World Nurses Day: ಉತ್ತಮ ಸೇವಾಮನೋಭಾವ ಹೊಂದಿರುವ ಭಾರತೀಯ ನರ್ಸ್ ಗಳಿಗೆ ವಿಶ್ವಾದ್ಯಂತ ಬೇಡಿಕೆಯಿದೆ- ಅಮೃತಾನಂದ ಮಹಾಸ್ವಾಮೀಜಿ

ವಿಜಯಪುರ: ಸೇವಾ(Service) ಮನೋಭಾವದಿಂದಾಗಿ(Attitude) ಭಾರತೀಯ ನರ್ಸ್ ಗಳಿಗೆ(Indian Nurses) ವಿಶ್ವಾದ್ಯಂತ ಬೇಡಿಕೆ(Worldwide Demand) ಹೆಚ್ಚಾಗುತ್ತಿದೆ ಎಂದು ಎಂದು ಬಾಲಗಾಂವ ಆಶ್ರಮದ ಅಮೃತಾನಂದ ಮಹಾಸ್ವಾಮೀಗಳು(Amrutanand Mahaswamiji) ಹೇಳಿದರು.

 

ನಗರದ ಬಿ ಎಲ್ ಡಿ ಇ ಸಂಸ್ಥೆಯ ಶ್ರೀ. ಬಿ. ಎಂ. ಪಾಟೀಲ ನರ್ಸಿಂಗ್ ಕಾಲೇಜು ಮತ್ತು ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯ ಆಶ್ರಯದಲ್ಲಿ ನಡೆದ ಆಂತಾರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೊರೊನಾ ಸಂಕಷ್ಟ ಸಮಯದಲ್ಲಿ ನರ್ಸ್ ಗಳು ಜೀವದ ಹಂಗು ತೊರೆದು ಪತಿ, ಮಕ್ಕಳು, ಕುಟುಂಬ ಸದಸ್ಯರನ್ನು ದೂರವಿಟ್ಟು ರೋಗಿಗಳ ಉಪಚಾರ ಮಾಡಿದ್ದಾರೆ. ಅಷ್ಟೇ ಅಲ್ಲ, ರೋಗಿಗಳ ಕುಟುಂಬದವರಲ್ಲಿಯೂ ಆತ್ಮಸ್ಥೈರ್ಯ ತುಂಬಿದ್ದಾರೆ. ವೃತ್ತಿಗಳಲ್ಲಿ ನರ್ಸಿಂಗ್ ವೃತ್ತಿ ಶ್ರೇಷ್ಛವಾಗಿದೆ. ನಮ್ಮ ದಾದಿಯರ ಸೇವಾ ಮನೋಭಾವನೆ ಜಗತ್ತಿನಲ್ಲಿಯೇ ಅತ್ಯುತ್ತಮವಾಗಿದ್ದು, ಎಲ್ಲ ದೇಶಗಳಲ್ಲಿ ಭಾರತೀಯ ನರ್ಸ್ ಗಳಿಗೆ ಬೇಡಿಕೆಯಿದೆ. ಇದು ಅವರ ಸೇವಾಶಕ್ತಿಗೆ ಸಾಕ್ಷಿಯಾಗಿದೆ. ರೋಗಿಗಳಿಗೆ ತಾಯಿಯಂತೆ ಉಪಚರಿಸಿ ಮಾನಸಿಕವಾಗಿಯೂ ನೈತಿಕ ಸ್ಥೈರ್ಯ ತುಂಬುವ ಮೂಲಕ ರೋಗಿಗಳು ಬೇಗ ಗುಣಮುಖರಾಗಲು ಕಾರಣರಾಗಿದ್ದಾರೆ. ಈ ಸೇವೆ ಇದೇ ರೀತಿ ಮುಂದುವರೆಯಲಿ ಎಂದು ಅವರು ಹೇಳಿದರು.

ಅಂತಾರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು

 

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಆಶಾ ಎಂ. ಪಾಟೀಲ, ನರ್ಸ್ ಗಳ ಸೇವೆಗೆ ಹಲವಾರು ಶತಮಾನಗಳ ಇತಿಹಾಸವಿದೆ. ಸಾಮಾನ್ಯ ಪರಿಸ್ಥಿತಿಯಲ್ಲಿ ರೋಗಿಗಳ ಆರೈಕೆ ಮಾಡುವುದರಿಂದ ಹಿಡಿದು ಯುದ್ಧ ಮತ್ತು ಕೊರೊನಾದಂಥ ಸಂಕಷ್ಟದ ಸಮಯದಲ್ಲಿಯೂ ಶುಶ್ರೂಷಕರು ಅತ್ಯುತ್ತಮ ಸೇವೆ ಮಾಡುವ ಮೂಲಕ ರೋಗಿಗಳು, ಅವರ ಸಂಬಂಧಿಕರು ಮತ್ತು ಭಾರತೀಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕೊರೊನಾ ಸಂದರ್ಭದಲ್ಲಿ ಎಲ್ಲರೂ ಸುರಕ್ಷಿತವಾಗಿ ಮನೆಯಲ್ಲಿ ಕುಳಿತರೆ, ಶುಶ್ರೂಷಕರು ಮಾತ್ರ ತಮ್ಮ ವೈಯಕ್ತಿಕ ಜೀವನ ಬದಿಗಿಟ್ಟು ನಿರಂತರವಾಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸೇವೆ ಮಾಡಿದ್ದಾರೆ. ಅವರ ಸೇವೆಯನ್ನು ನೋಡಿದರೆ ನಾನು ಏಕೆ ನರ್ಸಿಂಗ್ ಕ್ಷೇತ್ರಕ್ಕೆ ಬರಲಿಲ್ಲ ಎಂದು ಅನಿಸುತ್ತಿದೆ. ನರ್ಸ್ ಗಳಿಗೆ ಏನೇ ಕಷ್ಟ, ಸಮಸ್ಯೆಗಳಿದ್ದರೂ ಬಿ ಎಲ್ ಡಿ ಇ ಸಂಸ್ಥೆ ಸದಾ ಅವರ ಜೊತೆಗೆ ಇರಲಿದೆ ಎಂದು ಹೇಳಿದರು.

ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಆರ್. ಎಸ್. ಮುಧೋಳ ಮಾತನಾಡಿ, ರೋಗಿಗಳಿಗೆ ವೈದ್ಯರು ಚಿಕಿತ್ಸೆ ನೀಡಿದರೆ, ನರ್ಸ್ ಗಳು ಅವರಷ್ಟೇ ಮಹತ್ವದ ಆರೈಕೆಯನ್ನು ಮಾಡುತ್ತಾರೆ. ವೈದ್ಯರ ಜೊತೆಗೆ ಅವರ ಸೇವೆಯೂ ಸಮಾನವಾಗಿದೆ. ನರ್ಸ್ ಗಳು ಆಸ್ಪತ್ರೆಗಳ ಆಧಾರ ಸ್ಥಂಭವಾಗಿ ಕೆಲಸ ಮಾಡುತ್ತಾರೆ. ಮುಂಬರುವ ದಿನಗಳಲ್ಲಿ ವೈದ್ಯರು ಮತ್ತು ನರ್ಸುಗಳಿಬ್ಬರೂ ಜೊತೆಗೂಡಿ ಆರೋಗ್ಯ ಕ್ಷೇತ್ರವನ್ನು ಮತ್ತಷ್ಟು ಬಲಿಷ್ಠವಾಗಿ ಮಾಡೋಣ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ. ಶಾಲ್ಮೊನ್ ಚೋಪಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ವಿ. ಕುಲಕರ್ಣಿ, ಎಸ ಎನ್ ಎ ಸಲಹೆಗಾರ ಪ್ರೊ. ಸಂತೋಷ ಇಂಡಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಪ್ರೊ. ಜಯಶ್ರೀ ಪುಜಾರಿ ಸ್ವಾಗತಿಸಿದರು. ನರ್ಸಿಂಗ್ ವಿಭಾಗದ ಮುಖ್ಯಸ್ಥೆ ಜಯಂತಿ ವಂದಿಸಿದರು, ಡಾ ಶ್ವೇತಾ ಜವಳಿ ನಿರೂಪಿಸಿದರು ಡಾ. ಸುಚಿತ್ರಾ ರಾಟಿ, ಪ್ರೊ. ಅಮರನಾಥ, ಪ್ರೊ. ಬಶೀರ ಅಹ್ಮದ, ಕವಿತಾ ಕೆ. ಸಂಕಪ್ಪಾ ಗುಲಗಂಜಿ, ಮಂಜುನಾಥ ಪಾಟೀಲ, ಸತೀಶ ನಡಗಡ್ಡಿ, ಅಪ್ಪನಗೌಡ ಪಾಟೀಲ, ಗುರು ಗುಗ್ಗರಿ ಹಾಗೂ ಕಾಲೇಜಿನ ಅಧ್ಯಾಪಕರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿದ್ದರು.

Leave a Reply

ಹೊಸ ಪೋಸ್ಟ್‌