Congress Jigajinagi: ಕಾಂಗ್ರೆಸ್ಸಿನವರಿಗೆ ಹೇಳಿಕೆಯನ್ನು ತಿರುಚಿ ಅಪಪ್ರಚಾರ ಮಾಡುವುದು ಚಟವಾಗಿದೆ- ಪ್ರಕಾಶ ಹುಕ್ಕೇರಿ ವಿದ್ಯಾವಂತರೂ ಅಲ್ಲ, ಶಿಕ್ಷಕರೂ ಅಲ್ಲ, ಪದವೀಧರರೂ ಅಲ್ಲ- ರಮೇಶ ಜಿಗಜಿಣಗಿ

ವಿಜಯಪುರ: ಹೇಳಿಕೆಗಳನ್ನು ತಿರುಚಿ ಅಪಪ್ರಚಾj ಮಾಡುವುದು ಕಾಂಗ್ರೆಸ್ಸಿಗರ ಚಟವಾಗಿದೆ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಆರೋಪಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ ವಾಯುವ್ಯ ಮತಕ್ಷೇತ್ರದ ಚುನಾವಣೆ ಪ್ರಚಾರ ಸಂದರ್ಭದಲ್ಲಿ ತಾವು ಚಿಕ್ಕೋಡಿಯಲ್ಲಿ ವಿಧಾನ ಪರಿಷತ ಬಿಜೆಪಿ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಅವರ ತೋಟದಲ್ಲಿ ಮಾಧ್ಯಮದವರ ಬಳಿ ಮಾತನಾಡಿದ್ದೆ.  ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರ ಕಾರ್ಯವೈಖರಿಯನ್ನು ಟೀಕಿಸಿದ್ದೆ.  ಆದರೆ, ಈಗ ಕಾಂಗ್ರೆಸ್ ತಮ್ಮ ಹೇಳಿಕೆಯನ್ನು ತಿರುಚಿ ಬಿಜೆಪಿ ಅಭ್ಯರ್ಥಿಗಳ ಪರ ರಮೇಶ ಜಿಗಜಿಣಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ರೀತಿಯಲ್ಲಿ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು

ಬಿಜೆಪಿಯ ಇಬ್ಬರೂ ಅಭ್ಯರ್ಥಿಗಳು ಬಹಳ ಒಳ್ಳೆಯವರಿದ್ದಾರೆ.  ಅವರಿಗೆ ಬೆಂಬಲ ಸೂಚಿಸಬೇಕು.  ಅವರಿಂದ ಕೆಲಸ ಮಾಡುವ ಜವಾಬ್ದಾರಿ ನನ್ನದು ಎಂದು ಹೇಳಿದ್ದೆ.  ಅಲ್ಲದೇ, ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಶಾಸಕ, ಸಚಿವ ಮತ್ತು ಸಂಸದರಾಗಿ ಏನು ಮಾಡಿದ್ದಾರೆ ಎಂಬ ವಸ್ತು ಸ್ಥಿತಿಯನ್ನು ಹೇಳಿದ್ದೆ.  ನಮ್ಮ ಪಕ್ಷದ ಅಭ್ಯರ್ಥಿಗಳ ಕೆಲಸ ಕಾರ್ಯಗಳ ಬಗ್ಗೆ ಪ್ರಶಂಸೆ ಮಾಡಿದ್ದೆ.  ಅಲ್ಲದೇ, ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಯಾವ ರೀತಿ ಅವಮಾನ ಮಾಡಿದ್ದಾರೆ ಎಂಬುದನ್ನು ಹೇಳಿದ್ದೆ.  ಆದರೆ, ನಾನು ಮಾಧ್ಯಮದವರ ಜೊತೆ ಮಾತನಾಡಿ ಬಂದ ಮೇಲೆ ಕಾಂಗ್ರೆಸ್ಸಿಗರು ನನ್ನ ಹೇಳಿಕೆಯನ್ನು ತಿರುಚಿ ಮುರುಚಿ, ಪ್ರಕಾಶ ಹುಕ್ಕೇರಿ ವಿರುದ್ಧ ಹೇಳಿದ್ದನ್ನು ನಮ್ಮ ಅಭ್ಯರ್ಥಿ ಅರುಣ ಶಹಾಪುರ ವಿರುದ್ಧ ಹೇಳಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ.  ಈ ಮೂಲಕ ಸಾಮಾನ್ಯ ಜನರಿಗೆ ರಮೇಶ ಜಿಗಜಿಣಗಿ ಅವರು ಇಲ್ಲಿಗೆ ಬಂದು ಅರುಣ ಶಹಾಪುರ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ನಂಬಿಸಲು ಪ್ರಯತ್ನಿಸಿದ್ದಾರೆ.  ಅಲ್ಲದೇ, ಎರಡು ದಿನಗಳಿಂದ ಚಿಕ್ಕೋಡಿ ಏರಿಯಾದಲ್ಲಿ ರಮೇಶ ಜಿಗಜಿಣಗಿ ಹೇಗೆ ಮಾತನಾಡಿದ್ದಾರೆ ಎಂಬುದನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿ ಎಂದು ಮತದಾರರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ.  ಅರುಣ ಶಹಾಪುರ ಬದಲು ತಮಗೆ ಮತ ಹಾಕುವಂತೆ ಹೇಳುತ್ತಿದ್ದಾರೆ ಎಂದು ಸಂಸದರು ವಾಗ್ದಾಳಿ ನಡೆಸಿದರು.

 

ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ವಿರುದ್ಧ ವಾಗ್ದಾಳಿ

ಇದನ್ನು ಇಲ್ಲಿಗೆ ನಿಲ್ಲಿಸಿ ಬಿಡಿ.  ಕಾಂಗ್ರೆಸ್ ಮತ್ತು ಪ್ರಕಾಶ ಹುಕ್ಕೇರಿ ಇದನ್ನು ಇಲ್ಲಿಗೆ ಕೈ ಬಿಡಬೇಕು.  ಪ್ರಕಾಶ ಹುಕ್ಕೇರಿ ವಿದ್ಯಾವಂತರೂ ಅಲ್ಲ.  ಶಿಕ್ಷಕರೂ ಅಲ್ಲ, ಪದವೀಧರರೂ ಅಲ್ಲ.  ಅವರಿಗೆ ದೇವರು ಯಾಕೆ ಆ ಬುದ್ದಿ ಕೊಟ್ಟಿದ್ದಾನೋ ಗೊತ್ತಿಲ್ಲ.  ಶಿಕ್ಷಕರಿಗೂ ಅವರಿಗೂ ಏನೇನೂ ಸಂಬಂಧವಿಲ್ಲ.  ಆದರೂ ಶಿಕ್ಷಕರ ಮತಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.  ಕಾಂಗ್ರೆಸ್ ಸ್ನೇಹಿತರು ಈ ಹಿಂದಿನಿಂದಲೂ ಖಾಯಂ ಆಗಿ ಈ ರೀತಿ ಮಾತನಾಡುತ್ತ ಬಂದಿದ್ದಾರೆ.  ನಾನು ಹೇಳಿದ್ದೇ ಬೇರೆ.  ಅವರು ತಿರುಚಿ ಅಪಪ್ರಚಾರ ಮಾಡುತ್ತಿರುವುದೇ ಬೇರೆ.  ಬಿಜೆಪಿಯಿಂದ ಸ್ಪರ್ಧಿಸಿರುವ ಇಬ್ಬರೂ ಅಭ್ಯರ್ಥಿಗಳಾದ ಅರುಣ ಶಹಾಪುರ ಮತ್ತು ಹಣಮಂತ ನಿರಾಣಿ ಇಬ್ಬರೂ ನನ್ನ ಸ್ನೇಹಿತರು.  ನನ್ನ ಹುಡುಗರು.  ನಾವು ಬೆಳೆಸಿದ ಹುಡುಗರು.  ನಾವು ಸಹಕಾರ ನೀಡಿದ ಹುಡುಗರು.  ನನ್ನ ಅತ್ಯಂತ ಆತ್ಮೀಯ ಬಂಧುಗಳು.  ನನ್ನ ಎಲ್ಲ ಅಭಿಮಾನಿಗಳು, ನನ್ನ ಪಕ್ಷದವರು ನಮ್ಮ ಇಬ್ಬರೂ ಅಭ್ಯರ್ಥಿಗಳನ್ನು ಬೆಂಬಲಿಸಿ ಗೆಲ್ಲಿಸುವ ಪ್ರಯತ್ನ ಮಾಡಬೇಕು ಎಂದು ಚಿಕ್ಕೋಡಿ ಭಾಗದ ಎಲ್ಲ ಮತದಾರರು ಹಾಗೂ ತಿರುಚಲಾಗಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿರುವವರು ಸತ್ಯಾಸತ್ಯತೆ ಅರಿತು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡುವುದಾಗಿ ಸಂಸದರು ಹೇಳಿದರು.

ನಾನು ಆ ರೀತಿ ಹೇಳಿಲ್ಲ.  ಇಬ್ಬರೂ ಅಭ್ಯರ್ಥಿಗಳು ನನ್ನವರು.  ಅವರನ್ನು ಆರಿಸಿ ಕಳುಹಿಸಬೇಕು.  ಈ ಬಾರಿ ಪ್ರತಿಯೊಂದು ತಾಲೂಕುಗಳು, ಶಿಕ್ಷಣ ಸಂಸ್ಥೆಗಳಿಗೆ ತೆರಳಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದೇವೆ.  ನಮ್ಮ ಇಬ್ಬರೂ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ ಎಂದು ವಿಜಯಪುರ ಬಿಜೆಪಿ ಸಂಸದ ಮತ್ತು ಹಿರಿಯ ದಲಿತ ಮುಖಂಡರೂ ಆಗಿರುವ ರಮೇಶ ಜಿಗಜಿಣಗಿ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ, ಮಹಾನಗರ ಪಾಲಿಕೆ ಮಾಜಿ ಉಪಮೇಯರ್ ಗೋಪಾಲ ಘಟಕಾಂಬಳೆ, ಬಿಜೆಪಿ ಮುಖಂಡ ವಿವೇಕ ಡಬ್ಬಿ, ಮಾಧ್ಯಮ ಪ್ರಮುಖ ವಿಜಯ ಜೋಶಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌