ವಿಜಯಪುರ: ವಾಯುವ್ಯ ಶಿಕ್ಷಕರ(Northwest Teachers) ಮತ್ತು ಪದವೀಧರ(Graduates) ಮತಕ್ಷೇತ್ರಕ್ಕೆ(Cosntituency) ನಡೆಯುತ್ತಿರುವ ಚುನಾವಣೆ ಪ್ರಚಾರ ಜೋರಾಗಿದ್ದು, ವಿಜಯಪುರ ನಗರದಲ್ಲಿ ಸಂಸದ ರಮೇಶ ಜಿಗಜಿಣಗಿ(MP Ramesh Jigajinagi) ಮತ್ತು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ(Appu Pattanashetty) ಜಂಟಿಯಾಗಿ ಪ್ರಚಾರ ಕೈಗೊಂಡಿದ್ದಾರೆ.
ಬೆಳಿಗ್ಗೆ ವಿಜಯಪುರ ನಗರದ ಸುಕೂನ ಕಾಲನಿ ಬಳಿ ಇರುವ ಪ್ರಕೃತಿ ಕಾಲನಿಯಲ್ಲಿ ಕೇಂದ್ರ ಮಾಜಿ ಸಚಿವರೂ ಆಗಿರುವ ರಮೇಶ ಜಿಗಜಿಣಗಿ ಮತ್ತು ಅಪ್ಪು ಪಟ್ಟಣಶೆಟ್ಟಿ ಬಿಜೆಪಿ ಅಭ್ಯರ್ಥಿಗಳಾದ ಅರುಣ ಶಹಾಪುರ(ಶಿಕ್ಷಕರ ಮತಕ್ಷೇತ್ರ) ಮತ್ತು ಹಣಮಂತ ರುದ್ರಪ್ಪ ನಿರಾಣಿ(ಪದವೀಧರ ಮತಕ್ಷೇತ್ರ) ಪರ ಬಿರುಸಿನ ಪ್ರಚಾರ ನಡೆಸಿದರು. ಬಿಜೆಪಿಯಿಂದ ಸ್ಪರ್ಧಿಸಿರುವ ಇಬ್ಬರೂ ಅಭ್ಯರ್ಥಿಗಳನ್ನು ಬೆಂಬಲಿಸಿ ಮತ ಹಾಕುವಂತೆ ಉಭಯ ಮುಖಂಡರು ಮತದಾರರಲ್ಲಿ ಮನವಿ ಮಾಡಿದರು.
ಜೂ. 13 ರಂದು ಈ ಚುನಾವಣೆ ನಡೆಯಲಿದ್ದು, ಅರುಣ ಶಹಾಪುರ ವಿಜಯಪುರ ಜಿಲ್ಲೆಯವರಾಗಿದ್ದರೆ, ಹಣಮಂತ ರುದ್ರಪ್ಪ ನಿರಾಣಿ ಬಾಗಲಕೋಟೆ ಜಿಲ್ಲೆಯವರಾಗಿದ್ದಾರೆ. ವಾಯುವ್ಯ ಶಿಕ್ಷಕರ ಮತಕ್ಷೇತ್ರ ಬೆಳಗಾವಿ, ಚಿಕ್ಕೋಡಿ, ವಿಜಯಪುರ ಮತ್ತು ಬಾಗಲಕೋಟೆ ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ. ಹೈಸ್ಕೂಲ್, ಪಿಯು, ಪದವಿ ಮಹಾವಿದ್ಯಾಲಯಗಳು ಹಾಗೂ ವಿಶ್ವವಿದ್ಯಾಲಯಗಳ ಶಿಕ್ಷಕರು ಈ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. ಇನ್ನು ಪದವೀಧರ ಮತಕ್ಷೇತ್ರ ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದ್ದು, ಪದವೀಧರ ಮತದಾರರು ಈ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಸಂಸದ ರಮೇಶ ಜಿಗಜಿಣಗಿ ಮತ್ತು ಅಪ್ಪು ಪಟ್ಟಣಶೆಟ್ಟಿ ಕೈಗೊಂಡ ಪ್ರಚಾರ ಸಂದರ್ಭದಲ್ಲಿ ಬಿಜೆಪಿ ಪ್ರಭಾರಿ ಸಂಘಟನಾ ಕಾರ್ಯದರ್ಶಿಗಳು ಪ್ರಕಾಶ ಅಕ್ಕಲಕೋಟ, ಚಂದ್ರಶೇಖರ ಕವಟಗಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ವಿಜಯಪುರ ನಗರ ಬಿಜೆಪಿ ಮಂಡಲ ಅಧ್ಯಕ್ಷ ಮಳುಗೌಡ ಪಾಟೀಲ, ಮಹಾನಗರ ಪಾಲಿಕೆಯ ಮಾಜಿ ಉಪಮೇಯರ ಗೋಪಾಲ ಘಟಕಾಂಬಳೆ, ಬಿಜೆಪಿ ಮುಖಂಡರಾದ ಸುರೇಶ ಬಿರಾದಾರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.