ವಿಜಯಪುರ: ದೇಶದ(National) ಪ್ರಗತಿಗೆ(Development) ಪಶುವೈದ್ಯರ(Animal Husbandry Doctors) ಪಾತ್ರ(Role) ಅನನ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ ದಾನಮ್ಮನವರ(Dr Vijayamahantesh B Danammanavar) ಹೇಳಿದ್ದಾರೆ.
ವಿಜಯಪುರ ಜಿ. ಪಂ., ಪಶುಪಾಲನೆ ಇಲಾಖೆಯಿಂದ ರಾಷ್ಟ್ರೀಯ ಜಾನುವಾರು ಮಿಶನ್ ಯೋಜನೆಯಡಿ ಇಲಾಖೆಯ ಅಧಿಕಾರಿಗಳಿಗೆ ನಗರದ ಖಾಸಗಿ ಹೊಟೇಲನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿಗೆ ಪೂರಕವಾಗಿ ಪಶು ಸಂಗೋಪನೆಯು ರೈತರ ಜನಜೀವನ ಸುಧಾರಿಸುವಲ್ಲಿ, ಪ್ರೋಟಿನ್‌ಯುಕ್ತ ಆಹಾರ ಒದಗಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ. ಜಾನುವಾರುಗಳಿಗೆ ನಿಯಮಿತವಾಗಿ ಲಸಿಕೆ ಹಾಕುವ ಕಾರ್ಯ ನಡೆಯಬೇಕು. ಕೃತಕ ಗರ್ಭಧಾರಣೆಯಂತಹ ಕಾರ್ಯದ ಮೂಲಕ ತಳಿಸಂವರ್ಧನೆಗೆ ಒತ್ತು ಕೊಡಬೇಕು. ಇಂತಹ ಕಾರ್ಯಗಳಿಂದಾಗಿ ರೈತರ ಆರ್ಥಿಕತೆ ಕಳೆದ ಹಲವು ವರ್ಷಗಳಿಂದ ಗಣನೀಯವಾಗಿ ಸುಧಾರಣೆ ಕಂಡು ಬಂದಿದೆ ಎಂದು ಅವರು ತಿಳಿಸಿದರು.
ಗುಣಮಟ್ಟದ ಜಾನುವಾರುಗಳನ್ನು ಪಾಲನೆ ಮಾಡುವ ಮೂಲಕ ಬಹಳಷ್ಟು ಕೃಷಿಕರು ಹಾಗೂ ಇತರರು ಸ್ವಾವಲಂಬನೆ ಬದುಕನ್ನು ಕಂಡಕೊಂಡಿದ್ದಾರೆ. ಅದರಲ್ಲಿ ಕರ್ನಾಟಕ ರಾಜ್ಯವು ಹಾಲು ಸೇರಿದಂತೆ ಎಲ್ಲ ಪಶು ಉತ್ಪನ್ನಗಳನ್ನು ದಾಖಲೆ ಮಟ್ಟದಲ್ಲಿ ಉತ್ಪಾದಿಸುತ್ತಿದ್ದು, ಗುಣಮಟ್ಟದ ಉತ್ಪಾದನೆ ಮೂಲಕ ರಾಷ್ಟ್ರೀಯ ವ್ಯಾಪ್ತಿಯಲ್ಲಿ ಹೆಸರು ವಾಸಿಯಾಗಿದೆ. ಪಶುಪಾಲನೆ ಇಲಾಖೆಯ ಮೂಲಕ ಪಶುವೈದ್ಯರು ಸಕಾಲಕ್ಕೆ ರೈತರಿಗೆ ಸೇವೆ ಒದಗಿಸುವ ಮೂಲಕ ರೈತರ ಬಾಳನ್ನು ಹಸನಾಗಿಸಬೇಕು ಎಂದು ಡಾ. ವಿಜಯಮಹಾಂತೇಶ ಬಿ ದಾನಮ್ಮನವರ ಹೇಳಿದರು.
ಜಿ. ಪಂ. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಾಹುಲ ಶಿಂಧೆ ಮಾತನಾಡಿ, ಜಿಲ್ಲೆಯಲ್ಲಿ ಪಶುಪಾಲನೆ ಇಲಾಖೆಯು ಅತ್ಯುತ್ತಮವಾಗಿ ಸಿಬ್ಬಂದಿಯ ಕೊರತೆಯ ನಡುವೆಯೂ ಉತ್ತಮ ಸೇವೆ ಸಲ್ಲಿಸುತ್ತಿದೆ. ಜಿ. ಪಂ. ವ್ಯಾಪ್ತಿಯಲ್ಲಿ ಬರುವ ನಾನಾ ಯೋಜನೆಗಳನ್ನು ಒಗ್ಗೂಡಿಸುವ ಮೂಲಕ ಪ್ರತಿ ಪಶುವೈದ್ಯಕೀಯ ಸಂಸ್ಥೆಯನ್ನು ಮಾದರಿ ಸಂಸ್ಥೆಯನ್ನಾಗಿ ರೂಪಿಸಲು ಯೋಜನೆಯನ್ನು ಆಯೋಜಿಸಲಾಗಿದೆ. ಮೊದಲ ಹಂತದಲ್ಲಿ ಜಿಲ್ಲೆಯ 13 ತಾಲೂಕಿನ ಒಂದು ಸಂಸ್ಥೆಯನ್ನು ಆಯ್ಕೆ ಮಾಡಿ ಅದನ್ನು ಅಭಿವೃದ್ಧಿಪಡಿಸಲು ಪ್ರಸಕ್ತ ಸಾಲಿನಲ್ಲಿ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬಡ ರೈತರು ತಮ್ಮ ಜೀವನೋದ್ದಾರಕ್ಕೆ ಪಶು ಸಂಗೋಪನೆಯನ್ನೇ ಆಧರಿಸಿದ್ದು, ರೋಗಪೀಡಿತ ಜಾನುವಾರುಗಳಿಗೆ ಸಕಾಲಕ್ಕೆ ಸಮರ್ಪಕ ಪಶುವೈದ್ಯಕೀಯ ಸೇವೆ ಒದಗಿಸುವ ಮೂಲಕ ರೈತರ ಸೇವೆ ಮಾಡಲು ರಾಹುಲ ಶಿಂಧೆ ಸಲಹೆ ನೀಡಿದರು.
ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಬೆಂಗಳೂರಿನ ನಿರ್ದೇಶಕ ಡಾ. ಮಂಜುನಾಥ ಪಾಳೇಗಾರ ಮಾತನಾಡಿ, ಇಲಾಖೆ ಕ್ಷೇತ್ರ ಮಟ್ಟದಲ್ಲಿ ನಾನಾ ಸೌಲಭ್ಯಗಳನ್ನು ಒದಗಿಸುವ ಮೂಲಕ ಆಧುನಿಕ ಪಶುವೈದ್ಯಕೀಯ ಸೇವೆಯನ್ನು ಒದಗಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಪಶು ಸಂಜೀವಿನಿ ಸುಸಜ್ಜಿತ ಶಸ್ತ್ರಚಿಕಿತ್ಸಾ ವಾಹನವನ್ನು ಒದಗಿಸಿದ್ದು ತಜ್ಞ ಪಶುವೈದ್ಯರ ಮೂಲಕ ಅತ್ಯಗತ್ಯ ಸೇವೆಯನ್ನು ಒದಗಿಸಿ ಜಾನುವಾರುಗಳ ಜೀವ ಹಾನಿ ತಪ್ಪಿಸುವುದರೊಂದಿಗೆ ರೈತನಿಗೆ ಆರ್ಥಿಕವಾಗಿ ಹೊರೆಯಾಗದಂತೆ ಕ್ರಮಕೈಕೊಳ್ಳಲಾಗುವುದು. ಬರುವ ದಿನಗಳಲ್ಲಿ ಎಲ್ಲ ತಾಲೂಕುಗಳಲ್ಲಿ ಆ್ಯಂಬುಲನ್ಸ್ ಸೇವೆ ಒದಗಿಸುವ ಮೂಲಕ ಇನ್ನು ಹೆಚ್ಚಿನ ಸೇವೆ ಒದಗಿಸಲು ಇಲಾಖೆ ಸನ್ನದ್ಧವಾಗಿದೆ. ಸಿಬ್ಬಂದಿಯ ಕೊರತೆಯ ನಡುವೆಯೂ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸುವ ಮೂಲಕ ಪಶುಪಾಲಕರಿಗೆ ಎಲ್ಲ ರೀತಿಯ ಸಹಾಯವನ್ನು ಒದಗಿಸುತ್ತದೆ. ಪಶುಪಾಲಕರಿಗೆ ಟೊಲ್ ಸಹಾಯವಾಣಿ ಮೂಲಕ ಶೀಘ್ರಗತಿಯಲ್ಲಿ ತಾಂತ್ರಿಕ ಸೇವೆ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ಪ್ರಾಣೇಶ ಜಹಗೀರದಾರ ಮಾತನಾಡಿ, ಕಳೆದ ಒಂದು ವರ್ಷದ ಸಾಧನೆ ಕುರಿತು ಮಾಹಿತಿ ನೀಡುವುದರೊಂದಿಗೆ ಮುಂಬರುವ ದಿನಗಳಲ್ಲಿ ಇಲಾಖೆಯು ನಾನಾ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಎಂದು ಮಾಹಿತಿ ನೀಡಿದರು.
ಇಡೀ ದಿನ ನಡೆದ ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲ ಪಶುವೈದ್ಯಾಧಿಕಾರಿಗಳು, ಜಾನುವಾರು ಅಧಿಕಾರಿಗಳು, ಜಾನುವಾರು ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಂತ್ರಿಕ ವಿಷಯ ನಿರ್ವಾಹಕರು ಸೇರಿದಂತೆ ನೂರಕ್ಕೂ ಹೆಚ್ಚು ಪ್ರತಿನಿಧಿಗಳು ಉಪಸ್ಥಿತರಿದ್ದರು.
ಈ ಕಾರ್ಯಗಾರದಲ್ಲಿ ನಾನಾ ವಿಷಯಗಳ ಕುರಿತು ತಾಂತ್ರಿಕ ಗೋಷ್ಠಿಗಳು ನಡೆದವು. ಸಂಪನ್ಮೂಲ ವ್ಯಕ್ತಿಗಳಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಪಾಲಿಕ್ಲಿನಿಕನ ಚಿಕ್ಕ ಮಂಗಳೂರದ ಉಪ ನಿರ್ದೇಶಕ ಡಾ. ಬಿ. ಕೆ. ನಾಗರಾಜ, ವಿಜಯಪುರ ಉಪ ನಿರ್ದೇಶಕ ಡಾ. ಕುಂಬಾರ ಭಾಗವಹಿಸಿದ್ದರು. ಡಾ. ಬಿ. ಎಚ್. ಕನ್ನೂರ ನಿರೂಪಿಸಿದರು. ಡಾ. ಮಾರುತಿ ತಡಲಗಿ ವಂದಿಸಿದರು.