ವಿಜಯಪುರ: ಎಸ್ ಎಸ್ ಎಲ್ ಸಿ(SSLC) ಫಲಿತಾಂಶದಲ್ಲಿ(Result) ವಿಜಯಪುರ ಜಿಲ್ಲೆ(Vijayapura District) ಶೇಕಡಾವಾರಿನಲ್ಲಿ(Percentage) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ ಎಂಬ ಸುದ್ದಿ ಸಖತ್ ಸೌಂಡ್ ಮಾಡಿತ್ತು. ಆದರೆ, ಈ ಕುರಿತು ವಿಜಯಪುರ ಜಿಲ್ಲಾಡಳಿತ ಸಂಜೆ ಜಿಲ್ಲೆ ಮೊದಲ ಸ್ಥಾನದಲ್ಲಿದೆ ಎಂದು ನೀಡಿದ್ದ ಮಾಹಿತಿ ರಾತ್ರಿಯ ವೇಳೆಗೆ ಬದಲಾಯಿಸಿತು. ಜಿಲ್ಲೆ ಎ ಗ್ರೇಡ್(A Grade) ಪಡೆದಿದೆ ಎಂದು ಸ್ಪಷ್ಟಪಡಿಸಲಾಯಿತು.
ಈ ಕುರಿತು ಸ್ಪಷ್ಟನೆ ನೀಡಿದ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮವರ, ವಿಜಯಪುರ ಜಿಲ್ಲೆ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಎ ಗ್ರೇಡ್ ಪಡೆದಿದೆ. ಶೇಕಡಾವಾರು ಪಟ್ಟಿಯಲ್ಲಿ 21ನೇ ಸ್ಥಾನದಲ್ಲಿದೆ ಎಂದು ಸ್ಪಷ್ಟಪಡಿಸಿದರು. ಶಿಕ್ಷಣ ಇಲಾಖೆಯ ಯಡವಚ್ಚಿನಿಂದಾಗಿ ಮೊದಲು ನೀಡಿದ ಮಾಹಿತಿಗೆ ಸ್ಪಷ್ಟನೆ ನೀಡುವ ಮೂಲಕ ಗೊಂದಲಗಳಿಗೆ ತೆರೆ ಎಳೆಯಲಾಯಿತು.
ಈ ಎಲ್ಲ ಗೊಂದಲಗಳೇನೇ ಇದ್ದರೂ ಈ ಬಾರಿ ಫಲಿತಾಂಶದಲ್ಲಿ ಬಸವ ನಾಡಿನ ಏಳು ಜನ ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು ಮಾತ್ರ ಶ್ಲಾಘನೀಯವಾಗಿದೆ. ಅಲ್ಲದೇ, ಇಡೀ ವಿಜಯಪುರ ಜಿಲ್ಲೆಯ ಜನ ಹೆಮ್ಮೆಪಡುವಂತಾಗಿದೆ.