ವಿಜಯಪುರ: ವಿಜಯಪುರ ನಗರದ(Vijayapura City) ಆಶ್ರಮ ರಸ್ತೆಯಲ್ಲಿರುವ(Ashram Road) ಎಂಡಿಗೇರಿ ಆಸ್ಪತ್ರೆಯಲ್ಲಿ(Endigeri Hospital) ಅಂತಾರಾಷ್ಚ್ಪೀಯ ನರ್ಸ್ ಗಳ ದಿನ(International Nurses Day) ಆಚರಿಸಲಾಯಿತು. ಆಸ್ಪತ್ರೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸುವ(Cake Cutting) ಮೂಲಕ ಅಂತಾರಾಷ್ಟ್ರೀಯ ದಾದಿಯರ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ಮುಖ್ಯಸ್ಥ ಡಾ. ಪ್ರೀತಿಶ ಎಂಡಿಗೇರಿ, ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನವನ್ನು ಅಂತಾರಾಷ್ಟ್ರೀಯ ದಾದಿಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಶ್ರೀಮಂತ ಕುಟುಂಬದಿಂದ ಬಂದಿದ್ದರೂ ತಮ್ಮ 17ನೇ ವಯಸ್ಸಿನಲ್ಲಿಯೇ ನರ್ಸಿಂಗ್ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಅವರನ್ನು ಲೇಡಿ ವಿತ್ ದಿ ಲ್ಯಾಂಪ್ ಎಂದೇ ಕರೆಯಲಾಗುತ್ತದೆ. 1854 ರಿಂದ 1856ರ ವರೆಗೆ ನಡೆದ ಕ್ರಿಮಿಯಾ ಯುದ್ಧದಲ್ಲಿ ಗಾಯಗೊಂಡಿದ್ದ ಸೈನಿಕರಿಗೆ ಫ್ಲಾರೆನ್ಸ್ ನೈಟಿಂಗೆಲ್ ನಿಸ್ವಾರ್ಥ ಸೇವೆ ಮಾಡಿದ್ದರು. ತಮ್ಮ 38 ಶುಶ್ರೂಷಕಿಯರ ತಂಡದೊಂದಿಗೆ ಕ್ರಿಮಿಯನ್ ಯುದ್ಧದಲ್ಲಿ ಗಾಯಗೊಂಡ ಸೈನಿಕರನ್ನು ಶುಶ್ರೂಷೆ ಮಾಡಿದರು. ಅಷ್ಟೇ ಅಲ್ಲ, ಮಿಲಿಟರಿ ಆಸ್ಪತ್ರೆ ಮತ್ತು ಇತರ ದವಾಖಾನೆಗಳ ಸುಧಾರಣೆಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಅವುಗಳನ್ನು ಜಾರಿಗೆ ತರಲು ಪ್ರಯತ್ನಿಸಿದ್ದರು. ಇದಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಇಂದಿಗೂ ಒಂದಿಲ್ಲೋಂದು ರೀತಿಯಲ್ಲಿ ಇವರು ರೂಪಿಸಿದ ಸುಧಾರಣೆ ಕ್ರಮಗಳನ್ನು ವಿಶ್ವಾದ್ಯಂತ ಎಲ್ಲ ಆಸ್ಪತ್ರೆಗಳಲ್ಲಿ ಪಾಲಿಸುತ್ತಿವೆ. ದಾದಿಯರು ಆಸ್ಪತ್ರೆಗಳ ಬೆನ್ನೆಲುಬಾಗಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಡಾ. ಅಶ್ವಿನಿ ಎಂಡಿಗೇರಿ, ಡಾ, ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಶಿವಾನಂದ ಅವರಸಂಗ, ಸಿಬ್ಬಂದಿಯಾದ ಸಾವಿತ್ರಿ ಹಿರೇಮಠ, ಐಶ್ವರ್ಯ ಪಾಟೀಲ, ಶಿರಾಜ ಕರ್ನಾಳ, ಪ್ರವೀಣ ಕಾಂಬಳೆ, ಅನಿಲ, ಭಾಗ್ಯಶ್ರೀ ಯಡವೆ, ಸುಂದರಾಬಾಯಿ ಜಾಧವ ಮುಂತಾದವರು ಉಪಸ್ಥಿತರಿದ್ದರು.