ಬೆಳಗಾವಿ: ವಿಧಾನ ಪರಿಷತ್ ವಾಯುವ್ಯ ಶಿಕ್ಷಕರ ಮತಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಜಯಿಸಿ ಗೆಲುವಿನ ನಗೆ ಬೀರಿದ್ದಾರೆ.
ಬೆಳಗಾವಿಯ ಜ್ಯೋತಿ ಪಿ ಯು ಕಾಲೇಜಿನಲ್ಲಿ ನಡೆದ ಮತ ಎಣಿಕೆಯಲ್ಲಿ ಆರಂಭದಿಂದಲೇ ಭರ್ಜರಿ ಮುನ್ನಡೆ ಸಾಧಿಸಿದ ಪ್ರಕಾಶ ಹುಕ್ಕೇರಿ ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಅವರನ್ನು ನಿರೀಕ್ಷೆಯಂತೆ ಸೋಲುಣಿಸಿದ್ದಾರೆ.
ಮೂರನೇ ಸುತ್ತಿನಲ್ಲಿ ಒಟ್ಟು 21402 ಮತಗಳಲ್ಲಿ ಮತಗಳ ಪೈಕಿ ಪ್ರಕಾಶ ಹುಕ್ಕೇರಿ 11460 ಮತಗಳನ್ನು ಪಡೆದರೆ ಅರುಣ ಶಹಾಪುರ 6406 ಮತ ಪಡೆದರು. ಈ ಮೂಲಕ ಪ್ರಕಾಶ ಹುಕ್ಕೇರಿ ಗೆಲುವಿಗೆ ನಿಗದಿ ಪಡಿಸಲಾಗಿದ್ದ ಪ್ರಥಮ ಪ್ರಾಶಸ್ತ್ಯದ ಮತಗಳಿಸಿ ವಿಜಯಿಯಾಗಿದ್ದಾರೆ. ಅರುಣ ಶಹಾಪುರ ಅವರಿಗಿಂತ 5055 ಹೆಚ್ಚಿಗೆ ಮತಗಳನ್ನು ಗಳಿಸುವ ಮೂಲಕ ಪ್ರಕಾಶ ಹುಕ್ಕೇರಿ ಭರ್ಜರಿ ಅಂತರದಿಂದ ಗೆದ್ದು ಬೀಗಿದರು. ಚಲಾವಣೆಯಾದ ಮತಗಳಲ್ಲಿ 1270 ಮತಗಳು ತಿರಸ್ಜೃತವಾಗಿದ್ದು ಗಮನಾರ್ಹವಾಗಿದೆ.
ಪ್ರಕಾಶ ಹುಕ್ಕೇರಿ ಗೆಲುವು ಸಾಧಿಸುತ್ತಿದ್ದಂತೆ ಮತ ಎಣಿಕೆ ಕೇಂದ್ರದ ಹೊರಗಡೆ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.