Voting Percentage: ಎಂ ಎಲ್ ಸಿ ಚುನಾವಣೆ: ಬಸವ ನಾಡಿನಲ್ಲಿ ಶಿಕ್ಷಕರ ಮತಕ್ಷೇತ್ರಕ್ಕೆ ಶೇ.80.15, ಪದವೀಧರ ಮತಕ್ಷೇತ್ರಕ್ಕೆ ಶೇ.62.36ರಷ್ಟು ಮತದಾನ

ವಿಜಯಪುರ: ವಿಧಾನ ಪರಿಷತ ವಾಯುವ್ಯ ಶಿಕ್ಷಕ ಮತ್ತು ಪದವೀಧರರ ಮತಕ್ಷೇತ್ರಗಳಿಗೆ ನಡೆದ ಚುನಾವಣೆ ವಿಜಯಪುರ ಜಿಲ್ಲಾದ್ಯಂತ ಶಾಂತಿಯುತವಾಗಿ ಮುಕ್ತಾಯವಾಗಿದೆ.  ಶಿಕ್ಷಕರ ಕ್ಷೇತ್ರಕ್ಕೆ ಶೇ.80.15ರಷ್ಟು ಮತ್ತು ಪದವೀಧರ ಕ್ಷೇತ್ರಕ್ಕೆ ಶೇ. 62.36 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ವಿಜಯಪುರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಿಳಿಸಿದ್ದಾರೆ.

ಬೆಳಿಗ್ಗೆ ನಿಧಾನವಾಗಿ ಆರಂಭವಾದ ಮತದಾನ ಸಂಜೆಯ ವೇಳೆಗೆ ಬಿರುಸು ಪಡೆಯಿತು.  ವಾಯುವ್ಯ ಶಿಕ್ಷಕರ ಮತಕ್ಷೇತ್ರಕ್ಕೆ ಬೆಳಗಿನ 8 ರಿಂದ 10 ಗಂಟೆವರೆಗೆ ಶೇ.11.36ರಷ್ಟು, 12 ಗಂಟೆವರೆಗೆ ಶೇ.34.81ರಷ್ಟು, ಮಧ್ಯಾಹ್ನ 2 ಗಂಟೆವರೆಗೆ ಶೇ.59.17ರಷ್ಟು ಹಾಗೂ ಸಂಜೆ 4 ಗಂಟೆ ಅವಧಿಗೆ ಶೇ.73.73ರಷ್ಟು ಮತ್ತು ಅಂತಿಮವಾಗಿ ಶೇ.80.15ರಷ್ಟು ಮತದಾನ ಪ್ರಮಾಣ ದಾಖಲಾಗಿದೆ.

ವಿಜಯಪುರದಲ್ಲಿ ತಮ್ಮ ಹಕ್ಕು ಚಲಾಯಿಸಲು ಪಾಳಿಯಲ್ಲಿ ನಿಂತಿರುವ ಮತದಾರರು

 

ವಾಯುವ್ಯ ಪದವೀಧರ ಮತಕ್ಷೇತ್ರಕ್ಕೆ ಬೆಳಗ್ಗೆ 8ರಿಂದ 10 ಗಂಟೆವರೆಗೆ ಶೇ.7.95ರಷ್ಟು, ಮಧ್ಯಾಹ್ನ 12 ಗಂಟೆವರೆಗೆ ಶೇ.24.08ರಷ್ಟು, ಮಧ್ಯಾಹ್ನ 2 ಗಂಟೆಯವರೆಗೆ ಶೇ.42.58ರಷ್ಟು ಹಾಗೂ ಸಂಜೆ 4 ಗಂಟೆಯ ಅವಧಿಗೆ ಶೇ.57.38 ರಷ್ಟು ಮತ್ತು ಅಂತಿಮವಾಗಿ ಶೇ.62.36ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ತಾಲೂಕುವಾರು ದಾಖಲಾದ ಮತದಾನದ ಮಾಹಿತಿ

ವಾಯುವ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ಒಟ್ಟು 4985 ಪುರುಷ ಮತದಾರರ ಪೈಕಿ 4126 ಮತದಾರರು ಹಾಗೂ ಒಟ್ಟು 1943 ಮಹಿಳಾ ಮತದಾರರ ಪೈಕಿ 1427 ಮತದಾರರು ಮತ್ತು ಒಟ್ಟು ಗಂಡು ಹೆಣ್ಣು ಸೇರಿ 6928 ಮತದಾರರ ಪೈಕಿ 5553 ಮತದಾರರು ತಮ್ಮ ಮತ ಹಕ್ಕನ್ನು ಚಲಾಯಿಸಿದ್ದಾರೆ.  ಅದೇ ರೀತಿ ವಾಯುವ್ಯ ಪದವೀಧರ ಮತಕ್ಷೇತ್ರದಲ್ಲಿ ಒಟ್ಟು 15722 ಪುರುಷ ಮತದಾರರ ಪೈಕಿ 10339 ಮತದಾರರು ಹಾಗೂ ಒಟ್ಟು 5100 ಮಹಿಳಾ ಮತದಾರರ ಪೈಕಿ 2647 ಮತದಾರರು, ಒಟ್ಟು ಗಂಡು ಹೆಣ್ಣು ಮತ್ತು ಇತರೆ 1 ಸೇರಿ 20823 ಮತದಾರರ ಪೈಕಿ ಒಟ್ಟು 12986 ಮತದಾರರು ತಮ್ಮ ಮತದಾನ ಹಕ್ಕನ್ನು ಚಲಾಯಿಸಿದ್ದಾರೆ.

ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಬೆಳಗಿನ 10 ಗಂಟೆವರೆಗೆ 12 ತಾಲೂಕುಗಳ ಪೈಕಿ ಬಾಗೇವಾಡಿ ತಾಲೂಕಿನಲ್ಲಿ ಅತೀ ಹೆಚ್ಚು 15.79ರಷ್ಟು, ಮಧ್ಯಾಹ್ನ 12 ಗಂಟೆಯವರೆಗೆ ಬಬಲೇಶ್ವರ ತಾಲೂಕಿನಲ್ಲಿ ಅತೀ ಹೆಚ್ಚು ಶೇ.42.21ರಷ್ಟು ಹಾಗೂ ಅಂತಿಮವಾಗಿ ಶೇ.95ರಷ್ಟು ಮತದಾನವಾಗಿದೆ. ಅದೇ ರೀತಿ ಪದವೀಧರ ಮತಕ್ಷೇತ್ರ ಚುನಾವಣೆಯಲ್ಲಿ ಬೆಳಗಿನ 10 ಗಂಟೆಯವರೆಗೆ 12 ತಾಲೂಕುಗಳ ಪೈಕಿ ತಾಳಿಕೋಟೆ ತಾಲೂಕಿನಲ್ಲಿ ಅತೀ ಹೆಚ್ಚು 12.24ರಷ್ಟು, ಮಧ್ಯಾಹ್ನ 12 ಗಂಟೆಯವರೆಗೆ ಚಡಚಣ ತಾಲೂಕಿನಲ್ಲಿ ಅತಿ ಹೆಚ್ಚು ಶೇ.28.73ರಷ್ಟು ಹಾಗು ಅಂತಿಮವಾಗಿ ತಾಳಿಕೋಟಿ ತಾಲೂಕಿನಲ್ಲಿ ಅತಿ ಹೆಚ್ಚು ಶೇ.70.24ರಷ್ಟು ಮತದಾನವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಕೊರೊನಾ ನಿಯಮ ಪಾಲನೆ: ಕೊರೊನಾ ಹಿನ್ನೆಲೆಯಲ್ಲಿ ಎಲ್ಲ ಮತಗಟ್ಟೆಗಳಲ್ಲೂ ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸಲಾಗಿತ್ತು. ಆರೋಗ್ಯ ತಪಾಸಣೆಗಾಗಿ ವೈದ್ಯಾಧಿಕಾರಿಗಳು, ಎಎನ್‌ಎಮ್ ಮತ್ತು ಆಶಾಗಳನ್ನು ನಿಯೋಜಿಸಲಾಗಿತ್ತು. ಕೋವಿಡ್ ಶಂಕಿತರು ಕಂಡು ಬಂದಲ್ಲಿ ಅವರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಲು ಪ್ರತಿ ಮತಗಟ್ಟೆಯಲ್ಲಿ ಐಸೋಲೇಶನ್ ರೂಮ್ ಮಾಡಲಾಗಿತ್ತು.

11 ತಂಡಗಳಿಂದ ಕಾರ್ಯ ನಿರ್ವಹಣೆ: ಈ ಚುನಾವಣೆಗೆ ಜಿಲ್ಲಾ ಎಂಸಿಸಿ ಸೆಲ್, ಎಂಸಿಎಂಸಿ ಕಮೀಟಿ, ವಿವಿಟಿ ಮತ್ತು ವಿಎಸ್‌ಟಿ ಸೇರಿದಂತೆ 11 ತಂಡಗಳನ್ನು ರಚಿಸಲಾಗಿತ್ತು. ವಿವಿಧ ಸಮಿತಿಗಳಲ್ಲಿ 220ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ಯಾವುದೇ ದೂರುಗಳಿಗೆ ಅವಕಾಶವಿಲ್ಲದೇ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಜೂನ್ 15ಕ್ಕೆ ಬೆಳಗಾವಿಯಲ್ಲಿ ಮತ ಎಣಿಕೆ

ಜಿಲ್ಲಾ ಮಟ್ಟದಲ್ಲಿ ಡಿ.ಮಸ್ಟರಿಂಗ್ ಆದ ಸಾಮಗ್ರಿಗಳನ್ನು ಸ್ವೀಕರಿಸಿ ಬೆಳಗಾವಿಯ ಜ್ಯೋತಿ ಕಾಲೇಜಿನಲ್ಲಿನ ಭದ್ರತಾ ಕೊಠಡಿಯಲ್ಲಿ ಇರಿಸಲಾಗುತ್ತದೆ.  ಮತ ಎಣಿಕೆ ಕಾರ್ಯವು ಜೂನ್ 15ರಂದು ಬೆಳಗಾವಿಯ ಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ಡಾ. ವಿಜಯ ಮಹಾಂತೇಶ ಬಿ. ದಾನಮ್ಮನವರ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌