ಬೆಂಗಳೂರು: ಕರ್ನಾಟಕ ವಿಧಾನ ಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ತಮ್ಮ ತಂತ್ರಗಾರಿಕೆಯ ಮೂಲಕ ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಯಶಸ್ವಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದಾರೆ.
ವಿಜೆಪಿಯ ಮೂರು ರಾಜ್ಯಸಭೆಗೆ ಕಳುಹಿಸುವಲ್ಲಿ ತಾವು ಪಟ್ಟ ಪ್ರಯತ್ನ ಅಮೂಲ್ಯವಾದದ್ದು ಕರ್ನಾಟಕ ರಾಜ್ಯದ ಈ ಕೊಡುಗೆ ಇನ್ನಷ್ಟು ಅತ್ಯುತ್ತಮವಾಗಿ ಕೆಲಸ ಮಾಡುವಂತಾಗಲಿ ಎಂದು ಪ್ರಧಾನಿ ಮೋದಿ ಅವರು ಬೊಮ್ಮಾಯಿ ಅವರನ್ನು ಪ್ರೋತ್ಸಾಹಿಸಿ, ಶ್ಲಾಘಿಸಿದರು.
ಜೆ. ಪಿ. ನಡ್ಡಾ ಶುಭಾಷಯ
ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಕೂಡ ಸಿಎಂ ಗೆ ದೂರವಾಣಿ ಕರೆ ಮಾಡಿ ಶುಭಾಶಯ ಕೋರಿದರು. ನೀವು ಇದಕ್ಕಾಗಿ ಪಟ್ಟ ಶ್ರಮ ಇಂದು ಸಾರ್ಥಕವಾಗಿದೆ. ಎಲ್ಲ ತಂತ್ರಗಳು ಫಲಿಸಿವೆ ಎಂದು ನಡ್ಡಾ ಅವರು ತಿಳಿಸಿದರು.
ಅಮಿತ ಶಾ ಶ್ಲಾಘನೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದೂರವಾಣಿ ಕರೆ ಮಾಡಿ ವಿಧಾನ ಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಮೂರು ಅಭ್ಯರ್ಥಿಗಳು ಜಯಗಳಿಸಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರು. ಅಲ್ಪ ಮತಗಳ ಕೊರತೆ ಇದ್ದರೂ ತಾಂತ್ರಿಕವಾಗಿ ಮೂರು ಜನ ಬಿಜೆಪಿ ಅಭ್ಯರ್ಥಿಗಳ ಗೆಲುವನ್ನು ಖಾತ್ರಿ ಪಡಿಸಿದ್ದಕ್ಕಾಗಿ ಶುಭಾಶಯ ಕೋರಿದರು. ರಾಜ್ಯಸಭೆಯಲ್ಲಿ ಬಿಜೆಪಿ ಸಂಖ್ಯಾಬಲ ಹೆಚ್ಚಳಕ್ಕೆ ಕರ್ನಾಟಕದ ಕೊಡುಗೆ ಇದಾಗಿದೆ ಎಂದು ಅಮಿತ ಶಾ ಮೆಚ್ಚುಗೆ ವ್ಯಕ್ತಪಡಿಸಿದರು.