Kumani Honour: 49ನೇ ವಯಸ್ಸಿನಲ್ಲಿ ಸರಕಾರಿ ನೌಕರಿ ಗಿಟ್ಟಿಸಿದ ಕುಮಾನಿ ಅವರನ್ನು ಭೇಟಿ ಮಾಡಿ ಸನ್ಮಾನಿಸಿದ ಅಪ್ಪು ಪಟ್ಟಣಶೆಟ್ಟಿ

ವಿಜಯಪುರ: ನಗರದ ಜಲನಗರ ನಿವಾಸಿ ಮತ್ತು ಗುತ್ತಿಗೆದಾರರಾಗಿದ್ದ ರಾಜಕುಮಾರ ಸಿದ್ರಾಮಪ್ಪ ಕುಮಾನಿ ಅವರು ಈಗ 49ನೇ ವಯಸ್ಸಿನಲ್ಲಿ ಸರಕಾರಿ ನೌಕರಿ ಗಿಟ್ಟಿಸಿದ್ದಾರೆ.  

2007ರಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಪರೀಕ್ಷೆ ಬರೆದಿದ್ದ ಅವರು ಪಾಸಾಗಿದ್ದರೂ, ಅಂದಿನ ಆಡಳಿತ ಮಾಡಿದ ತಪ್ಪಿನಿಂದಾಗಿ ನೌಕರಿಯಿಂದ ವಂಚಿತರಾಗಿದ್ದರು.  ಈ ಹಿನ್ನೆಲೆಯಲ್ಲಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದ ಅವರು ನೌಕರಿ ಪಡೆಯಲು ಹೋರಾಟ ನಡೆಸಿದ್ದರು.  2021ರಲ್ಲಿ ಹೈಕೋರ್ಟ್ ಈ ಪ್ರಕರಣ ಇತ್ಯರ್ಥಗೊಳಿಸಿ ಅಂದಿನ ಆಡಳಿತ ಮಾಡಿದ ತಪ್ಪನ್ನು ಸರಿಪಡಿಸುವ ನಿಟ್ಟಿನಲ್ಲಿ ರಾಜಕುಮಾರ ಸಿದ್ರಾಮಪ್ಪ ಕುಮಾನಿ ಸೇರಿದಂತೆ ಐದು ಜನರಿಗೆ ಸರಕಾರಿ ನೌಕರಿ ನೀಡುವಂತೆ ಆದೇಶ ನೀಡಿತ್ತು.

ರಾಜಕುಮಾರ ಕುಮಾನಿ ಅವರನ್ನು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಸನ್ಮಾನಿಸಿದರು

ಈ ಹಿನ್ನೆಲೆಯಲ್ಲಿ ಈಗ ರಾಜಕುಮಾರ ಸಿದ್ರಾಮಪ್ಪ ಕುಮಾನಿ ಲೋಕೋಪಯೋಗಿ ಇಲಾಖೆಯಲ್ಲಿ ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್(ಎಇಇ) ಬೆಂಗಳೂರಿನಲ್ಲಿ ನೌಕರಿಗೆ ಸೇರಿದ್ದಾರೆ.  ಶನಿವಾರ ಸೆಕೆಂಡ್ ಸ್ಯಾಟರ್ಡೆ ಸರಕಾರಿ ರಜೆ ಹಿನ್ನೆಲೆಯಲ್ಲಿ ಅವರು ತವರು ವಿಜಯಪುರಕ್ಕೆ ಆಗಮಿಸಿದ್ದರು.  ಈ ವಿಷಯ ತಿಳಿದ ಮಾಜಿ ಸಚಿವ ಮತ್ತು ಕುಮಾನಿ ಕುಟುಂಬದ ಹಿತೈಷಿಯೂ ಆಗಿರುವ ಅಪ್ಪು ಪಟ್ಟಣಶೆಟ್ಟಿ ಜಲನಗರಕ್ಕೆ ತೆರಳಿ ರಾಜಕುಮಾರ ಸಿದ್ರಾಮಪ್ಪ ಕುಮಾನಿ ಅವರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಪ್ಪು ಪಟ್ಟಣಶೆಟ್ಟಿ, ನೀವು ಪಟ್ಟ ಶ್ರಮ ಫಲ ನೀಡಿದೆ.  ಒಳ್ಳೆಯವರಿಗೆ ಒಳ್ಳೆಯದಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿ.  ತಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.  ಅಲ್ಲದೇ, ತಮ್ಮಿಂದ ಮತ್ತಷ್ಟು ಜನರಿಗೆ ಒಳ್ಳೆಯದಾಗಲಿ ಎಂದು ಶುಭ ಕೋರಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವಿನಾಯಕ, ರಾಜೇಂದ್ರ ವಾಲಿ, ಸಂಪತ ಕೋವಳ್ಳಿ ಮತ್ತು ಜಗದೀಶ ಮುಚ್ಚಂಡಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌