ವಿಜಯಪುರ: ಸಮಾಜ ಸುಧಾರಕ(Social Reformer) ಮತ್ತು ತಮ್ಮ ವಚನಗಳ(Vachanas) ಮೂಲಕ ಸಮಾಜದ(Society) ಓರೆಕೋರೆಗಳನ್ನು ತಿದ್ದಿದ ಸಮಾನತೆಯ ಹರಿಕಾರ ಬಸವಣ್ಣನವರ(Basavanna) ಬಗೆಗೆ ಪರಿಷ್ಕೃತ ಪಠ್ಯದಲ್ಲಿ(Syllabus) ತಪ್ಪು ಮಾಹಿತಿಗಳನ್ನು ಅಳವಡಿಸಿ ವಿಶ್ವದ ಬಸವಾಭಿಮಾನಿಗಳ ಆಸ್ಮಿತೆಯನ್ನು ಕೆಣಕಿರುವ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ ಚಕ್ರತೀರ್ಥ ಅವರನ್ನು ಬಂಧಿಸಿ ವಿಚಾರಣೆ ಒಳಪಡಿಸಬೇಕು ಎಂದು ಅಖಿಲ ಭಾರತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ವಕ್ತಾರ ಸಂಗಮೇಶ ಬಬಲೇಶ್ವರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನೈಜತೆಯನ್ನು ತಿರುಚುವುದು, ನಾಡಿನ ಮಕ್ಕಳ ತಲೆಯಲ್ಲಿ ಅಜ್ಞಾನವನ್ನು ತುಂಬಲು ಪ್ರಯತ್ನಿಸುತ್ತಿರುವುದು, ಸಾವಿರ ಕೊಲೆಗಳನ್ನು ಮಾಡಿದ ಪಾಪಕ್ಕಿಂತ ಹೇಯ ಕೃತ್ಯವಾಗಿದೆ. ಇವರನ್ನು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯಿಂದ ವಜಾ ಮಾಡಿದರೆ ಸಾಲದು. ಅವರನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಅಲ್ಲದೇ, ತನಿಖೆಗೆ ಒಳಪಡಿಸಿದರೆ ಇದರ ಹಿಂದೆ ಪ್ರೇರಣೆ ನೀಡಿದವರ ಬಣ್ಣ ಬಯಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ನಮ್ಮ ಪೂಜ್ಯ ಗುರುಗಳಾದ ಸುತ್ತೂರು ಜಗದ್ಗುರು ಗಳಿಗೆ ಹಾಗೂ ಸಿರಿಗೆರೆ ಸಾಣೆಹಳ್ಳಿ ಭಾಲ್ಕಿ ಗದಗ ಕೂಡಲ ಸಂಗಮ ಪೂಜ್ಯ ರನ್ನೊಳಗೊಂಡಂತೆ ನಾಡಿನ ಮಠಾಧೀಶರಿಗೆ ಪ್ರಗತಿಪರ ಸಂಘಟನೆಗಳಿಗೆ ಬಸವಾಭಿಮಾನಿಗಳಿಗೆ ನಾಡಿನ ಜನತೆಗೆ ತಕ್ಷಣ ಶಿಕ್ಷಣ ಸಚಿವರು ಸ್ಪಷ್ಟೀಕರಣ ನೀಡಬೇಕು. ಅಲ್ಲದೇ, ಕ್ಷಮೆ ಯಾಚಿಸಬೇಕು. ಮಕ್ಕಳ ತಲೆಯಲ್ಲಿ ಅಜ್ಞಾನ ತುಂಬುವುದೇ ತಮ್ಮ ಜೀವನದ ಧ್ಯೇಯವನ್ನಾಗಿಸಿಕೊಂಡಿದ್ದರೆ ಶಿಕ್ಷಣ ಸಚಿವರು, ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು. ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಧ್ವನಿ ಎತ್ತಬೇಕು ಎಂದು ಸಂಗಮೇಶ ಬಬಲೇಶ್ವರ ಆಗ್ರಹಿಸಿದ್ದಾರೆ.