿ ಜಿ. ಎಸ್. ನ್ಯಾಮಗೌಡ ವಿರುದ್ಧ ಸ್ಪರ್ಧಿಸಿ ಅವರನ್ನು ಸೋಲಿಸಿದರು. ನಿಮಗೆ ಟಿಕೆಟ್ ನೀಡಿದರೆ ಮಾತ್ರ ಪಕ್ಷ.  ಇಲ್ಲದಿದ್ದರೆ ನಾಯಕರ ನಿಂದನೆ ಎಂಬ ವರ್ತನೆ ಅನುಸರಿಸುತ್ತಿದ್ದಾರೆ ಎಂದು ಭೀಮಾಶಂಕರ ಹದನೂರ ವಾಗ್ದಾಳಿ ನಡೆಸಿದರು.

ಇದೇ ಯತ್ನಾಳ ಈ ಹಿಂದೆ ಬಸವಜಯ ಮೃತ್ಯುಂಜಯ ಶ್ರೀಗಳ ವಿರುದ್ಧವೂ ಮಾತನಾಡಿದ್ದರು.  ಈಗ ಪಂಚಮಸಾಲಿ ಸಮಾಜದ ಪ್ರಶ್ನಾತೀತ ನಾಯಕ ಎಂಬಂತೆ ಬಿಂಬಿಸಿಕೊಳ್ಳಲು ಮುಂದಾಗಿದ್ದಾರೆ.  ಕಳೆದ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಗಾಗಿ ಯಡಿಯೂರಪ್ಪ ಪರ ಮಾತನಾಡಿದ್ದ ಯತ್ನಾಳ, ನಂತರ ಅವರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.  ಈಗ ಸಮಾಜದ ಹೆಸರು ಹೇಳಿಕೊಂಡು ಸಚಿವರಾಗಲು ಹುನ್ನಾರ ನಡೆಸಿದ್ದಾರೆ.

ಈ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ರವಿ‌ ಮುಕಾರ್ತಿಹಾಳ, ಸನ್ನಿ ಗವಿಮಠ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌