Governor Vachana Shila Mantap: ಬಸವ ನಾಡಿನಲ್ಲಿ ವಚನ ಶಿಲಾ ಮಂಟಪ ಲೋಕಾರ್ಪಣೆ ಮಾಡಿದ ರಾಜ್ಯಪಾಲ ಥಾವರ ಚಂದ ಗೆಲ್ಹೋಟ್

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ನಿರ್ಮಿಸಲಾಗಿರುವ ವಚನ ಶಿಲಾ ಮಂಟಪವನ್ನು ರಾಜ್ಯಪಾಲ ಥಾವರ ಚಂದ ಗೆಹ್ಲೋಟ್ ಲೋಕಾರ್ಪಣೆ ಮಾಡಿದ್ದಾರೆ.

ಇಂಗಳೇಶ್ವರ ಮಠದ ಹಿರಿಯ ಶ್ರೀಗಳಾದ, ಚನ್ನಬಸವ ಸ್ವಾಮೀಜಿ ಸೇರಿದಂತೆ ನಾನಾ ಮಠಾಧೀಶರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮಕ್ಕೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಕಾರ್ಯಕ್ರಮದಿಂದ ದೂರ ಉಳಿದಿದ್ದರು.

ಬಳಿಕ ಮಾತನಾಡಿದ ಅವರು, ವಿಶ್ವಕ್ಕೆ ಸಮಾನತೆ ಸಾರಿದ, ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಅಣ್ಣ ಬಸವಣ್ಣನವರ ವಚನಗಳು ಈ ವಚನ ಶಿಲಾ ಮಂಟಪದಲ್ಲಿ ಶಿಲಾಶಾಸನಗಳ ಮೇಲೆ ಅರಳಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಈ ವಚನಗಳ ‌ಸಾರವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೂ ಪಸರಿಸಬೇಕು. 12ನೇ ಶತಮಾನದಲ್ಲಿ ಸಮಾನತೆಗಾಗಿ ದೊಡ್ಡ ಸಾಮಾಜಿಕ ಕ್ರಾಂತಿಯನ್ನು ಮಾಡಿದ ಬಸವಣ್ಣನವರ ವಿಚಾರಧಾರೆಗಳು ಭಾರತದ ಸಂವಿಧಾನದಲ್ಲಿವೆ.  ಸಮಾನತೆ, ಉದಾರತೆ ತತ್ವಗಳ ರೂಪಗಳಾಗಿರುವ ವಚನಗಳನ್ನು ಶಿಲಾಶಾಸನಗಳಲ್ಲಿ ಅರಳಿಸುವಂತೆ‌‌ ಮಾಡಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.

ದಾಖಲೆಯಾಗಬೇಕಾದ ಮಾತುಗಳು ಕಾಗದದಲ್ಲಿದ್ದರೆ ಬಹಳ ದಿನ ಉಳಿಯುವುದಿಲ್ಲ.  ಅವುಗಳನ್ನು ಶಿಲೆಯಲ್ಲಿ ಅರಳಿಸಿದರೆ ಶಾಶ್ವತವಾಗಿರುತ್ತವೆ.  ಈ ವಚನಗಳನ್ನು ಅಧ್ಯಯನ ಮಾಡಿ ಜೀವನದಲ್ಲಿ ಅಳವಡಿಸಿಕೊಂಡು ಇತತರಿಗೂ ತಲುಪಿಸುವ ಕೆಲಸ ಮಾಡಬೇಕಿದೆ.  ಅಣ್ಣ ಬಸವಣ್ಣನವರು ಬದುಕಿದ್ದ 12ನೇ ಶತಮಾನದಲ್ಲಿ ಪರಿಸ್ಥಿತಿ ತುಂಬಾ ಕಠಿಣವಾಗಿತ್ತು.  ಸಮಾನತೆಯ ಸಂದೇಶ ಸಾರಿ ದೊಡ್ಡ ಸಾಮಾಜಿಕ ಕ್ರಾಂತಿ ಮಾಡುವಾಗ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ.  ಅವರ ಚಿಂತನೆ ಎಂದಿಗೂ ದಾರಿದೀಪವಾಗಿವೆ ಎಂದು ರಾಜ್ಯಪಾಲರು ಹೇಳಿದರು.

ರಾಜ್ಯಪಾಲ ಥಾವರ ಸಿಂಗ್ ಗೆಹ್ಲೋಟ್ ಅವರನ್ನು ಸನ್ಮಾನಿಸಿದ ಇಂಗಳೇಶ್ವರ ಮತ್ತೀತರ ಶ್ರೀಗಳು

ದೇಶದ ಆಧ್ಯಾತ್ಮ, ಚಿಂತನೆ ಮತ್ತು ಸಂಸ್ಕೃತಿಗಳು ವಿಶ್ವಶ್ರೇಷ್ಠವಾಗಿವೆ.  ವಸುದೈವ ಕುಟುಂಬಕಂ  ಎಂಬುದು ನಮ್ಮ ಸಂಸ್ಕೃತಿಯ ಮೂಲ ಸ್ವರೂಪವಾಗಿದೆ.  ಈ ಮೂಲ ತತ್ವವನ್ನು ಅಳವಡಿಸಿಕೊಂಡರೆ ವಿಶ್ವದಲ್ಲಿ ಶಾಂತಿ ಸಾಧ್ಯ.  ಯುವಜನತೆ ಭಾರತದ ಆಧ್ಯಾತ್ಮಿಕ ಪರಂಪರೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಭಾರತ ವಿಶ್ವಗುರುವಾಗಲು ಸಾಧ್ಯ.  ಎಲ್ಲರೂ ಆರೋಗ್ಯವಂತರಾಗಿ ಸುಖದಿಂದ ಜೀವನ ನಡೆಸುವಂತಾಗಬೇಕು ಎಂಬುದು ನಮ್ಮ ಸಂಸ್ಕೃತಿಯ ಸಾರವಾಗಿದೆ. ಅದೇ ರೀತಿ ದವಾ ಔರ್ ದುವಾ ಅಂದರೆ ಔಷಧಿ ಮತ್ತು ಆಶೀರ್ವಾದ ಅಗತ್ಯವಾಗಿದೆ ಎಂದು ಅವರು ಹೇಳಿದರು.

ಇಂಗಳೇಶ್ವರ ವಿರಕ್ತಮಠದ ಜಗದ್ಗುರು ಶ್ರೀ ಸಿದ್ಲಲಿಂಗ ದೇವರು ಮಾತನಾಡಿ ವಚನ ಶಿಲಾ ಮಂಟಪ ನಿರ್ಮಾಣದ ಪ್ರತಿಯೊಂದು ಹಂತಗಳನ್ನು ವಿವರಿಸಿದರು.  ಮಾದರಿ ವಚನ ಶಿಲಾ ಮಂಟಪ ನಿರ್ಮಾಣವಾಗಬೇಕು ಎಂಬ ಏಕೈಕ ಸದುದ್ದೇಶದಿಂದ ಇಂಗಳೇಶ್ವರ ಮಠದ ಶ್ರೀ ಚೆನ್ನಬಸವ ಸ್ವಾಮಿಗಳು ಅವಿರತವಾಗಿ ಶ್ರಮಿಸಿದ್ದಾರೆ.  ಇದಕ್ಕಾಗಿ ಪ್ರತಿಯೊಂದು ಗ್ರಾಮಗಳಲ್ಲಿ ಸಂಚರಿಸಿ ದೇಣಿಗೆ ಸಂಗ್ರಹಿಸಿದ್ದಾರೆ.   ರಾಷ್ಟ್ರಪತಿಗಳ ಅಮೃತ ಹಸ್ತದಿಂದ ಈ ಶಿಲಾ ಮಂಟಪ ಲೋಕಾರ್ಪಣೆಯಾಗಬೇಕು ಎಂಬ ಆಶಯವಿತ್ತು.  ಆದರೆ, ಕೊರೊನಾ ಮತ್ತೀತರ ಅನಾನೂಕೂಲತೆಯಿಂದಾಗಿ ಅದು ಈಡೇರಲಿಲ್ಲ.  ಆದರೆ, ವಚನ ಶಿಲಾ ಮಂಟಪ ಲೋಕಾರ್ಪಣೆಯ ಯೋಗ ಸಜ್ಜನಿಕೆಯ ಥಾವರಚಂದ ಗೆಹ್ಲೊಟ್ ಅವರಿಗೆ ಒಲಿದು ಬಂದಿದ್ದು ಸಂತಸ ತಂದಿದೆ ಎಂದು ಹೇಳಿದರು.

ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ, 1967ರಲ್ಲಿ ವಚನ ಶಿಲಾ ಮಂಟಪ ಭೂಮಿ ಪೂಜೆ ನೆರವೇರಿಸಲಾಗಿತ್ತು.  ಈ ಅನುಪಮ ಕಾರ್ಯ ಈಗ ಸಾಕಾರಗೊಂಡಿದೆ.  ಕಲ್ಲಿನಲ್ಲಿ ಬರೆದ ವಚನಗಳು ಯುಗ ಯುಗ ಕಳೆದರೂ ಶಾಶ್ವತವಾಗಿ ಓದಲು ಸಾಧ್ಯ ಎಂದು ಹೇಳಿದರು.

ಶಿಲಾಮಂಟಪ ನಿರ್ಮಾಣದ ರೂವಾರಿ ಇಂಗಳೇಶ್ವರ ಮಠದ ಶ್ರೀ ಚೆನ್ನಬಸವ ಸ್ವಾಮಿಗಳು ಮಾತನಾಡಿ, ಶಿಲಾ ಮಂಟಪ ನಿರ್ಮಾಣಕ್ಕೆ ಸರಕಾರಿದಂದ ಯಾವುದೇ ಅನುದಾನ ಪಡೆದಿಲ್ಲ.  ಬಡವರು, ಶ್ರೀಮಂತರು ಎನ್ನುವ ಯಾವುದೇ ಭೇದಭಾವವಿಲ್ಲದೆ ಉದಾರವಾಗಿ ದೇಣಿಗೆ ನೀಡಿದ್ದಾರೆ.  ಈ ಹಣದಿಂದ ವಚನ ಶಿಲಾ ಮಂಟಪ ನಿರ್ಮಿಸಲಾಗಿದೆ.  ಮಹಾಭಾರತ, ರಾಮಾಯಣ ‌ಮೊದಲಾದ ಆದರ್ಶಗಳು ಶಿಲಾ ಶಾಸನಗಳಲ್ಲಿವೆ.  ಆದರೆ, ಈ ಶಿಲಾ ಶಾಸನಗಳಲ್ಲಿ ವಚನ ಸಾಹಿತ್ಯವೂ  ಅರಳಬೇಕು ಎಂಬ ಮಹದಾಸೆಯೊಂದಿಗೆ ಶಿಲಾ ಮಂಟಪ ನಿರ್ಮಾಣ ಕಾರ್ಯಕ್ಕೆ ಕೈ ಹಾಕಲಾಯಿತು.  ಈ ಮಹತ್ವದ ಕಾರ್ಯಕ್ಕೆ ಕೈಜೋಡಿಸಿದ ಎಲ್ಲ ದಾನಿಗಳಿಗೂ ಧನ್ಯವಾದಗಳು ಎಂದು ಹೇಳಿದರು.  ಈಗ ಶಿಲಾಮಂಟಪ ಲೋಕಾರ್ಪಣೆಯಾಗಿದೆ.  ಈ ಕಟ್ಟಡದ ಸಂರಕ್ಷಣೆ ಗ್ರಾಮಗಳ ಜನತೆ ಆದ್ಯ ಕರ್ತವ್ಯ.  ಮಹಿಳೆಯರು ಮಾಂಗಲ್ಯ ಸಂರಕ್ಷಣೆ ಮಾಡಿದಷ್ಟೆ ಶ್ರದ್ದೆಯ ಮಾದರಿಯಲ್ಲಿ ಈ‌ ಶಿಲಾ ಮಂಟಪ ಸಂರಕ್ಷಣೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ನಾನಾ ಸ್ವಾಮೀಜಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌