ವಿಜಯಪುರ: ಜಿಲ್ಲೆಯ ಪ್ರತಿಯೊಬ್ಬ ವಿಕಲಚೇತನರಿಗೆ ವಿಶಿಷ್ಠ ಗುರುತಿನ ಚೀಟಿ ನೀಡಲು ತಾಲೂಕು ಆಸ್ಪತ್ರೆಗಳಲ್ಲಿ ಎರಡು ದಿನಗಳ ವಿಶೇಷ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎೞದು ಜಿ. ಪಂ. ಸಿಇಓ ರಾಹುಲ ಶಿಂಧೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲಾ ಪಂಚಾಯಿತಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆ ಇವರ ಸಹಯೋಗದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಪ್ರತಿಯೊಬ್ಬ ವಿಕಲಚೇತನರಿಗೆ ವಿಕಲಚೇತನರ ವಿಶಿಷ್ಠ ಗುರುತಿನ ಚೀಟಿ ನೀಡಲಾಗುತ್ತದೆ. ಇದರ ಅಂಗವಾಗಿ ತಪಾಸಣೆ ಶಿಬಿರದ ದಿನದಂದು ಪ್ರತಿಯೊಬ್ಬ ತಜ್ಞ ವೈದ್ಯರು ಹಾಜರಿರುವವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ವಿಕಲಚೇತನ ಫಲಾನುಭವಿಗಳು ತಂತಮ್ಮ ಗ್ರಾಮಗಳಿಂದ ಆಸ್ಪತ್ರೆಗೆ ಬಂದು ಹೋಗಲು ಅನುಕೂಲವಾಗುವಂತೆ ಪ್ರತಿ ಗ್ರಾಮ ಪಂಚಾಯಿತಿಗಳಿಂದ ವ್ಯವಸ್ಥಿತ ವಾಹನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇಂಡಿ ತಾಲೂಕಿನಲ್ಲಿ ಯಶಸ್ವಿ
ಇಂಡಿ ತಾಲೂಕಿನಲ್ಲಿ ಮೇ 24 ಮತ್ತು ಮೇ 25ರವರೆಗೆ ಎರಡು ದಿನ ನಡೆದ ವಿಶೇಷ ತಪಾಸಣೆ ಶಿಬಿರ ಯಶಸ್ವಿಯಾಗಿದೆ. 700ಕ್ಕೂ ಹೆಚ್ಚು ಜನ ವಿಕಲಚೇತನರು ತಪಾಸಣೆಗೆ ಒಳಗಾಗಿ ವಿಶೇಷ ಸೌಲಭ್ಯ ಪಡೆದಿದ್ದಾರೆ. ಶ್ರವಣ ದೋಷವುಳ್ಳ ವಿಕಲಚೇತನರನ್ನು ಹೊರತುಪಡಿಸಿ ಇನ್ನುಳಿದ ದೈಹಿಕ, ಬೌದ್ಧಿಕ ವಿಕಲತೆ, ಮಾನಸಿಕ ಅಸ್ವಸ್ಥರು, ದೃಷ್ಟಿ ದೋಷವುಳ್ಳ ವಿಕಲಚೇತನರು ವಿಶೇಷ ತಪಾಸಣೆಗೆ ಒಳಗಾಗಿ ವಿಶಿಷ್ಠ ಗುರುತಿನ ಚೀಟಿ ಪಡೆಯಲು ಮುಂದಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಒಂದೇ ಸ್ಥಳದಲ್ಲಿ ತಜ್ಞ ವೈದ್ಯರು ಲಭ್ಯವಿರುವುದರಿಂದ ಪ್ರತಿಯೊಬ್ಬ ಅರ್ಹ ವಿಕಲಚೇತನರು ಯಾವುದೇ ಸಮಸ್ಯೆ ಇಲ್ಲದೇ ವಿಶಿಷ್ಠ ಗುರುತಿನ ಚೀಟಿಯನ್ನು ಪಡೆಯಲು ಸಹಾಯವಾಗಿದೆ. ಇಲ್ಲಿಯವರೆಗೆ ಅರ್ಜಿ ಸಲ್ಲಿಸದ ವಿಕಲಚೇತನರ ಅರ್ಜಿಗಳನ್ನು ಶಿಬಿರದ ದಿನದಂದೇ ಪಡೆದು ತಪಾಸಣೆಗೆ ಒಳಗಾಗಿ ವಿಕಲಚೇತನರ ವಿಶಿಷ್ಠ ಗುರುತಿನ ಚೀಟಿಗಳನ್ನು ನೀಡುವಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇದರಿಂದಾಗಿ ಈವರೆಗೆ 635 ಜನ ವಿಕಲಚೇತನರು ವಿಶಿಷ್ಠ ಗುರುತಿನ ಚೀಟಿಗಳನ್ನು ಪಡೆಯುವಂತಾಗಿದೆ ಎಂದು ಸಿಇಓ ಅವರು ತಿಳಿಸಿದ್ದಾರೆ.
ಅಧಿಕಾರಿಗಳ ಕಾರ್ಯಕ್ಕೆ ಶ್ಲಾಘನೆ
ಇಂಡಿ ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ, ತಾ. ಪಂ. ನ ಇಓ ಸುನೀಲ ಮದ್ದಿನ, ತಾ. ಪಂ. ಸಹಾಯಕ ನಿರ್ದೇಶಕ ಸಂಜಯ ಖಡಗೇಕರ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆಶು ನದಾಫ, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ. ಗುಣಾರೆ, ಇಂಡಿ ತಾಲೂಕ ವೈದ್ಯಾಧಿಕಾರಿ ಅರ್ಚನಾ ಕುಲಕರ್ಣಿ, ಇಂಡಿ ತಾಲೂಕಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಆರ್. ಟಿ. ಕೇಳೆಕರ ಹಾಗೂ ಇತರರು ಇಂಡಿ ತಾಲೂಕಿನಲ್ಲಿ ನಡೆದ ಎರಡು ದಿನಗಳ ವಿಶೇಷ ಶಿಬಿರವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದು ವಿಜಯಪುರ ಜಿ. ಪಂ. ಸಿಇಓ ರಾಹುಲ ಶಿಂಧೆ ಅಧಿಕಾರಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.