ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆ ಮತ್ತು ಜಿಲ್ಲೆಯ ವಿದ್ಯಾರ್ಥಿಗಳು ಈ ಬಾರಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಬಂಪರ್ ಸಾಧನೆ ಮಾಡಿದ್ದಾರೆ. ರಾಜ್ಯಕ್ಕೆ ವಿಜಯಪುರ ಜಿಲ್ಲೆ ಮೊದಲು ಸ್ಥಾನ ಪಡೆದಿದ್ದು, ಪರೀಕ್ಷೆಗೆ ಹಾಜರಾದ ಶೇ. 87.57 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಅಲ್ಲದೇ, ಜಿಲ್ಲೆಯ ಏಳು ಜನ ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ, ಒಂದೇ ಸರಕಾರಿ ಶಾಲೆಯ ಇಬ್ಬರು ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.
ವಿಜಯಪುರ ತಾಲೂಕಿನ ಜುಮನಾಳದ ಸರಕಾರಿ ಪ್ರೌಢ ಶಾಲೆಯ ಅಮಿತ ಮಾದರ (ಕನ್ನಡ ಮಾಧ್ಯಮ), ಕಾರಜೋಳ ಕಿತ್ತೂರು ರಾಣಿ ವಸತಿ ಶಾಲೆಯ ವಿದ್ಯಾರ್ಥಿನಿಯರಾದ ಐಶ್ವರ್ಯ ಲಕ್ಷ್ಮಣ ಕನಸೆ, ಸ್ವಾತಿ ಗೌಡಪ್ಪ ಮಾಳೇದ, ಇಟ್ಟಂಗಿಹಾಳ ತುಂಗಳ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ರಕ್ಷಿತ ಸುರೇಶ ಚಿನಿವಾಲ, ಸಿಂದಗಿ ತಾಲೂಕಿನ ವಿಭೂತಿ ಹಳ್ಳಿ ಸರಕಾರಿ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ವಸತಿ ಶಾಲೆಯ ಶಿವಲೀಲಾ ಶಿವಲಿಂಗಪ್ಪ ದುರ್ಗೆ, ತಾಳಿಕೋಟೆಯ ಸರ್ವೋದಯ ವಿದ್ಯಾಪೀಠ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಶ್ರೇಯಾ ದೇಸಾಯಿ ಮತ್ತು ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟದ ಆಕ್ಸ್‍ಫರ್ಡ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಯಲ್ಲಾಲಿಂಗ ಬಸಪ್ಪ ಸೂಳಿಭಾವಿ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಬಸವನಾಡಿನ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ.
ಜಿಲ್ಲಾಡಳಿತದ ಪ್ರಯತ್ನಕ್ಕೆ ಸಂದ ಫಲ:
ವಿಜಯಪುರ ಜಿಲ್ಲೆ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಫಲಿತಾಂಶದಲ್ಲಿ ಹೆಸರು ಮಾಡಿದ್ದಕ್ಕಿಂತ ಹೆಚ್ಚಾಗಿ ಇತರ ಕಾರಣಗಳಿಗಾಗಿ ಖ್ಯಾತಿ ಪಡೆದಿತ್ತು. ಆದರೆ, ಈ ಬಾರಿ ವಿಜಯಪುರ ಜಿಲ್ಲಾಡಳಿತ ಮತ್ತು ಜಿ.ಪಂ. ನಡೆಸಿದ ಸಂಘಟಿತ ಪ್ರಯತ್ನದ ಫಲವಾಗಿ ಜಿಲ್ಲಾವಾರು ಫಲಿತಾಂಶದಲ್ಲಿ ವಿಜಯಪುರ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ.
ಕಳೆದ ಒಂದೂವರೆ ವರ್ಷದಿಂದ ಜಿಲ್ಲೆಯ ಶಿಕ್ಷಣ ಗುಣಮಟ್ಟ ಉತ್ತಮ ಪಡಿಸಲು ಹಿಂದಿನ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ಮತ್ತು ಹಿಂದಿನ ಜಿ.ಪಂ. ಸಿಇಓ ಗೋವಿಂದ ರೆಡ್ಡಿ ಹಾಗೂ ಹಾಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ಜಿ.ಪಂ. ಸಿಇಓ ರಾಹುಲ ಸಿಂಧೆ, ಡಿಡಿಪಿಐ ವಿ.ಎನ್.ಹೊಸೂರ ಮತ್ತು ಶಿಕ್ಷಣ ಇಲಾಖೆ ಸಿಬ್ಬಂದಿ ನಡೆಸಿದ ಸಂಘಟಿತ ಪ್ರಯತ್ನ ಈ ಫಲಿತಾಂಶಕ್ಕೆ ಕಾರಣವಾಗಿದೆ.
ಅಷ್ಟೇ ಅಲ್ಲ, ಹಿಂದಿನ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಗ್ರಾಮೀಣ ಭಾಗದಲ್ಲಿ ಪ್ರವಾಸದಲ್ಲಿದ್ದಾಗ ಸರಕಾರಿ ಶಾಲೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಸಲಹೆ ಸೂಚನೆ ನೀಡುತ್ತಿದ್ದರು. ಅಲ್ಲದೇ, ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಆಗಾಗ ಸಭೆ ನಡೆಸಿ, ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ರೀತಿಯಲ್ಲಿಯೇ ಆಗಾಗ ಕಿರುಪರೀಕ್ಷೆ ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಕುರಿತು ಆತ್ಮಸ್ಥೈರ್ಯ ತುಂಬಲು ಕಾರಣರಾಗಿದ್ದರು. ಅಲ್ಲದೇ, ಜಿಲ್ಲಾಧಿಕಾರಿಗಳ ಯೋಜನೆಗೆ ತಕ್ಕಂತೆ ಅಧಿಕಾರಿಗಳು ಕೂಡ ಸೂಕ್ತವಾಗಿ ಸ್ಪಂದಿಸಿದ್ದರು. ಇದರ ಫಲ ಈಗ ದೊರಕಿರುವದು ಬಸವ ನಾಡಿನ ಜನರ ಸಂತಸ ಹೆಚ್ಚಲು ಕಾರಣವಾಗಿದೆ.