ವಿಜಯಪುರ: ಗಾಣಿಗ(Ganiga) ಗುರುಪೀಠದ(Gurupeetg) ಜಗದ್ಗುರು ಡಾ. ಜಯಬಸವ ಕುಮಾರ ಸ್ವಾಮೀಜಿ(Dr Jayabasava Kumar Swamiji) ಅವರ 43ನೇ ಗುರುವಂದನೆ(Guruvandane) ಕಾರ್ಯಕ್ರಮ ವಿಜಯಪುರ ನಗರದ ವನಶ್ರೀ ಸಂಸ್ಥಾನಮಠ(Vanashree Samstgananath) ಮೇ 17 ರಂದು ನಡೆಯಲಿದೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಶರಣಬಸಪ್ಪ ಅರಕೇರಿ ಮಂಗಳವಾರ ಶ್ರೀ ಮಠದಲ್ಲಿ ಬೆ. 11ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಗುರುವಂದನೆ ಕಾರ್ಯಕ್ರಮದ ಅಂಗವಾಗಿ ನಾನಾ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎಲ್ಲ ಸಮಾಜಗಳ ಧರ್ಮಗುರುಗಳು, ಮಠಾಧೀಶರನ್ನು ಆಮಂತ್ರಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಮೇ 17ರಂದು ಬೆ. 7.30 ಕ್ಕೆ ವನಶ್ರೀ ಸಂಸ್ಥಾನ ಮಠದ ಲಿಂ. ಜಯದೇವ ಜಗದ್ಗುರುಗಳ ಗದ್ದುಗೆಗೆ ಪೂಜೆ ನಡೆಯಲಿದೆ. ಬೆ. 8 ಕ್ಕೆ ಇಷ್ಟಲಿಂಗಪೂಜೆ ಮತ್ತು 201 ದಂಪತಿಗಳಿಗೆ ಲಿಂಗಧಾರಣೆ ಕಾರ್ಯಕ್ರಮ ನಡೆಯಲಿದೆ. ಅಂಧ ಮಕ್ಕಳಿಗೆ ಸಮವಸ್ತ್ರ ವಿತರಣೆ ಸೇರಿದಂತೆ ಹಲವಾರು ಸಮಾಜಮುಖಿ ಚಟುವಟಿಕೆಗಳು ನಡೆಯಲಿವೆ. ಬೆ. 11ಕ್ಕೆ ವನಶ್ರೀ ಸಂಸ್ಥಾನ ಮಠದ ಸಭಾ ಭವನದಲ್ಲಿ ರಾಜ್ಯದ ಸರ್ವಧರ್ಮದ ಮಠಾಧೀಶರ ಸಾನ್ನಿಧ್ಯದಲ್ಲಿ ಡಾ. ಜಯಬಸವ ಕುಮಾರ ಜಗದ್ಗುರುಗಳಿಗೆ ಭಕ್ತರಿಂದ ಗುರುವಂದನೆ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.
ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮತ್ಯುಂಜಯ ಸ್ವಾಮೀಜಿ, ಹಿರೇಹೊಸಳ್ಳಿಯ ರೆಡ್ಡಿ ಪೀಠದ ಶ್ರೀ ವೇಮನಾನಂದ ಗುರುಗಳು, ಚಿತ್ರದುರ್ಗ ಭೋವಿಪೀಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ, ಚಿಗರಳ್ಳಿಯ ಮರುಳಶಂಕರ ಪೀಠದ ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ, ಜ್ಞಾನಯೋಗಾಶ್ರದ ಶ್ರೀ ಬಸವಲಿಂಗ ಸ್ವಾಮೀಜಿ, ಶ್ರೀ ಸಿದ್ದುಮುತ್ತ್ಯಾ, ಶ್ರೀ ಶಿವಬಸವ ಸ್ವಾಮಿಗಳು, ಕೊಲ್ಹಾರದ ದಿಗಂಬರೇಶ್ವರದ ಮಠದ ಶ್ರೀ ಕಲ್ಲಿನಾಥ ಸ್ವಾಮಿಗಳು, ಶಂಕರಾನಂದ ಸ್ವಾಮಿಗಳು, ಶ್ರೀ ಅಡವಿಲಿಂಗ ಮಹಾರಾಜರು, ಮಾತೋಶ್ರೀ ಯೋಗೇಶ್ವರಿ ಮಾತಾಜಿ, ಶ್ರೀ ಅಮತಲಿಂಗ ಶಿವಾಚಾರ್ಯರು, ಸೇರಿದಂತೆ ನಾನಾ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ಅಲ್ಲದೇ,
ಮುಖ್ಯ ಅತಿಥಿಗಳಾಗಿ ಸಂಸದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಶಾಸಕರಾದ ರಮೇಶ ಭೂಸನೂರ, ಆನಂದ ನ್ಯಾಮಗೌಡ, ಮಾಜಿ ಎಂ ಎಲ್ ಸಿ ಗಳಾದ ಜಿ. ಎಸ್. ನ್ಯಾಮಗೌಡ, ಬಿ. ಜಿ. ಪಾಟೀಲ ಹಲಸಂಗಿ, ಮಾಜಿ ಶಾಸಕ ಎಸ್. ಕೆ. ಬೆಳ್ಳುಬ್ಬಿ, ಶಿವರಾಜ ಸಜ್ಜನ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಶರಣಬಸಪ್ಪ ಅರಕೇರಿ ತಿಳಿಸಿದರು.
ಈ ಸಂದರ್ಭದಲ್ಲಿ ಗಾಣಿಗ ಸಮಾಜದ ಮುಖಂಡ ಮಲ್ಲಿಕಾರ್ಜುನ ಲೋಣಿ, ಡಾ. ಬಾಬು ಸಜ್ಜನ, ಶಿವಕುಮಾರ ಸಜ್ಜನ, ಬಸವರಾಜ ಉಳ್ಳಾಗಡ್ಡಿ, ಸಂತೋಷ ಚೌಡಾಪೂರ ಮುಂತಾದವರು ಉಪಸ್ಥಿತರಿದ್ದರು.