Folklore Vijugouda: ಜನಪದ ಕಲಾವಿದರು ನಾಡಿನ ಸಾಂಸ್ಕೃತಿಕ ಆಸ್ತಿ- ವಿಜುಗೌಡ ಪಾಟೀಲ

ವಿಜಯಪುರ: ಜನಪದ ಕಲೆ ಮತ್ತು ಸಾಹಿತ್ಯ ನಮ್ಮ ದೇಶದ ಬಹುದೊಡ್ಡ ಆಸ್ತಿ.  ಜನಪದ ಕಲಾವಿದರು ಕಲಾ ಪ್ರದರ್ಶನದ ಮೂಲಕ ನಮ್ಮ ಪ್ರಾಚೀನ ಸಂಸ್ಕೃತಿಯನ್ನು ಹೊಸಜಗತ್ತಿಗೆ ಪರಿಚಯಿಸುತ್ತ ಆದರ್ಶರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಸಾವಯವ ಬೀಜ ಮತ್ತು ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಹೇಳಿದ್ದಾರೆ. 

ಕನ್ನಡ ಜಾನಪದ ಪರಿಷತ್ ಜಿಲ್ಲಾ, ತಾಲೂಕು, ವಲಯ ಘಟಕ ಆಶ್ರಯದಲ್ಲಿ ತಿಕೋಟಾ ತಾಲೂಕಿನ ಕನಮಡಿ ಅರಣ್ಯ ಸಿದ್ದೇಶ್ವರ ದೇವಸ್ಥಾನದಲ್ಲಿ ಜಾತ್ರೆಯ ಅಂಗವಾಗಿ ಆಯೋಜಿಸಿದ್ದ ಜಾನಪದ ಜಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ಕಲಾವಿದರಿಗೆ ಸರಕಾರದಿಂದ ಸಿಗುವ ಸೌಲಭ್ಯ ದೊರಕಿಸಲು ನಾನು ಬದ್ಧನಾಗಿದ್ದೇನೆ ಎಂದು ಅವರು ಹೇಳಿದರು.

ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ(ಪಡಗಾನೂರ) ಮಾತನಾಡಿ, ಇಂದು ನಾವು ವೈಜ್ಞಾನಿಕವಾಗಿ ಉತ್ತುಂಗದಲ್ಲಿದ್ದೇವೆ,  ಆದರೆ ಮಾನಸಿಕ ಮತ್ತು ದೈಹಿಕ ಸಂಪತ್ತು ಕಳೆದುಕೊಂಡಿದ್ದೇವೆ.  ಜಾನಪದ ಸಂಸ್ಕೃತಿಯಲ್ಲಿ ಬದುಕು ಕಟ್ಟಿಕೊಂಡರೆ ಮೌಲ್ಯಯುತವಾದ ಜೀವನ ನಡೆಸುತ್ತೇವೆ. ಜಾನಪದ ಕಲಾವಿದರು ತಂತ್ರಜ್ಞಾನದಲ್ಲಿ ತಮ್ಮ ಮಾಹಿತಿ ದಾಖಲಿಸಬೇಕು ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಪ್ರವಚನಕಾರ ಬಾಬುರಾವ ಮಹಾರಾಜ(ಹೊನವಾಡ) ಮಾತನಾಡಿ, ಅಧ್ಯಾತ್ಮ ಮತ್ತು ಜಾನಪದ ಮನುಷ್ಯನಿಗೆ ಎರಡು ಕಣ್ಣುಗಳಿದ್ದಂತೆ,  ಇವುಗಳ ಅಣತಿಯಂತೆ ಜೀವನ ನಡೆಸಿದರೆ ಬದುಕು ಆದರ್ಶಮಯವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿಕ್ಷಕಿ ಸುಖದೇವಿ ಅಲಬಾಳಮಠ, ಜಾತ್ರಾ ಕಮಿಟಿ ಅಧ್ಯಕ್ಷ ರಾಜಶೇಖರ ಶೀಳಿನ,ಆನಂದಪ್ಪ ಬಸರಗಿ, ಏಕನಾಥ ಬಿರಾದಾರ ಉಪಸ್ಥಿತರಿದ್ದರು.

ಕನ್ನಡ ಜಾನಪದ ಪರಿಷತ್ ತಿಕೋಟ ತಾಲೂಕಾಧ್ಯಕ್ಷ ನಿಂಗಣ್ಣ ಕಲಘಟಗಿ ಪ್ರಾಸ್ಥಾವಿಕವಾಗಿ ಮಾತನಾಡಿದರು.  ಕನ್ನಡ ಜಾನಪದ ಪರಿಷತ್ ಕನಮಡಿ ವಲಯ ಅಧ್ಯಕ್ಷ ಶರಣು ಅವಟಿ ಸ್ವಾಗತಿಸಿದರು.  ಶಿಕ್ಷಕ ಈರಪ್ಪ ನಾಟಿಕಾರ ನಿರೂಪಿಸಿದರು. ನ್ಯಾಯವಾದಿ ಕೆಂಚಪ್ಪ ಪೂಜಾರಿ ವಂದಿಸಿದರು.

ಕಾರ್ಯಕ್ರಮದಲ್ಲಿ ಹೊನವಾಡದ ಹೆಜ್ಜೆಮೇಳ, ಬಿಜ್ಜರಗಿಯ ಚೌಡಕಿಮೇಳ, ಕೋಟ್ಯಾಳದ ಕಹಳೆ, ಸಿದ್ನಾತದ ಡೊಳ್ಳು ಕುಣಿತ  ಕನಮಡಿಯ ಭಜನೆ, ಡೊಳ್ಳಿನಪದ, ಹಂತಿಪದ, ಸೋಬಾನಪದ ಸೇರಿದಂತೆ ಹದಿನೈದು ಕಲಾತಂಡಗಳು ಪ್ರದರ್ಶನ ನೀಡಿದವು.

Leave a Reply

ಹೊಸ ಪೋಸ್ಟ್‌