MLC Election: ಬಸವ ನಾಡಿನಲ್ಲಿ ಮಂದಗತಿಯಲ್ಲಿ ಶಾಂತಿಯುತವಾಗಿ ಸಾಗಿರುವ ಮತದಾನ- ಡಿಸಿ, ಎಸ್ಪಿ ಪರಿಶೀಲನೆ

ವಿಜಯಪುರ: ವಿಧಾನ‌ ಪರಿಷತ್ ವಾಯುವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಮತದಾನ ಆರಂಭವಾಗಿದೆ. ಮತದಾರರು ನಿಧಾನವಾಗಿ ಮತಗಟ್ಟೆಗಳಿಗೆ ಆಗಮಿಸುತ್ತಿದ್ದು ಮತದಾನ ಮಂದಗತಿಯಲ್ಲಿ ಸಾಗಿದೆ‌.

ವಿಜಯಪುರ ಜಿಲ್ಲೆಯಲ್ಲಿ ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಬೆಳಿಗ್ಗೆ 8 ರಿಂದ ಆರಂಭವಾಗಿರುವ ಮತದಾನ ಸಂಜೆ 05 ಗಂಟೆಯ ವರೆಗೆ ನಡೆಯಲಿದೆ. ಮತ ಎಣಿಕೆ ಕಾರ್ಯವು ಬೆಳಗಾವಿಯ ಕ್ಲಬ್‌ ರೋಡ್‌‌ ನಲ್ಲಿರುವ ಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ಜೂನ್ 15 ರಂದು ನಡೆಯಲಿದೆ.

ವಿಜಯಪುರದಲ್ಲಿ ಮತ ಹಾಕಲು ಸಾಲುಗಟ್ಟಿ ನಿಂತಿರುವ ಮತದಾರರು

ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮತ್ತು ಎಸ್ಪಿ ಎಚ್. ಡಿ. ಆನಂದಕುಮಾರ ನಾನಾ ಮತಗಟ್ಟೆಗಳಿಗೆ ತೆರಳಿ ಮತದಾನ ಪ್ರಕ್ರಿಯೆಯನ್ನು ಪರಿಶೀಲನೆ ನಡೆಸಿದ್ದಾರೆ.

ವಾಯುವ್ಯ ಶಿಕ್ಷಕರ ಮತಕ್ಷೇತ್ರಕ್ಕೆ ಅಂತಿಮ ಕಣದಲ್ಲಿ ಒಟ್ಟು 12 ಮತ್ತು ಕರ್ನಾಟಕ ವಾಯುವ್ಯ ಪದವೀಧರ ಮತಕ್ಷೇತ್ರದಲ್ಲಿ ಒಟ್ಟು 11 ಅಭ್ಯರ್ಥಿಗಳಿದ್ದಾರೆ. ವಾಯುವ್ಯ ಶಿಕ್ಷಕರ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ 4985 ಪುರುಷ ಮತ್ತು 1943 ಮಹಿಳೆಯರು ಸೇರಿ ಒಟ್ಟು 6928 ಮತದಾರರಿದ್ದಾರೆ. ವಾಯುವ್ಯ ಪದವೀಧರ ಮತಕ್ಷೇತ್ರದಲ್ಲಿ 15722 ಪುರುಷ ಮತ್ತು 5100 ಮಹಿಳೆಯರು ಹಾಗೂ ಇತರೆ ಓರ್ವ ಸೇರಿ ಒಟ್ಟು 20823 ಮತದಾರರಿದ್ದಾರೆ.

ವಾಯುವ್ಯ ಶಿಕ್ಷಕರ ಹಾಗೂ ವಾಯುವ್ಯ ಪದವಿಧರರ ಮತಕ್ಷೇತ್ರದಲ್ಲ 40 ಮೂಲ‌‌ ಮತಗಟ್ಟೆಗಳು ಮತ್ತು 7 ಹೆಚ್ಚುವರಿ ಮತಗಟ್ಟೆಗಳು ಸೇರಿ ಒಟ್ಟು 47 ಮತಗಟ್ಟೆಗಳಿವೆ. ಈ ಮತಗಟ್ಟೆಗಳಿಗೆ ಮೈಕ್ರೋ ಆಬ್ಸರವರ್ ನಿಯೋಜಿಸಲಾಗಿದೆ. ಪ್ರತಿ ಮತಗಟ್ಟೆಗಳಿಗೆ ಇಬ್ಬರು ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ. ತಾಲೂಕು ಮಟ್ಟದಲ್ಲಿ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ಕಾರ್ಯವನ್ನು ಆಯಾ ತಹಸೀಲ್ದಾರ ಕಚೇರಿಗಳಲ್ಲಿ ನಡೆಸಲಾಗುತ್ತದೆ. ವಿಜಯಪುರ ಜಿಲ್ಲೆಯಲ್ಲಿ 34 ರೂಟ್‌ಗಳಿದ್ದು, ಅವುಗಳಿಗೆ ವಾಹನ ವ್ಯವಸ್ಥೆ ಮಾಡಲಾಗಿದೆ. ಚುನಾವಣೆ ಮತದಾನ ಸಂದರ್ಭದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಜೂನ್ 13ರ ಮಧ್ಯೆ ರಾತ್ರಿ 12 ಗಂಟೆಯವರೆಗೆ ಶುಷ್ಕ ದಿನ ಎಂದು ಘೋಷಣೆ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಜೂನ್ 13ರಂದು ಮತದಾನ ನಡೆಯುವ ಹಿನ್ನಲೆಯಲ್ಲಿ ಜೂನ್ 11ರ ಸಂಜೆ 5 ಗಂಟೆಯಿಂದ ಅನ್ವಯವಾಗುವಂತೆ ಜೂನ್ 14ರವರೆಗೆ ಕಲಂ 144 ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ತಿಳಿಸಿದ್ದಾರೆ.

ಈ ಚುನಾವಣೆಯ ಎಲ್ಲ ಪ್ರಕ್ರಿಯೆಗಳನ್ನು ಯಾವುದೇ ನೂನ್ಯತೆಗಳಿಲ್ಲದೇ, ಸುಗಮವಾಗಿ ನಡೆಸಲು ಕಂದಾಯ ಇಲಾಖೆಗೆ ಸಹಕಾರ ನೀಡುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್. ಡಿ. ಆನಂದ ಕುಮಾರ ಅವರು ತಿಳಿಸಿದ್ದಾರೆ. ಚುನಾವಣೆಯಲ್ಲಿ ಬಂದೋಬಸ್ತಗಾಗಿ 47 ಮತಗಟ್ಟೆಗಳಲ್ಲಿ ಮೂರು ಜಮ ಡಿವೈಎಸ್ಪಿ, 11 ಜನ ಸಿಪಿಐ, 16 ಜನ ಪಿಎಸ್‌ಐ ಮತ್ತು 18 ಜನ ಎಎಸ್‌ಐ, 80 ಜನ ಸಿಎಚ್‌ಸಿ, 193 ಜನ ಸಿಪಿಸಿ ಸೇರಿದಂತೆ 12 ಡಿಎಆರ್ ತುಕಡಿಗಳು ಮತ್ತು 3 ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ ತುಕಡಿಗಳನ್ನು ನಿಯೋಜಿಸಲಾಗಿದೆ. ಅಲ್ಲದೇ
ಈ ಚುನಾವಣೆಯಲ್ಲಿ 29 ಸಾಮಾನ್ಯ ಮತಗಟ್ಟೆಗಳು, 15 ಸೂಕ್ಷ್ಮ ಮತಗಟ್ಟೆಗಳು ಮತ್ತು 3 ಅತೀ ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಸೂಕ್ಷ್ಮ 14 ಹಾಗೂ ಅತೀ ಸೂಕ್ಷ್ಮ 3 ಮತಗಟ್ಟೆಗಳು ಸೇರಿ ಒಟ್ಟು 17 ಮತಗಟ್ಟೆಗಳಲ್ಲಿ ವೆಬ್ ಕ್ಯಾಮರಾ ಅಳವಡಿಸಲಾಗದೆ. 5 ಸಾಮಾನ್ಯ ಮತ್ತು 1 ಸೂಕ್ಷ್ಮ ಸೇರಿ ಒಟ್ಟು 6 ಮತಗಟ್ಟೆಗಳಲ್ಲಿ ವಿಡಿಯೋ ಗ್ರಾಫರ್‌ಗಳನ್ನು ನಿಯೋಜಿಸಲಾಗಿದೆ. ಅತೀ ಸೂಕ್ಷ್ಮ ಮತಗಟ್ಟೆಗೆ ಒಬ್ಬ ಎಎಸ್‌ಐ, ತಲಾ ಇಬ್ಬರು ಹೆಡ್ ಕಾನಸ್ಟೇಬಲ್ ಮತ್ತು ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಮತಗಟ್ಟೆಗೆ ತಲಾ ಒಬ್ಬರು ಎಎಸ್‌ಐ ಮತ್ತು ಹೆಡ್ ಕಾನಸ್ಟೇಬಲ್ ಮತ್ತು ಇಬ್ಬರು ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿದೆ. ಸಾಮಾನ್ಯ ಮತಗಟ್ಟೆಗೆ ಒಬ್ಬರು ಹೆಡ್ ಕಾನಸ್ಟೇಬಲ್ ಮತ್ತು ಇಬ್ಬರು ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿದೆ ಎಂದು ಎಚ್. ಡಿ. ಆನಂದ ಕುಮಾರ ಮಾಹಿತಿ‌ ನೀಡಿದ್ದಾರೆ.
ಈ ಚುನಾವಣೆಯನ್ನು ಶಾಂತಿಯುತ ಹಾಗೂ ವ್ಯವಸ್ಥಿತವಾಗಿ ನಡೆಸಲು ವಿಜಯಪುರ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

Leave a Reply

ಹೊಸ ಪೋಸ್ಟ್‌