ಮಹೇಶ ವಿ. ಶಟಗಾರ
ವಿಜಯಪುರ: ಅವ್ವ, ಅಮ್ಮ, ತಾಯಿ(Mother) ಈ ಒಂದು ಶಬ್ದ ಮಕ್ಕಳಲ್ಲಿ(Children) ಚೈತನ್ಯ ತುಂಬುತ್ತದೆ. ಪ್ರತಿಯೊಬ್ಬ ಮಕ್ಕಳ ಯಶಸ್ಸಿನಲ್ಲಿ(Success) ತಾಯಿಯೇ ಮೊದಲ ಗುರುವಾಗಿರುತ್ತಾಳೆ(Teacher). ಸದಾ ಮಕ್ಕಳ ಶ್ರೇಯೋಭಿವೃದ್ಧಿ(Welfare) ಬಯಸುವ ತಾಯಿಯ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ.
ತಮ್ಮ ಜೀವನ ರೂಪಿಸಿದ ತಾಯಿಯ ನೆನಪಿನಲ್ಲಿ ಆಕೆಯ ಮಕ್ಕಳು ಸೇರಿಕೊಂಡು ಪಿರಾಮಿಡ್ ಮಾದರಿಯಲ್ಲಿ ಅಮ್ಮನ ಮಂದಿರ ನಿರ್ಮಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಅಮ್ಮನ ಮಂದಿರ ನಿರ್ಮಾಣವಾಗಿರುವುದು ಬಸವ ನಾಡು ವಿಜಯಪುರ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ.
ವಿಜಯಪುರ ನಗರದ ಜಲನಗರ ನಿವಾಸಿಯಾಗಿರುವ ಸಿದ್ರಾಮಪ್ಪ ಕುಮಾನಿ ಅವರ ಪತ್ನಿ ಪ್ರೇಮಾವತಿ ಮೂರು ವರ್ಷಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡು ನಂತರ ನಿಧನರಾಗಿದ್ದರು. ಇವರ ಪುತ್ರರಾದ ರಾಜಕುಮಾರ, ಗಂಗುಬಾಯಿ, ದುಂಡಪ್ಪ, ಶ್ರೀಶೈಲ, ಪ್ರಕಾಶ ಮತ್ತು ಚಿಕ್ಕಪ್ಪನ ಮಕ್ಕಳಾದ ಮಲ್ಲಿಕಾರ್ಜುನ, ಗಿರೀಶ ಹಾಗೂ ಶೋಭಾ ಸೇರಿಕೊಂಡು ಪ್ರೇಮಾವತಿ ಅವರ ವಿಚಾರಧಾರೆಗಳು ಸದಾ ತಮ್ಮೋಂದಿಗಿರಲಿ ಎಂಬ ಮಹದಾಸೆಯಿಂದ ಹೊನ್ನಳ್ಳಿ ಗ್ರಾಮದಲ್ಲಿರುವ ಶಿವಶರಣೆ ನೆಲ್ಲೂರು ನಿಂಬೆಕ್ಕ ಪ್ರೌಢಶಾಲೆಯ ಆವರಣದಲ್ಲಿ ಪಿರಾಮಿಡ್ ಆಕೃತಿಯ ಅಮ್ಮನ ಮಂದಿರ ನಿರ್ಮಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಅಮ್ಮನ ಮಂದಿರದಲ್ಲಿ ಲಿಂಗ ಪ್ರತಿಷ್ಠಾಪನೆ ಕಾರ್ಯಕ್ರಮ ಜೂ. 1 ರಂದು ಬುಧವಾರ ನಡೆಯಲಿದೆ.
ಪ್ರೇಮಾವತಿ ಅವರ ಹಿರಿಯ ಪುತ್ರ ರಾಜಕುಮಾರ ಕುಮಾನಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಪ್ರತಿಯೊಂದು ಜೀವಿಗೂ ಅಮ್ಮನೇ ಮೊದಲ ಗುರು. ತಾಯಿ ತನ್ನ ಮಕ್ಕಳಿಗಾಗಿ ಮಾಡುವಷ್ಟು ಕಾಳಜಿಯನ್ನು ಮತ್ಯಾರೂ ತೋರುವುದಿಲ್ಲ. ಇಂದು ತಾವು ಸಂತೃಪ್ತ ಜೀವನ ಸಾಗಿಸಲು ತಮ್ಮ ತಾಯಿಯೇ ಕಾರಣ. ಹೀಗಾಗಿ ಈ ತಾಯಿಯ ಅಂತ್ಯಕ್ರಿಯೆ ನಡೆದ ಜಾಗದಲ್ಲಿ ಒಡಹುಟ್ಟಿದ ಸಹೋದರರು ಮತ್ತು ಚಿಕ್ಕಪ್ಪನ ಮಕ್ಕಳು ಸೇರಿಕೊಂಡು ಮಂದಿರ ನಿರ್ಮಿಸಲು ನಿರ್ಧರಿಸಿದ್ದೇವು. ಆಗ, ಸ್ನೇಹಿತರಾದ ಅಲ್ಲಮಪ್ರಭು ಮಲ್ಲಿಕಾರ್ಜುನಮಠ ಅವರು ದೇವಸ್ಥಾನದ ಬದಲು ಪಿರಾಮಿಡ್ ಮಾದರಿಯಲ್ಲಿ ದೇವಸ್ಥಾನವನ್ನು ನಿರ್ಮಿಸುವ ಸಲಹೆ ನೀಡಿ ಮಂದಿರ ನಿರ್ಮಾಣವಾಗುವ ಪ್ರತಿಯೊಂದು ಹಂತದಲ್ಲಿ ಖುದ್ದಾಗಿ ಬಂದು ತನು, ಮನ, ಧನದಿಂದ ಸಹಾಯ ಮಾಡಿದರು. ಅದೆಲ್ಲದರ ಫಲವಾಗಿ 45×35 ಅಡಿ ಸುತ್ತಳತೆಯ ಜಾಗದಲ್ಲಿ ಈ ದೇವಸ್ಥಾನ ನಿರ್ಮಿಸಲಾಗಿದ್ದು, ಇದರ ಸುತ್ತಮುತ್ತ ಪತ್ರಿ, ಬನ್ನಿ, ಅರಳಿಮರ, ತೆಂಗು, ಬೇವು, ನಾನಾ ಹೂವುಗಳ ಅಪರೂಪದ ಗಿಡಗಳನ್ನು ನೆಟ್ಟಿದ್ದೇವೆ. ತಾಯಿಯ ನೆನಪಿನಲ್ಲಿ ಕೈಲಾದಷ್ಟು ಸೇವೆ ಮಾಡಿದ್ದೇವೆ. ಅಲ್ಲದೇ, ಆ ಕಾರ್ಯಕ್ಕೆ ಮತ್ತೋಬ್ಬರ ಸ್ನೇಹಿತ ಸೋಮು ಸೂಳಿಭಾವಿ ಕೂಡ ಸಹಾಯ ಮಾಡಿದ್ದಾರೆ ಎಂದು ಸ್ನೇಹಿತರ ನೆರವಿನ ಗುಣಗಾನ ಮಾಡಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಗುತ್ತಿಗೆದಾರ ಮತ್ತು ಪತ್ರಕರ್ತರೂ ಆಗಿರುವ ಅಲ್ಲಮಪ್ರಭು ಜಿ. ಮಲ್ಲಿಕಾರ್ಜುನಮಠ, ಕುಮಾನಿ ಕುಟುಂಬದವರು ಮಂದಿರ ನಿರ್ಮಿಸುವ ಒಳ್ಳೆಯ ವಿಚಾರ ಮಾಡಿದ್ದಾರೆ. ತಾಯಿ, ತಾಯಿ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಈ ಕುಟುಂಬದವರು ತಮ್ಮ ತಾಯಿ ಮಂದಿರ ನಿರ್ಮಿಸುವ ಮೂಲಕ ಪ್ರೇಮಾವತಿ ಅವರ ಹೆಸರನ್ನು ಶಾಶ್ವತವಾಗಿಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಮುಂದೊಂದು ದಿನ ಇದು ಉತ್ತಮ ಪ್ರವಾಸಿ ತಾಣವಾಗಲಿದೆ. ತಾಯಿ ಮಕ್ಕಳ ಪ್ರೀತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಈ ಭಾಗದಲ್ಲಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅವರು ನಿರ್ಧರಿಸಿದ್ದಾರೆ. ಈ ಪಿರಾಮಿಡ್ ಅಮ್ಮನ ಮಂದಿರ ವಿಜಯಪುರ ನಗರದಿಂದ ಕೇವಲ 30 ಕಿ. ಮೀ. ದೂರದಲ್ಲಿದ್ದು, ಇಲ್ಲಿ ಮುಂಬರುವ ದಿನಗಳಲ್ಲಿ ಅನ್ನಪ್ರಸಾದ, ಹಾಸ್ಟೇಲ್, ಅನಾಥಾಶ್ರಮ, ವೃದ್ಧಾಶ್ರಮ ಸೇರಿದಂತೆ ಬಡಜನರಿಗೆ ನೆರವಾಗಲು ಈ ಕುಟುಂಬ ಸದುದ್ದೇಶ ಹೊಂದಿದೆ. ಅವರ ಯಶಸ್ಸಿಗೆ ತಾಯಿ ಪ್ರೇಮಾವತಿ ಅವರ ಆಶೀರ್ವಾದ ನೆರವಾಗಲಿದೆ ಎಂದು ಹೇಳಿದರು.
ಕುಮಾನಿ ಕುಟುಂಬದ ಕುಡಿಗಳು ಪಿರಾಮಿಡ್ ಮಾದರಿಯಲ್ಲಿ ಅಮ್ಮನ ಮಂದಿರ ನಿರ್ಮಿಸಿ ತಾಯಿ ಎಂದರೇ ಕೇವಲ ಶಬ್ದವಲ್ಲ. ಅದೊಂದು ಶಕ್ತಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕುಮಾನಿ ಕುಟುಂಬದ ಕುಡಿಗಳ ಮಾಡಿರುವ ಮಾದರಿ ಕಾರ್ಯವನ್ನು ಬಸವ ನಾಡು ಕೂಡ ಅಭಿನಂದನೆ ಸಲ್ಲಿಸುತ್ತದೆ.