ವಿಜಯಪುರ: ಜಿಲ್ಲಾ ಪಂಚಾಯಿತಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆ ಇವರ ಸಹಯೋಗದಲ್ಲಿ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಜೂನ್ 8ರಂದು ವಿಕಲಚೇತನರಿಗೆ ವಿಕಲಚೇತನರ ವಿಶಿಷ್ಠ ಗುರುತಿನ ಚೀಟಿ ನೀಡುವ ಶಿಬಿರ ಯಶಸ್ವಿಯಾಗಿ ನಡೆಯಿತು.
R ಶಿಬಿರದಲ್ಲಿ ಪ್ರತಿಯೊಬ್ಬ ತಜ್ಞ ವೈದ್ಯರು ಉಪಸ್ಥಿತರಿದ್ದು, ಗ್ರಾಮೀಣ ಭಾಗದ ವಿಕಲಚೇತನ ಫಲಾನುಭವಿಗಳು ಜಿಲ್ಲಾ ಆಸ್ಪತ್ರೆಗೆ ಬಂದು ಹೋಗಲು ಗ್ರಾಮ ಪಂಚಾಯತಿಗಳಿಂದ ವಾಹನ ವ್ಯವಸ್ಥೆ ಕಲ್ಪಿಸಲಾಗಿತ್ತು. ಅದೆ ರೀತಿ ನಗರ ವ್ಯಾಪ್ತಿಯಿಂದ ಬರುವ ವಿಶೇಷ ಚೇತನರಿಗೆ ಜಿಲ್ಲಾ ಆಸ್ಪತ್ರೆಗೆ ಬಂದು ಹೋಗಲು ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಿಂದ ವಾಹನ ವ್ಯವಸ್ಥೆ ಮಾಡಲಾಗಿತ್ತು.
ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ವಿಶೇಷ ತಪಾಸಣೆ ಶಿಬಿರದಲ್ಲಿ ಮೊದಲ ದಿನ ಒಟ್ಟು 684 ಜನ ವಿಕಲಚೇತನರು ತಪಾಸಣೆಗೊಳಪಟ್ಟು ವಿಶೇಷ ಸೌಲಭ್ಯ ಪಡೆದರು. ಎಲ್ಲ ವಿದಧ ಶ್ರವಣ ದೋಷವುಳ್ಳವರು, ದೈಹಿಕ, ಬೌದ್ಧಿಕ ವಿಕಲತೆ, ಮಾನಸಿಕ ಅಸ್ವಸ್ಥರು, ದೃಷ್ಟಿ ದೋಷವುಳ್ಳ ವಿಕಲಚೇತನರು ವಿಶೇಷ ತಪಾಸಣೆಗೊಳಪಟ್ಟು ವಿಕಲಚೇತನರ ವಿಶಿಷ್ಠ ಗುರುತಿನ ಚೀಟಿ ಪಡೆದರು.
ಶಿಬಿರದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿಗಳಾದ ಆಶು ನದಾಫ್, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ.ಗುನಾರಿ, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಎಸ್.ಎಲ್.ಲಕ್ಕಣ್ಣವರ, ಆಸ್ಪತ್ರೆಯ ಇತರೆ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.
ಜಿ. ಪಂ. ಸಿಇಓ ಮನವಿ
ಒಂದೇ ಸ್ಥಳದಲ್ಲಿ ತಜ್ಷ ವೈದ್ಯರು ಲಭ್ಯವಿರುವುದರಿಂದ ಪ್ರತಿಯೊಬ್ಬ ಅರ್ಹ ವಿಕಲಚೇತನರು ಯಾವುದೇ ಸಮಸ್ಯೆ ಇಲ್ಲದೇ ವಿಕಲಚೇತನರ ವಿಶಿಷ್ಠ ಗುರುತಿನ ಚೀಟಿ ಪಡೆಯಲು ಸಹಾಯಕವಾಗಿದೆ. ಇಲ್ಲಿಯವರೆಗೂ ಅರ್ಜಿ ಸಲ್ಲಿಸದೇ ಇರುವ ವಿಕಲಚೇತನರ ಅರ್ಜಿಗಳನ್ನು ಶಿಬಿರದ ದಿನದಂದೇ ಪಡೆದು ತಪಾಸಣೆಗೊಳಪಡಿಸಿ ವಿಕಲಚೇತನರ ವಿಶಿಷ್ಠ ಗುರುತಿನ ಚೀಟಿಗಳನ್ನು ನೀಡುವಲ್ಲಿ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಜನತೆ ಈ ಶಿಬಿರದ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಮನವಿ ಮಾಡಿದ್ದಾರೆ.