ವಿಜಯಪುರ: ಜಿಲ್ಲಾ ಪಂಚಾಯತಿಯ(Zilla Panchayat) ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳಾದ(Chief Executive Officer) ರಾಹುಲ ಶಿಂಧೆ(Rahul Shindhe) ಅವರು ಜೂನ್ 2ರಂದು ಗ್ರಾಮೀಣ ಭಾಗದಲ್ಲಿ ಪ್ರವಾಸ ಕಾರ್ಯಕ್ರಮಗಳನ್ನು(Rural Tour Programmes) ಮುಂದುವರೆಸಿ ದೇವರಹಿಪ್ಪರಗಿ ತಾಲೂಕಿನ ಮಣೂರ, ಕೆರುಟಗಿ ಮತ್ತು ಕೊಂಡಗೂಳಿ ಗ್ರಾಮ ಪಂಚಾಯಿತಿಗಳಿಗೆ(Gram Panchayats) ಭೇಟಿ ನೀಡಿದರು.
ಮಣೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ದೇವೂರ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಸಮಗ್ರ ಕೆರೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಸ್ಥಳದಲ್ಲಿದ್ದ 61 ಮಹಿಳಾ ಕೂಲಿ ಕಾರ್ಮಿಕರು, 14 ಜನ ಪುರುಷ ಕೂಲಿಕಾರ್ಮಿಕರ ಪೈಕಿ ಕೆಲವು ಕಾರ್ಮಿಕರೊಂದಿಗೆ ಮಾತನಾಡಿ ಮಾಹಿತಿ ಪಡೆದರು. ಕೆರೆಯಲ್ಲಿ ತೆಗೆದಿರುವ ಹೂಳನ್ನು ರೈತರ ಜಮೀನುಗಳಿಗೆ ಹಾಕಿ ಹಾಗೂ ನಮ್ಮ ಹೊಲ ನಮ್ಮ ದಾರಿ ಮಾಡಿಕೊಳ್ಳಲು ಸಲಹೆ ನೀಡಿದರು.
ಇದೆ ವೇಳೆ ಸಿಇಓ ಅವರು ಕೊಂಡಗೂಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಅಂಗನವಾಡಿ ಕೆಂದ್ರಕ್ಕೆ ಭೇಟಿ ನೀಡಿದರು. ಮಕ್ಕಳ ಸಂಖ್ಯೆ ಕಡಿಮೆ ಇರುವುದನ್ನು ಗಮನಿಸಿ, ಮಕ್ಕಳ ಸಂಖ್ಯೆ ಹೆಚ್ಚಿಸಲು ಸೂಕ್ತ ಕ್ರಮಕೈಗೊಳ್ಳಲು ಹಾಗೂ ಅಲ್ಲಿನ ಮಕ್ಕಳಿಗೆ ಉತ್ತಮ ಗುಣಮಟ್ಟದ ಪೌಷ್ಠಿಕ ಆಹಾರ ನೀಡುವ ಬಗ್ಗೆ ಕಾಳಜಿ ವಹಿಸಬೇಕೆಂದು ಅಂಗನವಾಡಿ ಕಾರ್ಯಕರ್ತರಿಗೆ ಸೂಚನೆ ನೀಡಿದರು.
ಇದೆ ವೇಳೆ ಗ್ರಂಥಾಲಯ ಕೇಂದ್ರಕ್ಕೂ ಭೇಟಿ ಮಾಡಿ ಪ್ರತಿದಿನ ಬರುವ ದಿನ ಪತ್ರಿಕೆಗಳ ಬಗ್ಗೆ ಪರಿಶೀಲಿಸಿದರು. ರಾಜೀವಗಾಂಧಿ ಸೇವಾ ಕೇಂದ್ರದ ಕಟ್ಟಡದ ಗುಣಮಟ್ಟವನ್ನು ಕೂಡ ಪರಿಶೀಲಿಸಿದರು ಹಾಗೂ ಗ್ರಾಮ ಪಂಚಾಯಿತಿಯ ಸಿಬ್ಬಂದಿಯ ಕಾರ್ಯವೈಖರಿಯ ಬಗ್ಗೆ ಮಾಹಿತಿ ಪಡೆದರು. ಘನ ತ್ಯಾಜ್ಯ ವಿಲೇವಾರಿ ಘಟಕದ ಪ್ರಗತಿಯನ್ನು ಕೂಡ ಪರಿಶೀಲಿಸಿದರು.
ಬಳಿಕ ಸಿಇಓ ಅವರು ಕೆರುಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸರ್ಕಾರಿ ಪ್ರೌಢಶಾಲೆಯೊಂದಕ್ಕೆ ಭೇಟಿ ಮಾಡಿ ಅಪೂರ್ಣಗೊಂಡ ಶಾಲಾ ಕಂಪೌಂಡ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು. ಪ್ರೌಢಶಾಲೆಯ ವಿಜ್ಞಾನ ಪ್ರಯೋಗಾಲಯ, ಗಣಿತ ಪ್ರಯೋಗಾಲಯ ಮತ್ತು ಕ್ರೀಡಾ ಪ್ರಯೋಗಾಲಯಗಳನ್ನು ಉದ್ಘಾಟಿಸಿದರು. ತಾಲೂಕು ಆಡಳಿತದಿಂದ ಸದರಿ ಪ್ರಯೋಗಾಲಯಗಳಿಗೆ ಅವಶ್ಯವಿರುವ ಸಾಮಾಗ್ರಿಗಳನ್ನು ಒದಗಿಸಿರುವುದಕ್ಕೆ ಸಿಇಓ ಅವರು ಇದೆ ವೇಳೆ ಪ್ರಶಂಶಿಸಿದರು. ಶಾಲಾ ಅಧ್ಯಯನ ಕೊಠಡಿಗಳಿಗೆ ಕೂಡ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ನಿರ್ದಿಷ್ಟ ಗುರಿಯೊಂದಿಗೆ ಅಧ್ಯಯನ ನಡೆಸಿ ಉತ್ತಮ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ:
Disabled Children: ವಿಶೇಷ ಚೇತನ ಮಕ್ಕಳೊಂದಿಗೆ ಬೆರೆತ ಜಿ. ಪಂ. ಸಿಇಓ ರಾಹುಲ ಶಿಂಧೆ
ನಂತರ ದೇವರ ಹಿಪ್ಪರಗಿ ತಾಲೂಕು ಪಂಚಾಯತಿಯ ಸಭಾಭವನದಲ್ಲಿ ತಾಲೂಕಿನ ಎಲ್ಲ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ತಾಂತ್ರಿಕ ಸಿಬ್ಬಂದಿಯೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ನರೇಗಾ ಯೋಜನೆ, ಜಲ ಜೀವನ ಮಿಷನ್, ಅಕ್ಷರ ದಾಸೋಹ, ಆರೋಗ್ಯ ಇಲಾಖೆ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಅರಣ್ಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು. ಪ್ರಮುಖವಾಗಿ ಅರಣ್ಯ ಇಲಾಖೆಯವರಿಗೆ ನರ್ಸರಿ ಸಸಿಗಳನ್ನು ಬೆಳೆಸಿ ಸರ್ಕಾರಿ ಶಾಲೆಗಳು, ವಸತಿ ನಿಲಯಗಳು ಹಾಗೂ ಸರ್ಕಾರಿ ಕಟ್ಟಡಗಳ ಆವರಣಗಳಲ್ಲಿ ಸಸಿಗಳನ್ನು ನೆಡಲು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ದೇವರ ಹಿಪ್ಪರಗಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹೇಶ್ ಕುಮಾರ್ ಮಾಲಗತ್ತಿ, ಸಹಾಯಕ ನಿರ್ದೇಶಕರಾದ ಶಾಂತಗೌಡ ನ್ಯಾಮಣ್ಣವರ, ಮಣೂರ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್ವರಿ ದೇವೂರ, ಕೊಂಡಗೂಳಿ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಾಂತಗೌಡ ನ್ಯಾಮಣ್ಣವರ, ಕೆರುಟಗಿ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಲ್.ಹೆಚ್. ನಾವ್ಹಿ ಹಾಗೂ ಇತರರು ಹಾಜರಿದ್ದರು.