ವಿಜಯಪುರ: ಜೂ. 21ರಂದು ನಡೆಯಲಿರುವ ಮಹತ್ವದ ವಿಶ್ವ ಯೋಗ ದಿನಾಚರಣೆಗೆ ಸಂಬಂಧಿಸಿದಂತೆ ಚರ್ಚಿಸಲು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಕೇಂದ್ರ ಸರಕಾರದ ಆಯುಷ್ ಮಂತ್ರಾಲಯವು ಈ ಬಾರಿ ಯೋಗ ಫಾರ್ ಹುಮ್ಯಾನಿಟಿ ಎಂಬ ಧ್ಯೇಯ ವಾಖ್ಯದಡಿ ಯೋಗ ದಿನವನ್ನು ಆಚರಿಸುತ್ತಿದೆ. ಈ ಮಹತ್ವದ ಕಾರ್ಯಕ್ರಮದ ಯಶಸ್ಸಿಗೆ ಸಾರ್ವಜನಿಕರು, ಸಂಘ ಸಂಸ್ಥೆಗಳು ಸೇರಿದಂತೆ ಪ್ರತಿಯೊಬ್ಬರ ಸಹಕಾರ ಪಡೆಯಬೇಕು ಎಂದು ಸಲಹೆ ನೀಡಿದರು.
ವಿಜಯಪುರ ಜಿಲ್ಲಾ ಕೇಂದ್ರದಲ್ಲಿ ಯೋಗ ದಿನವನ್ನು ವಿಶ್ವ ಪ್ರಸಿದ್ಧ ಗೋಲಗುಂಬಜ್ ಆವರಣದಲ್ಲಿ ನಡೆಸಲಾಗುತ್ತದೆ. ಅಂದು ಬೆ. 5.45ಕ್ಕೆ ಗೋಲಗುಂಬಜ್ ಆವರಣಕ್ಕೆ ಆಗಮಿಸಬೇಕು. ಬಳಿಕ ಬೆ. 6.10 ರಿಂದ 7.45ರ ವರೆಗೆ ಮೈಸೂರ ಯೋಗ ಕಾರ್ಯಕ್ರಮದ ಲೈವ್ ವೀಕ್ಷಣೆ ಇರಲಿದೆ. ಬಳಿಕ 7.45 ರಿಂದ 8.15ರ ವರೆಗೆ ಅರ್ಧ ಗಂಟೆ ವೇದಿಕೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಬಳಿಕ 9ಕ್ಕೆ ಕಾರ್ಯಕ್ರಮ ಮುಕ್ತಾಯವಾಗಲಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಮೂರು ಪಾರಂಪರಿಕ ಮತ್ತು ಸಾಂಪ್ರದಾಯಿಕ ಸ್ಥಳಗಳನ್ನು ಗುರುತಿಸಿ ಯೋಗ ದಿನಾಚರಣೆ ನಡೆಸಲು ರಾಜ್ಯ ಸರಕಾರದ ಸೂಚನೆಯಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ತಿಕೋಟಾ ತಾಲೂಕಿನ ತೊರವಿಯ ಸಂಗೀತ ಮಹಲ್ ಆವರಣದಲ್ಲಿ, ಬಸವನ ಬಾಗೆವಾಡಿಯ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹಾಗೂ ಇಂಡಿ ತಾಲೂಕಿನ ಹೋರ್ತಿಯ ರೇವಣ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಯೋಗ ದಿನಾಚರಣೆಗೆ ಸ್ಥಳ ಗುರುತಿಸಲಾಗಿದೆ ಎಂದು ತಿಳಿಸಿದರು.
ಈ ಮೂರು ಕಡೆಗಳಲ್ಲಿ ಬೆ. 7.30 ರಿಂದ 8.30ರ ವರೆಗೆ ಯೋಗಾಸನ ವ್ಯವಸ್ಥೆ ಆಗಬೇಕು ಎಂದು ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಹೇಳಿದರು.
ಇಂಡಿ ತಾಲೂಕಿನಲ್ಲಿ ನಡೆಯುವ ಯೋಗ ದಿನಾಚರಣೆಗೆ
ಇಂಡಿ ಸಹಾಯಕ ಆಯುಕ್ತರು, ಜಿ. ಪಂ. ಉಪ ಕಾರ್ಯದರ್ಶಿಗಳ ನೇತೃತ್ವದಲ್ಲಿ ತಹಸೀಲ್ದಾರರು, ತಾ. ಪಂ. ಇಓ ಮತ್ತು ಇನ್ನೀತರ ಅಧಿಕಾರಿಗಳು ಸೇರಿ, ಸಭೆ ನಡೆಸಿ ಚರ್ಚಿಸಿ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಬೇಕು ಎಂದು ಡಿಸಿ ಸೂಚನೆ ನೀಡಿದರು.
ಬಸವನ ಬಾಗೇವಾಡಿ ಮತ್ತು ತಿಕೋಟಾ ತಾಲೂಕುಗಳಲ್ಲಿನ ಯೋಗ ಕಾರ್ಯಕ್ರಮಕ್ಕೆ ವಿಜಯಪುರ ಸಹಾಯಕ ಆಯುಕ್ತರು ಮತ್ತು ಆಯಾ ತಾಲೂಕಿನ ತಹಸೀಲ್ದಾರರು ಹಾಗೂ ತಾ. ಪಂ. ಇಓ ಮತ್ತು ಪುರಸಭೆ, ಪಟ್ಟಣ ಪಂಚಾಯಿತಿಗಳ ಮುಖ್ಯಾಧಿಕಾರಿಗಳು ಸೇರಿ ಸಭೆ ನಡೆಸಿ ಕಾರ್ಯಕ್ರಮಕ್ಕೆ ಏರ್ಪಾಡು ಮಾಡಬೇಕು ಎಂದು ಸೂಚನೆ ಅವರು ನೀಡಿದರು.
ಶಿಷ್ಟಾಚಾರದ ಪ್ರಕಾರ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ ಎಲ್ಲ ಜನಪ್ರತಿನಿಧಿಗಳು ಮತ್ತು ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಯೋಗದಲ್ಲಿ ಮತ್ತು ಕ್ರೀಡೆಯಲ್ಲಿ ರಾಷ್ಟ್ರಿಯ ಮತ್ತು ಅಂತಾರಾಷ್ಡ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ತೋರಿದ ವಿಜಯಪುರ ಜಿಲ್ಲೆಯ ಸಾಧಕರಿಗೆ ಅಂದಿನ ದಿನ
ಸನ್ಮಾನಿಸಲು ವ್ಯವಸ್ಥೆ ಮಾಡಬೇಕು ಎಂದು ಅವರು ಸೂಚನೆ ನೀಡಿದರು.
ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಸಂಬಂಧಿಸಿದಂತೆ ಫಲಕಗಳ ಪ್ರದರ್ಶನ ಮತ್ತು ಬ್ಯಾನರ್ ವ್ಯವಸ್ಥೆ ಮಾಡಲು ಮತ್ತು ಯೋಗ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಪ್ರಚಾರ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ .ನಾಗರಾಜ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಗವಿಸಿದ್ಧ ಹೊಸಮನಿ ಅವರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಆರೋಗ್ಯ ಇಲಾಖೆಯಿಂದ ಅಂಬುಲೆನ್ಸ್ ಮತ್ತು ವೈದ್ಯಕೀಯ ವ್ಯವಸ್ಥೆ, ಮಹಾನಗರ ಪಾಲಿಕೆಯಿಂದ
ಕುಡಿಯುವ ನೀರು ಮತ್ತು ಶುಚಿತ್ವ ಕಾರ್ಯ, ಪೊಲೀಸ್ ಇಲಾಖೆಯಿಂದ ಕಾನೂನು ಸುವ್ಯವಸ್ಥೆ, ಹೆಸ್ಕಾಂನಿಂದ ವಿದ್ಯುತ್ ಪೂರೈಕೆಯು ಅಚ್ಚುಕಟ್ಟಾಗಿ ನಡೆಯುವಂತಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಮಾತನಾಡಿ, ಆರೋಗ್ಯಯುತ ಬದುಕಿಗೆ ಯೋಗ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಜನ ಸಾಮಾನ್ಯರಿಗೆ ಯೋಗದ ಬಗ್ಗೆ ಅರಿವು ಮೂಡುವಂತಾಗಬೇಕು. ಈ ಹಿನ್ನೆಲೆಯಲ್ಲಿ ಜೂ. 21ರಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ವ್ಯವಸ್ಥೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಜಿಲ್ಲೆಯ ಮೂರು ಆಯುರ್ವೇದ ಕಾಲೇಜು ಮತ್ತು ಒಂದು ಯುನಾನಿ ಕಾಲೇಜಿನಿಂದ 400 ವಿದ್ಯಾರ್ಥಿಗಳನ್ನು ಮತ್ತು ಎನ್ ಸಿ ಸಿ ಯಿಂದ 200, ಎನ್ ಎಸ್ ಎಸ್ ನಿಂದ 50 ವಿದ್ಯಾರ್ಥಿಗಳನ್ನು ಅಂತಾರಾಷ್ಟ್ರೀಉ ಯೋಗ ದಿನದಂದು ಸೇರಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಗಣ್ಯರಿಂದ ಸಲಹೆ
ಯೋಗ ದಿನದ ಹಿನ್ನೆಲೆಯಲ್ಲಿ ನಗರದಲ್ಲಿ 15 ದಿನಗಳ ಕಾಲ ಯೋಗ ಶಿಬಿರ ನಡೆಸಬೇಕು. ಶಿಬಿರದಲ್ಲಿ ಪ್ರಮುಖ ಆಸನಗಳ ಕಲಿಕೆಗೆ ಒತ್ತು ಕೊಡಬೇಕು ಎಂದು ಸಭೆಯಲ್ಲಿ ರಾಜು ಮಗಿಮಠ ಹಾಗೂ ಇನ್ನೀತರರು ಸಲಹೆ ನೀಡಿದರು.
ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಮಹಾನಗರ ಪಾಲಿಕೆಯ ಆಯುಕ್ತ ವಿಜಯ ಮೆಕ್ಕಳಕಿ, ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಡಾ. ಅನುರಾಧ ಎಲ್. ಚಂಚಲಕರ, ಡಾ. ದಯಾನಂದ ಮಾಳಬಾಗಿ, ಡಾ. ಮಹಾಂತೇಶ ಹಿರೇಮಠ, ಡಾ .ವಗದುರಗಿ, ಡಾ. ಪಾಟೀಲ, ಅಕ್ಕ ಮಹಾದೇವಿ ವಿಶ್ವ ವಿದ್ಯಾಲಯದ ಡಾ. ಶ್ರೀಕಾಂತ ಚವ್ಹಾಣ, ಪತಂಜಲಿ ಯೋಗ ಸಂಸ್ಥೆಯಿಂದ ಸಂಜಯ ಸ್ವಾಮಿ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಿಂದ ಬಿ. ಕೆ. ಸಂಗೀತ, ಬಿ. ಕೆ. ಸರೋಜ, ಡಾ. ಮಹೇಶ ನಾವದಗಿ ಮುಂತಾದವರು ಉಪಸ್ಥಿತರಿದ್ದರು.