ವಿಜಯಪುರ: ಡೋಣಿ ನದಿ ಹೂಳು(Doni River Silt) ತುಂಬಿ ನದಿ ಪಥ ಬದಲಿಸಿ, ಪ್ರವಾಹ(Flood) ಉಂಟಾಗಿ ರೈತರ ಜಮೀನಿಗೆ ಹಾನಿಯಾಗುತ್ತಿರುವ(Farmers Problem) ಕುರಿತು ಜಾಗೃತಿ ಮೂಡಿಸುತ್ತಿರುವ ಜಲ ಬಿರಾದರಿ(Jal Biradari) ಸಂಘಟನೆ ಆಹ್ವಾನದ ಮೆರೆಗೆ ಹೊನಗನಹಳ್ಳಿಯ ಹತ್ತಿರ ಡೋಣಿ ನದಿ ವೀಕ್ಷಿಸಿದ ಜಲತಜ್ಞ, ಮ್ಯಾಗ್ಸಸ್ಸೆ ಪ್ರಶಸ್ತಿ ಪುರಸ್ಕೃತ ಡಾ. ರಾಜೇಂದ್ರಸಿಂಗ್(Dr Rajendrasing ನಂತರ ವಿಜಯಪುರದಲ್ಲಿ ಮಾಜಿ ನೀರಾವರಿ ಸಚಿವ ಎಂ. ಬಿ .ಪಾಟೀಲ ಅವರೊಂದಿಗೆ ಹಾಗೂ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿ, ಚರ್ಚಿಸಿದರು.
ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಪಾಲ್ಗೊಂಡು, ವಿಜಯಪುರಕ್ಕೆ ಆಗಮಿಸಿದ ಡಾ.ರಾಜೇಂದ್ರಸಿಂಗ್ ಜಿಲ್ಲಾಧಿಕಾರಿ ಕಛೇರಿಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಡೋಣಿ ನದಿ ಪ್ರವಾಹಕ್ಕೆ ಕಾರಣವಾಗಿರುವ ಅಂಶಗಳನ್ನು ವಿವರಿಸಿ, ಮುಖ್ಯವಾಗಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಸೇತುವೆಗಳು (ಸೇತುವೆಗಳನ್ನು ನಿರ್ಮಾಣ ಸಂದರ್ಭದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ರಸ್ತೆಗಳು ಹಾಗೆಯೇ ಇರುವುದು) ನದಿಯಲ್ಲಿ ಬಳ್ಳಾರಿ ಜಾಲಿ ಬೆಳೆದಿರುವುದು ಮುಖ್ಯ ಕಾರಣವಾಗಿದ್ದು, ನದಿ ವ್ಯಾಪ್ತಿಯ ಸ್ಥಳೀಯ ಗ್ರಾಮ ಪಂಚಾಯಿತಿಗಳಿಂದ ಮಹತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಕೈಗೊಂಡು ಹೂಳು ಸ್ವಚ್ಚಗೊಳಿಸಲು ಒತ್ತು ನೀಡಿ ಎಂದು ಹೇಳಿದರು.
ನಂತರ ಡಾ. ರಾಜೇಂದ್ರಸಿಂಗ್ ಅವರೊಂದಿಗೆ ಈ ಕುರಿತು ಚರ್ಚಿಸಿದ ಮಾಜಿ ಸಚಿವ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರು, ತಾವು ಜಲಸಂಪನ್ಮೂಲ ಸಚಿವನಾಗಿದ್ದಾಗ ಕೇಂದ್ರ ಸರಕಾರ ಸ್ವಾಮ್ಯದ ವ್ಯಾಪಕೋ ಸಂಸ್ಥೆ ಡೋಣಿ ನದಿಯನ್ನು ಸರ್ವೇ ಮಾಡಿ, ಸವಿವರ ರಿಪೋರ್ಟ್ ಪಡೆಯಲಾಗಿತ್ತು. ಅದರ ಅನ್ವಯ ಅಪಾರ ಮೊತ್ತದ ಯೋಜನೆಯ ಪ್ರಸ್ತಾವನೆ ವೆಚ್ಚದಾಯಕವಾಗಿರುವ ಕಾರಣ ಪ್ರವಾಹ ನಿಯಂತ್ರಣ ಯೋಜನೆಯಡಿ ಹಣ ಒದಗಿಸುವಂತೆ ಕೇಂದ್ರ ಸರಕಾರಕ್ಕೆ ಕೇಳಲಾಗಿತ್ತು. ಪ್ರಸ್ತಾವನೆ ಕೇಂದ್ರದಲ್ಲಿಯೇ ಬಾಕಿ ಉಳಿದಿದೆ. ಹೊಸ ದರಪಟ್ಟಿಯ ಅನುಸಾರ ಇನ್ನೊಂದು ಪ್ರಸ್ತಾವನೆಯನ್ನು ಜಲತಜ್ಞ ಡಾ. ವಿ. ಪಿ. ಹುಗ್ಗಿ ಅವರ ನೇತೃತ್ವದಲ್ಲಿ ತಯಾರಿಸಿ ನೀಡಲಾಗುವುದು. ತಾವೇ ನೇತೃತ್ವ ವಹಿಸಿ, ಕೇಂದ್ರ ಸರಕಾರದ ಮನವೊಲಿಸಬೇಕು. ತಮಗೆ ಪಕ್ಷಾತೀತವಾಗಿ ಎಲ್ಲ ಸರಕಾರಗಳು ಮನ್ನಣೆ ನೀಡುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಲ ಬಿರಾದರಿ ಸಂಘಟನೆಯ ಪೀಟರ್ ಅಲೆಕ್ಸಾಂಡರ್, ಪರಿಸರ ತಜ್ಞ ಎನ್. ಡಿ. ಪಾಟೀಲ ಡೊಮನಾಳ, ಡಾ. ವಿ. ಪಿ. ಹುಗ್ಗಿ, ಡಾ. ಮಹಾಂತೇಶ ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು.