ವಿಜಯಪುರ: ಸಿಎಂ ಮಗ ಮುಖ್ಯಮಂತ್ರಿಯಾದರೆ ತಪ್ಪೇನು ಎಂದು ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಪ್ರಶ್ನಿಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಪರ ಬ್ಯಾಂಟಿಂಗ್ ಮಾಡಿದ್ದಾರೆ.
ವಿಜಯೇಂದ್ರ ಸಿಎಂ ಆಗಲಿ. ಸಿಎಂ ಮಗ ಸಿಎಂ ಆದರೆ ತಪ್ಪೇನು? ಎಂದು ಅವರು ಪ್ರಶ್ನಿಸಿದರು. ವಿಜಯೇಂದ್ರ ಅವರಿಗೆ ನಾಯಕನಾಗುವ ಎಲ್ಲ ಕ್ವಾಲಿಟಿ ಇವೆ. ಯಾರ ಹಣೆ ಬರಹದಲ್ಲಿ ಏನು ಬರೆದಿದೆಯೋ ಗೊತ್ತಿಲ್ಲ. ನಮ್ಮ ರಾಜ್ಯದಲ್ಲಿದ್ದವರು ಪ್ರಧಾನಿಯಾದರು ಎಂದು ಹೇಳಿದರು.
ಮುಖ್ಯಮಂತ್ರಿ ಮಗ ಮುಖ್ಯಮಂತ್ರಿ ಆದರೆ ಏನು ತಪ್ಪಿದೆ? ಅದನ್ನ ನಿರ್ಧಾರ ಮಾಡುವವರು ರಾಜ್ಯ, ರಾಷ್ಟ್ರ ನಾಯಕರಿದ್ದಾರೆ
ಎಲ್ಲ ಕ್ವಾಲಿಟಿಗಳು ವಿಜಯೇಂದ್ರಗೆ ಇದೆ ಅನ್ನೋದರಲ್ಲಿ ಯಾವುದೇ ಅನುಮಾನ ಇಲ್ಲ. ಯಾರಿಗೆ ಯಾವ ಜವಾಬ್ದಾರಿ ನೀಡಬೇಕು ಎಂಬುದು ಹೈಕಮಾಂಡಿಗೆ ಬಿಟ್ಟಿದ್ದು. ಸಚಿವ ಸಂಪುಟ ವಿಸ್ತರಣೆಯು ಪಕ್ಷದ ನಾಯಕರಿಗೆ ಬಿಟ್ಟದ್ದು ಎಂದು ಸಚಿವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಮಾಡುತ್ತಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುರುಗೇಶ ನಿರಾಣಿ, ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಮೊದಲು ಅವರ ಪಕ್ಷ ಸರಿ ಮಾಡಿಕೊಳ್ಳಲಿ. ಯಡಿಯೂರಪ್ಪ ನಮ್ಮ ಪಕ್ಷದ ಮುಖಂಡರು. ಇದರಲ್ಲಿ ಎರಡು ಮಾತೇ ಇಲ್ಲ. ಒಂದು ಕುಟುಂಬದಲ್ಲಿ ಮೂರು ಸೀಟ್ ಇದೆ ದೇಶದಲ್ಲೇ ಯಾರಿಗೂ ಕೊಟ್ಟಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಬಿ. ವೈ. ವಿಜಯೇಂದ್ರ ಹೆಚ್ಚಿನ ಕೆಲಸ ಮಾಡಲಿ. ಅವರು ರಾಜಕೀಯವಾಗಿ ಇನ್ನಷ್ಟು ಬೆಳೆಯಲಿ ಎನ್ನುವ ಉದ್ದೇಶವಿದೆ. ವಿಜಯೇಂದ್ರ 30 ವರ್ಷಗಳಿಂದ ಗೊತ್ತು. ಮುಂದೆ ಯಡಿಯೂರಪ್ಪ, ಸಂಘ ಪರಿವಾರ, ಹಿರಿಯರ ಆಶೀರ್ವಾದ, ಮಾರ್ಗದರ್ಶನದಿಂದ ಎತ್ತರಕ್ಕೆ ಬೆಳೆಯುತ್ತಾನೆ ಎಂದು ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದರು.