ವಿಜಯಪುರ: ಖ್ಯಾತ ದ್ರಾಕ್ಷಿ(Grapes) ಬೆಳೆಗಾರ(Grower) ಭೀಮಸೇನ ಎಂ. ಕೋಕರೆ(Bheemasen M Kokare) ಅವರನ್ನು ರಾಷ್ಟ್ರೀಯ ತೋಟಗಾರಿಕೆ ಮಂಡಳಿ(NHB) ನಿರ್ದೇಶಕರಾಗಿ(Director) ನೇಮಕವಾಗಿದ್ದಾರೆ.
ಈಗಾಗಲೇ ಹಲವಾರು ಸಂಘ, ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಪದಾಧಿಕಾರಿಯಾಗಿ ಭೀಮಸೇನ ಎಂ. ಕೋಕರೆ ಕೆಲಸ ಮಾಡಿದ್ದು, ಈಗಲೂ ನಾನಾ ಸಂಘ ಸಂಸ್ಥೆಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ನವದೆಹಲಿಯಲ್ಲಿರುವ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಅತ್ಯುನ್ನತ ಮತ್ತು ಅಧಿಕಾರಯುಕ್ತ ಜನರಲ್ ಬಾಡಿ ಗೌರವಾನ್ವಿತ ಸದಸ್ಯರಾಗಿ, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷರಾಗಿ, ಭಾರತೀಯ ದ್ರಾಕ್ಷಿ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆಅಲ್ಲದೇ, ಕರ್ನಾಟಕ ರಾಜ್ಯತೋಟಗಾರಿಕೆ ಮಹಾಮಂಡಳದ ನಿರ್ದೇಶಕರಾಗಿ, ವಿಜಯಪುರ ಜಿಲ್ಲೆಯ ಹಾಪಕಾಮ್ಸ್ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.
ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಜನರಲ್ ಬಾಡಿ ಸದಸ್ಯತ್ವದ ಅವಧಿಯಲ್ಲಿ ಕೇಂದ್ರ ಸಕಾರದ ಯೋಜನೆಗಳು ಮತ್ತು ಕರ್ನಾಟಕ ರಾಜ್ಯ ಸರಕಾರದ ಸಂಯುಕ್ತ ಯೋಜನೆಗಳನ್ನು ಯಶಸ್ವಿಯಾಗಿ ರೈತರ ಕಲ್ಯಾಣಕ್ಕಾಗಿ ಶೀಘ್ರಗತಿಯಲ್ಲಿ ಅಳವಡಿಸುವಲ್ಲಿ ಹಾಗೂ ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟದ ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣೆಯನ್ನು ಬಲವರ್ಧನೆಗೊಳಿಸಲು ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನಿಂದ ಅನುದಾನ ಬಿಡುಗಡೆಗೆ ಸಹಕರಿಸಿದ್ದಾರೆ.
ಅಲ್ಲದೆ, ರಾಜ್ಯದಲ್ಲಿ 13 ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಸಂಸ್ಥೆಗಳಿದ್ದು, ಅವುಗಳ ನಿರ್ದೇಶಕರು, ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳು ಹಾಗೂ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳಲ್ಲಿ ಸಮನ್ವಯತೆ ತರಲು ಹಾಗೂ ಈ ಎಲ್ಲಾ ಸಂಸ್ಥೆಗಳಲ್ಲಿಯ ಸಂಶೋಧನಾ ಫಲಿತಾಂಶಗಳನ್ನು ರೈತರಿಗೆ ತಲಪಿಸಲು ಗೌರವಾನ್ವಿತ ಕೃಷಿ ಸಚಿವರೊಡನೆ ಚರ್ಚಿಸಿ ಕಾರ್ಯರೂಪಕ್ಕೆ ತಂದಿದ್ದಾರೆ. ಈ ಎಲ್ಲಾ ಕೆಲಸ ಕಾರ್ಯಗಳನ್ನು ಗುರುತಿಸಿ ಕೇಂದ್ರ ಸರಕಾರ ಇವರನ್ನು ರಾಷ್ಟ್ರೀಯ ತೋಟಗಾರಿಕೆ ಮಂಡಳಿಯ ನಿರ್ದೇಶಕರನ್ನಾಗಿ ನೇಮಕ ಮಾಡಿದೆ. ಇದು ನಮ್ಮರಾಜ್ಯಕ್ಕೆ ಹಾಗೂ ನಮ್ಮ ಜಿಲ್ಲೆಯವರಿಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ.
ಮೂಲತಃ ಬಬಲೇಶ್ವರ ಗ್ರಾಮದವರಾಗಿರುವ ಭೀಮಸೇನ ಎಂ. ಕೋಕರೆ, ದ್ರಾಕ್ಷಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷರು ಹಾಗೂ ವ್ಹಾಲಿಬಾಲ್ ಸಂಘದ ಜಿಲ್ಲಾಧ್ಯಕ್ಷರೂ ಪ್ರಗತಿಪರ ರೈತರಾಗಿದ್ದು, ಎಂಜನೀಯರಿಂಗ್ ಪದವೀಧರರಾಗಿದ್ದಾರೆ. ಅವರ ಸಂಪೂರ್ಣ ಕುಟುಂಬ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ಗಮನಾರ್ಹವಾಗಿದೆ.
ಇವರ ಹೊಸ ಜವಾಬ್ದಾರಿಯಿಂದ ಬಸವ ನಾಡು ಹಾಗೂ ರಾಜ್ಯಕ್ಕೂ ಸಹಾಯವಾಗಲಿ ಎಂದು ಬಸವ ನಾಡು ಕೂಡ ಹಾರೈಸುತ್ತದೆ.