SSLC Rank Honour: 10ನೇ ತರಗತಿ ಪರೀಕ್ಷೆಯಲ್ಲಿ ಶೇ. 100 ಅಂಕ ಗಳಿಸಿದ ಬಸವ ನಾಡಿನ ಏಳು ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತ, ಜಿ. ಪಂ. ವತಿಯಿಂದ ಸನ್ಮಾನ

ಪರೀಕ್ಷೆಯಲ್ಲಿ ಶೇ. 100 ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಜಿಲ್ಲಾಡಳಿತ, ಜಿ. ಪಂ. ವತಿಯಿಂದ ಗೌರವಿಸಲಾಯಿತು

ವಿಜಯಪುರ: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ(SSLC Exam) ಶೇ. 100 ಅಂಕ ಗಳಿಸಿದ(100% Marsk) ಅಂದರೆ 625ಕ್ಕೆ 625 ಅಂಕಗಳಿಸಿದ ವಿಜಯಪುರ ಜಿಲ್ಲೆಯ(Vijayapura District) ನಾನಾ ಪ್ರೌಢಶಾಲೆಗಳ ಏಳು ವಿದ್ಯಾರ್ಥಿಗಳಿಗೆ(Various School Students) ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ಸನ್ಮಾನ ಸಮಾರಂಭ ವಿಜಯಪುರ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಮಕ್ಕಳೊಂದಿಗೆ ಆಗಮಿಸಿದ ವಿದ್ಯಾರ್ಥಿಗಳ ಪಾಲಕರು ಮತ್ತು ವಿದ್ಯಾರ್ಥಿಗಳಿಗೆ ಕಲಿಸಿದ ಶಿಕ್ಷಕರಿಗೂ ಇದೆ ಸಂದರ್ಭದಲ್ಲಿ ಸನ್ಮಾನ ನಡೆದಿದ್ದು ವಿಶೇಷವಾಗಿತ್ತು.  ಜುಮನಾಳ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಅಮಿತ್ ಮಾದರ, ಕಾರಜೋಳ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರಾದ ಐಶ್ವರ್ಯಾ ಕನಸೆ ಮತ್ತು ಸ್ವಾತಿ ಮಾಳೆದ, ತುಂಗಳ ಪ್ರೌಢಶಾಲೆಯ ರಕ್ಷಿತ ಚಿನಿವಾರ, ತಾಳಿಕೋಟೆ ಸರ್ವಜ್ಞ ವಿದ್ಯಾಪೀಠದ ವಿದ್ಯಾರ್ಥಿನಿ ಶ್ರೇಯಾ ದೇಸಾಯಿ, ಮುದ್ದೇಬಿಹಾಳದ ನಾಗರಬೆಟ್ಟ ಆಕ್ಸ್ಫರ್ಡ್ ಪ್ರೌಢಶಾಲೆಯ ವಿದ್ಯಾರ್ಥಿ ಯಲ್ಲಾಲಿಂಗ ಸೂಳಿಬಾವಿ, ಸಿಂದಗಿಯ ಕಿತ್ತೂರ ಚೆನ್ನಮ್ಮ ಬಾಲಕಿಯರ ವಸತಿ ಶಾಲೆಯ ಶಿವಲೀಲಾ ದುರ್ಗೆ ಅವರಿಗೆ ಇದೆ ವೇಳೆ ಸನ್ಮಾನ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ಗುಣಾತ್ಮಕ ಫಲಿತಾಂಶದಲ್ಲಿ ವಿಜಯಪುರ ಜಿಲ್ಲೆಯ ಅತ್ಯುನ್ನತ ಸ್ಥಾನ ಗಳಿಸಿದೆ.  ಹಿಂದಿನ ಜಿಲ್ಲಾಧಿಕಾರಿಗಳು, ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಸೇರಿದಂತೆ ಡಿಡಿಪಿಐ, ಬಿಇಓ ಹಾಗೂ ಎಲ್ಲ ಶಿಕ್ಷಕರ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದz.  ಅವರಿಗೂ ವಿಶೇಷ ಅಭಿನಂದನೆಗಳು.  ಹಿಂದಿನ ಜಿಲ್ಲಾಧಿಕಾರಿಗಳು, ಜಿ. ಪಂ. ಸಿಇಓ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿದ್ದು ಕೂಡ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ ಎಂದು ಅವರು ಹೇಳಿದರು.

ಪರೀಕ್ಷೆಯ ಪ್ರತಿ ಹಂತದಲ್ಲೂ ಅತ್ಯಂತ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಲಾಗಿದ್ದು, ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮ, ಸತತ ಅಧ್ಯಯನ, ಪಾಲಕರ ಪ್ರೋತ್ಸಾಹ ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಗ್ರಾಮೀಣ ಪ್ರದೇಶದ ಹಿನ್ನೆಲೆ, ಬಡತನ ಎಲ್ಲವನ್ನೂ ಮೀರಿ ವಿದ್ಯಾರ್ಥಿಗಳು ಈ ಸಾಧನೆ ಮಾಡಿರುವುದು ಅತ್ಯಂತ ಶ್ಲಾಘನೀಯ ಎಂದು ಅವರು ಹೇಳಿದರು.

ಕೊರೊನಾದಿಂದ ಚೇತರಿಸಿಕೊಂಡು ವಿದ್ಯಾರ್ಥಿಗಳು ಕಠಿಣ ಪರಿಶ್ರಮ ವಹಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.  ಈ ಮೂಲಕ ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಜಿಲ್ಲೆಯು ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯಿಂದ ಹೊರಬಂದಂತಾಗಿದೆ.  ಮುಂದಿನ ದಿನಗಳಲ್ಲಿಯೂ ಇದನ್ನು ಕಾಪಾಡಿಕೊಂಡು, ಇನ್ನಷ್ಟು ಒಳ್ಳೆಯ ಫಲಿತಾಂಶ ತರಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.

ಇನ್ನು ಇಂತಹದೊಂದು ದೊಡ್ಡ ಸಾಧನೆ ಮಾಡಿದ ವಿದ್ಯಾರ್ಥಿಗಳು ಇದನ್ನು ತಮ್ಮ ತಲೆಗೇರಿಸಿಕೊಳ್ಳಬಾರದು.  ಎಸ್.ಎಸ್.ಎಲ್.ಸಿ ಒಂದು ಹಂತವಷ್ಟೇ, ಮುಂದೆಯೂ ಇನ್ನಷ್ಟು ಕಠಿಣ ಪರಿಶ್ರಮಪಟ್ಟು ಭವಿಷ್ಯದಲ್ಲಿ ಉನ್ನತ ಗುರಿ ಸಾಧಿಸುವಂತಾಗಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಅವರು ಹೇಳಿದರು.

ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ನಿಲ್ಲಿಸಬಾರದು. ಸರ್ಕಾರದಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತ ಹಾಸ್ಟೇಲ್, ಸ್ಕಾಲರ್‌ಶೀಪ್‌ಗಳಂತಹ ಅನೇಕ ಯೋಜನೆಗಳಿದ್ದು, ಅವುಗಳನ್ನು ಸದುಪಯೋಗಪಡೆಸಿಕೊಳ್ಳಬೇಕು ಎಂದು ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸಲಹೆ ನೀಡಿದರು.
ಇದನ

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಯಾವ ವಿಷಯದಲ್ಲಿ ಆಸಕ್ತಿ ಇದೆಯೋ ಅದರಲ್ಲೇ ಮುಂದುವರೆಯಲು ಪಾಲಕರು ಪ್ರೋತ್ಸಾಹ ನೀಡಬೇಕು.  ಅವರ ಮೇಲೆ ಅನಗತ್ಯ ಒತ್ತಡ ಹೇರಬಾರದು.  ಆಸಕ್ತಿ ಇದ್ದ ವಿಷಯದಲ್ಲಿ ಮಾತ್ರ ವಿದ್ಯಾರ್ಥಿಗಳು ಮಹತ್ತರವಾದ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ ಒಂದು ಆರಂಭಿಕ ಹಂತ, ಆದರೆ ಜೀವನ ಪಯಣ ದೊಡ್ಡದಾಗಿದೆ.  ಈ ದಾರಿಯಲ್ಲಿ ಸಾಗುವಾಗ ಯಾವುದೇ ರೀತಿಯ ಸವಾಲು ಎದುರಾದರೂ ಆತ್ಮವಿಶ್ವಾಸ ಕಳೆದುಕೊಳ್ಳದೇ ಮುನ್ನಡೆಯಬೇಕು.  ಅಂತೆಯೇ ಪರೀಕ್ಷೆಗಳಲ್ಲಿ ಫೇಲ್ ಆದ ವಿದ್ಯಾರ್ಥಿಗಳು ಬುದ್ಧಿವಂತರಲ್ಲ ಎಂಬ ಭಾವನೆ ತಪ್ಪು, ಅವರು ಇನ್ನಷ್ಟು ಪರಿಶ್ರಮ ಪಟ್ಟರೆ ತೇರ್ಗಡೆ ಹೊಂದಬಹುದು. ಅಲ್ಲದೇ ಬೇರೆ ಬೇರೆ ಕ್ಷೇತ್ರಗಳಲ್ಲಿಯೂ ಅವರು ಉತ್ತಮ ಸಾಧನೆ ಮಾಡಬಹುದು. ಇದಕ್ಕೆ ಪಾಲಕರ ಹಾಗೂ ಶಿಕ್ಷಕರ ಸೂಕ್ತ ಮಾರ್ಗದರ್ಶನವೂ ಅಗತ್ಯ. ತಮ್ಮೊಂದಿಗೆ ಓದುತ್ತಿದ್ದ ಅದೆಷ್ಟೋ ಸ್ನೇಹಿತರು ಇಂದು ವ್ಯಾಪಾರೋದ್ಯಮಗಳಲ್ಲಿ ಗಣಣೀಯ ಸಾಧನೆ ಮಾಡಿದ್ದಾರೆ ಎಂದು ಅವರು ಹೇಳಿದರು.

ಜಿಲ್ಲೆಯ ವಿದ್ಯಾರ್ಥಿಗಳ ಈ ಸಾಧನೆಗೆ ಹಿಂದಿನ ಜಿಲ್ಲಾಧಿಕಾರಿಗಳು, ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಸೇರಿದಂತೆ ಡಿಡಿಪಿಐ, ಬಿಇಒ ಹಾಗೂ ಎಲ್ಲ ಶಿಕ್ಷಕರೂ ಕಾರಣರಾಗಿದ್ದಾರೆ.  ಅವರೆಲ್ಲರಿಗೂ ವಿಶೇಷ ಅಭಿನಂದನೆಗಳು.  ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಗಳಲ್ಲಿ ಜಿಲ್ಲೆಯ ಸಾಧನೆಗೆ ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಪಾಲಕರ ಪ್ರೋತ್ಸಾಹ ಹಾಗೂ ಶಿಕ್ಷಕರ ಮಾರ್ಗದರ್ಶನ ಕಾರಣವಾಗಿದೆ. ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಸಾಧನೆ ಮಾಡಲು ಶ್ರಮ ವಹಿಸಲಾಗುವುದು ಎಂದು ಹೇಳಿದರು.

ವಿದ್ಯಾರ್ಥಿಗಳು ಮುಂದೆ ಐಎಎಸ್ ನಂತಹ ಸಿವಿಲ್ ಸರ್ವೀಸ್ ಹಾಗೂ ಐಐಟಿ ಗಳಲ್ಲಿ ಓದಲು ಉತ್ಸುಕರಾಗಿರುವುದು ಬಹಳ ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಹೇಳಿದ ಅವರು, 2008ರಲ್ಲಿ ತಮಗೂ ಹೀಗೊಂದು ಬೀದರ್ ಜಿಲ್ಲಾಡಳಿತದಿಂದ ಸನ್ಮಾನ ನಡೆಯಿತು ಎಂಬ ಸಂತಸದ ಕ್ಷಣವನ್ನು ಮೆಲುಕು ಹಾಕಿದರು.

ಡಿಡಿಪಿಐ ಎನ್. ವಿ. ಹೊಸೂರ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಅಭೂತಪೂರ್ವ ಸಾಧನೆಯ ಮೂಲಕ ಜಿಲ್ಲೆಯು ರಾಜ್ಯದ ಗಮನ ಸೆಳೆದಿದೆ.  ಜಿಲ್ಲೆಯ ವಿದ್ಯಾರ್ಥಿಗಳು ತಮ್ಮ ಈ ಸಾಧನೆಯ ಮೂಲಕ ತವರಿಗೆ ಕೀರ್ತಿ ತಂದಿದ್ದಾರೆ.  ಗುಣಾತ್ಮಕ ಶಿಕ್ಷಣದತ್ತ ಜಿಲ್ಲೆ ದಾಪುಗಾಲಿಡುತ್ತಿದೆ. ಜಿಲ್ಲೆ ಶೈಕ್ಷಣಿಕವಾಗಿ ಮುಂದೆ ಸಾಗುತ್ತಿದ್ದು, ಈ ವಿಷಯದಲ್ಲಿ ಶಿಕ್ಷಕರ ಶ್ರಮವೂ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಹಿಂದಿನ ಜಿಲ್ಲಾಧಿಕಾರಿಗಳು, ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಸೇರಿದಂತೆ ಎಲ್ಲ ಶಿಕ್ಷಕರ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದ್ದು, ಹಿಂದಿನ ಜಿಲ್ಲಾಧಿಕಾರಿಗಳು, ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿದ್ದು ಕೂಡ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕವಾಗಿದೆ.  ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

 

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸುರೇಶ ಶೆಡಶ್ಯಾಳ ಸೇರಿದಂತೆ ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌