ವಿಜಯಪುರ,: ಕಾಲುವೆಗಳಿಗೆ(Canal) ನೀರು ಹರಿಸುವ(Water Release) ಮೂಲಕ ಜನ, ಜಾನುವಾರುಗಳಿಗೆ(Publc and Cattles)ಕುಡಿವ ನೀರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ವಿಜಯಪುರ ಜಿಲ್ಲಾಧಿಕಾರಿ(Vijayapura Deputy Commissioner) ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ(Dr Vijayamahantesh B Danammavar) ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳ ಜಲ ಸಂಗ್ರಹಾಲಯ ಕಾಲುವೆಗಳ ಮೂಲಕ ನೀರು ಹರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸಹಾಯಕ ಆಯುಕ್ತರು, ಪೊಲೀಸ್ ಉಪಾಧೀಕ್ಷಕರು, ತಹಸೀಲ್ದಾರರು, ತಾಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳೊಂದಿಗೆ ಮೇ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಇತ್ತೀಚಿಗಷ್ಟೇ ಬೆಂಗಳೂರಿನಲ್ಲಿ ನಡೆದ ವಿಶೇಷ ಸಭೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸ್ಥಿತಿಗತಿಯ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಅಧಿಕಾರಿಗಳಿಗೆ ತಿಳಿಸಿದ ಜಿಲ್ಲಾಧಿಕಾರಿಗಳು, ಅತೀ ಹೆಚ್ಚು ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ನೀರು ಸರಬರಾಜಿಗೆ ಅನುಕೂಲವಾಗುವಂತೆ ಕಾಲುವೆಗಳಿಗೆ ನೀರು ಹರಿಸುವುದರ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ತುರ್ತಾಗಿ ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದರು.
35 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ
ಇಂಡಿ ತಾಲೂಕಿನಲ್ಲಿ ಸುಮಾರು 35 ಗ್ರಾಮಗಳು ತೀವ್ರವಾದ ಕುಡಿವ ನೀರಿನ ಸಮಸ್ಯೆ ಎದುರಿಸುತ್ತಿವೆ. ಅಂಥ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಈ ಭಾಗದ ಕಾಲವೆಗಳ ಮೂಲಕ ನೀರು ಹರಿಸುವ ಅಗತ್ಯವಿದೆ ಎಂದು ಸಹಾಯಕ ಆಯುಕ್ತರಾದ ರಾಮಚಂದ್ರ ಗಡದೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ ನೀರು ಹರಿಸಿ 3.88 ಟಿಎಂಸಿ ನೀರನ್ನು ಸಂಗ್ರಹಣೆ ಇಟ್ಟುಕೊಳ್ಳಬೇಕು. ಈ ಮೂಲಕ ಒಟ್ಟು 4.62 ಟಿಎಂಸಿ ನೀರನ್ನು ನಾರಾಯಣಪುರ ಜಲಾಶಯದಿಂದ ಸಿಂದಗಿ ಮತ್ತು ಇಂಡಿ ತಾಲ್ಲೂಕಿನ ಉಪ ಕಾಲುವೆ ಐಬಿಸಿ ಮತ್ತು ಐಎಲ್‌ಸಿ ಜಾಲಗಳಿಗೆ ನೀರನ್ನು ಹರಿಸಲಾಗುತ್ತಿದೆ. ಈ ನೀರನ್ನು ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಲುವಾಗಿ ಕಾಲುವೆಯ ಕೊನೆಯ ಹಂತದವರೆಗೆ ತಲುಪಿಸಬೇಕಿದೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.
ದೂರುಗಳು ಬಂದರೆ ಕ್ರಮ
ಕಳೆದ ವರ್ಷಕ್ಕೆ ಹೋಲಿಸಿದರೆ ನಾರಾಯಣಪುರ ಹಾಗೂ ಆಲಮಟ್ಟಿ ಡ್ಯಾಮ್‌ಗಳಲ್ಲಿ ನೀರಿನ ಲಭ್ಯತೆ ಉತ್ತಮವಾಗಿದೆ. ನೀರು ಪೂರೈಕೆಗೆ ಸಮಸ್ಯೆಯಾಗುವುದಿಲ್ಲ. ರೈತರು ಜನ, ಜಾನುವಾರುಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಕಾಲಕ್ಕೆ ನೀರು ಪೂರೈಕೆಗೆ ಗಮನ ಕೊಡಬೇಕು. ನೀರಿನ ತೊಂದರೆಯಾಗಿದೆ ಎಂದು ದೂರುಗಳು ಬಂದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದರು. ಕಾಲುವೆಗಳಲ್ಲಿ ಅನಾವಶ್ಯಕವಾಗಿ ನೀರು ಪೋಲಾಗಬಾರದು. ಕೆಲವು ಕಡೆ ನೀರನ್ನು ಮನಸಿಗೆ ಬಂದಂತೆ ದುರುಪಯೋಗ ಪಡಿಸಿಕೊಳ್ಳುವದು ಕೆಲವು ಕಡೆಗಳಲ್ಲಿ ವರದಿಯಾಗಿದೆ. ಇದು ತಪ್ಪಬೇಕು. ಇದು ಬೇಸಿಗೆಯ ಅವಧಿ. ನೀರಿನ ಅವಶ್ಯಕತೆ ತುಂಬಾ ಇದ್ದು, ಇದನ್ನರಿತು ಸಾರ್ವಜನಿಕರು ಸಹಕರಿಸುವಂತೆ ಅಧಿಕಾರಿಗಳು ಜನರಲ್ಲಿ ಮನವರಿಕೆ ಮಾಡಬೇಕು ಎಂದು ಅವರು ಹೇಳಿದರು.
ಕಟ್ಟುನಿಟ್ಟಿನ ಆದೇಶ
ವಿಜಯಪುರ ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಸಲುವಾಗಿ ಯಂಕಂಚಿ ಕೆರೆ, ಬಳಗಾನೂರ ಕೆರೆ, ಸಂಗೋಗಿ ಕೆರೆ ಹಾಗೂ ಲೋಣಿ ಕೆರೆ ತುಂಬಿಸಲು ಇದೆ ವೇಳೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು. ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಮೇ ಅಂತ್ಯದವರೆಗೆ ಅತ್ಯಂತ ಜವಾಬ್ದಾರಿಯುತವಾಗಿ ನಡೆಸಿ ನೀರು ವ್ಯಯ ಆಗದಂತೆ ಕ್ರಮ ವಹಿಸಬೇಕು. ಈ ವಿಷಯದಲ್ಲಿ ಏನಾದರೂ ಸಮಸ್ಯೆಗಳಾದರೆ ತಮ್ಮ ಗಮನಕ್ಕೆ ತರುವಂತೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವಿಡಿಯೋ ಸಂವಾದದಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಇಂಡಿ ಡಿಎಸ್ಪಿ ಚಂದ್ರಕಾಂತ ನಂದರೆಡ್ಡಿ, ತಹಸೀಲ್ದಾರರಾದ ಸಿ. ಎಸ್. ಕುಲಕರ್ಣಿ, ತಾಲೂಕು ಪಂಚಾಯಿತಿ ಇಓ ಸುನೀಲ್ ಮದ್ದೀನ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ರುದ್ರವಾಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಉಪಸ್ಥಿತರಿದ್ದರು.