Green Warriors: ಮೊದಲ‌ ಬಾರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿ ಗಮನ ಸೆಳೆದ SPPA

ವಿಜಯಪುರ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಗ್ರೀನ್ ವಾರಿಯರ್ಸ್ ಅಂದರೆ ಅರಣ್ಯ ಇಲಾಖೆಯ ಎಲ್ಲ ಸಿಬ್ಬಂದಿಯ ಉಚಿತ ಆರೋಗ್ಯ ತಪಾಸಣೆ ಶಿಬಿರ ನಗರದ ಬಿ ಎಲ್ ಡಿ ಇ ವೈದ್ಯಕೀಯ ಆಸ್ಪತ್ರೆಯಲ್ಲಿ ನಡೆಯಿತು.

ಈ ಕಾರ್ಯಕ್ರಮಕ್ಕೆ ಎಸ್ ಪಿ ಪಿ ಎ(SPPA- Society for Protection of Plants and Animals) ಸಂಸ್ಥಾಪಕ ಅಧ್ಯಕ್ಷ ಧ್ರುವ ಪಾಟೀಲ ಚಾಲನೆ ನೀಡಿದರು.

ಗ್ರೀನ್ ವಾರಿಯರ್ಸ್ ಗಾಗಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ SPPA ಸಂಸ್ಥಾಪಕ‌ ಅಧ್ಯಕ್ಷ ಧ್ರುವ ಪಾಟೀಲ ಚಾಲನೆ ನೀಡಿದರು

ಬಳಿಕ ಮಾತನಾಡಿದ ಅವರು, ಪ್ರಕೃತಿ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಪಾತ್ರ ಮಹತ್ವದ್ದಾಗಿದೆ. ಅರಣ್ಯ ಮತ್ತು ವನ್ಯ ಜೀವಿಗಳ ರಕ್ಷಣೆಗೆ ಹಗಲಿರುಳು ದುಡಿಯುವ ಮೂಲಕ ಈ ಸಿಬ್ಬಂದಿ ಗ್ರೀನ್ ವಾರಿಯರ್ಸ್ ಆಗಿದ್ದಾರೆ. ವಿಜಯಪುರ ಜಿಲ್ಲೆಯ ಕೋಟಿ ವೃಕ್ಷ ಅಭಿಯಾನ ಯಶಸ್ವಿಯಾಗಿದೆ. ಈ ಅಭಿಯಾನ ಮುಂದುವರೆಸಲು ಅರಣ್ಯ ಇಲಾಖೆಯ ಸಿಬ್ಬಂದಿಯ ಆರೋಗ್ಯವೂ ಪ್ರಮುಖವಾಗಿದೆ. ಪರಿಸರದ ಸಂರಕ್ಷಣೆಗಾಗಿ ಸೇವೆ ಸಲ್ಲಿಸುವ ಈ ಸಿಬ್ಬಂದಿಯ ಸದೃಢ ಆರೋಗ್ಯಕ್ಕೆ ಪೂರಕವಾಗಿ‌ ವೃಕ್ಷ ಅಭಿಯಾನ ಪ್ರತಿಷ್ಠಾನ ಮತ್ತು ಎಸ್ ಪಿ ಪಿ ಎ ಜಂಟಿಯಾಗಿ ಬಿ ಎಲ್ ಡಿ‌ ಇ‌ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಿವೆ. ಈ ಮೂಲಕ ಪರಿಸರಕ್ಕೆ ಪೂರವಾಗಿ ಕೆಲಸ ಮಾಡುವವರಿಗೆ ಅಳಿಲು ಸೇವೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

 

 

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಇನ್ನು ಮುಂದೆ ಪ್ರತಿವರ್ಷ ಗ್ರೀನ್ ವಾರಿಯರ್ಸ್ ಗಳಿಗಾಗಿ ಉಚಿತ ಆರೋಗ್ಯವ ತಪಾಸಣೆ ನಡೆಸಲಾಗುವುದು. ಅಲ್ಲದೇ, ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.

ವೃಕ್ಷ ಅಭಿಯಾನ ಪ್ರತಿಷ್ಠಾನ, ಮತ್ತು ಎಸ್ ಪಿ ಪಿ ಎ ಜಂಟಿಯಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಬಿ ಎಲ್ ಡಿ‌ ಇ ಆಸ್ಪತ್ರೆಯ ಮೆಡಿಕಲ್ ಸುಪರಿಂಟೆಂಡೆಂಟ್ ಡಾ. ರಾಜೇಶ ಹೊನ್ನುಟಗಿ, ಜಿಲ್ಲಾ ವಲಯ ಅರಣ್ಯ ಡಾ. ಪ್ರಶಾಂತ ಪಿ ಕೆ ಎಂ, ವೃಕ್ಷ ಅಭಿಯಾನ ಪ್ರತಿಷ್ಠಾನ ಸಂಚಾಲಕ ಮುರುಗೇಶ ಪಟ್ಟಣಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

 

ಈ ಶಿಬಿರದಲ್ಲಿ ಸುಮಾರು 200 ಜನರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.

ಉಚಿತ ಆರೋಗ್ಯ ತಪಾಸಣೆ ಶಿಬಿರದ ಕುರಿತು ಸಂತಸ ವ್ಯಕ್ತಪಡಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಈರಣ್ಣ ರಾಚಪ್ಪ ಮುತ್ತಗಿ ಮತ್ತು ಮಹಾಂತೇಶ ಹಾದಿಮನಿ, ತಾವು ಕಳೆದ ಹತ್ತಾರು ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಆದರೆ, ಇಲಾಖೆಯ ಸಿಬ್ಬಂದಿಗೆ ಇದೇ ಮೊದಲ‌ ಬಾರಿಗೆ ಉಚಿತ ಆರೋಗ್ಯ ಶಿಬಿರ ನಡೆಸಿರುವುದು ನೆಮ್ಮದಿ ಮೂಡಿಸಿದೆ. ಖಾಸಗಿಯಾಗಿ ಆರೊಗ್ಯ ತಪಾಸಣೆ ನಡೆಸಿದರೆ ಸುಮಾರು ಹತ್ತಿಪ್ಪತ್ತು ಸಾವಿರ ರೂಪಾಯಿ ಖರ್ಚಾಗುತ್ತದೆ. ಆದರೆ, ಇಲ್ಲಿ ಬಿಪಿ, ಶುಗರ್, ಇಸಿಜಿ ಯನ್ನು ಉಚಿತವಾಗಿ ಮಾಡಲಾಗಿದೆ. ಇದರಿಂದ ನಮಗೆ ಹೊಸ ಹುಮ್ಮಸ್ಸು ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಶಿಬಿರದ ಕುರಿತು ಮಾತನಾಡಿದ ಆಸ್ಪತ್ರೆಯ ಮೆಡಿಕಲ್ ಸುಪರಿಂಟೆಂಡೆಂಟ್ ಡಾ. ರಾಜೇಶ ಹೊನ್ನುಟಗಿ, ಎಸ್ ಪಿ ಪಿ ಎ ಸಂಸ್ಥಾಪಕ ಅಧ್ಯಕ್ಷ ಧ್ರುವ ಪಾಟೀಲ ಅವರ ಪರಿಸರ ಮತ್ತು ಪರಿಸರ ಸಂರಕ್ಷಕರ ಕಾಳಜಿಯ ಅಂಗವಾಗಿ ನಡೆದ ಈ ಶಿಬಿರ ಯಶಸ್ವಿಯಾಗಿದೆ ಎಂದು ತಿಳಿಸಿದರು.

Leave a Reply

ಹೊಸ ಪೋಸ್ಟ್‌