ವಿಜಯಪುರ: ಪ್ರಕೃತಿಗೆ ಆಧಾರಿತವಾಗಿ ನಾವು ನಮ್ಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕೇ ಹೊರತು ಅದರ ವಿರುದ್ಧವಾಗಿ ಅಲ್ಲ ಎಂದು ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದರು.
ವಿಜಯಪುರ ಹೊರ ವಲಯದ ತೊರವಿ ಬಳಿ ಇರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಹಾಗೂ ಕ್ರೀಡಾ ವಿಜ್ಞಾನ ವಿಭಾಗ ಮತ್ತು ನವದೆಹಲಿಯ ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿ (ಐಸಿಎಸ್‌ಎಸ್‌ಆರ್) ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸ್ವಸ್ಥ ಭಾರತ: ಸಮಸ್ಯೆಗಳು ಮತ್ತು ಅವಕಾಶಗಳು ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಪರಿಸರವನ್ನು ಕಾಪಾಡುವಲ್ಲಿ ಜನತೆಯ ಪಾತ್ರ ಬಹು ಮುಖ್ಯವಾಗಿದೆ. ಆಧುನೀಕತೆಯ ನೆಪದಲ್ಲಿ ಪ್ರಕೃತಿಯನ್ನು ನಾಶ ಮಾಡಿದರೆ ಮುಂದೆ ಮನುಕುಲಕ್ಕೆ ತೊಂದರೆ ಉಂಟಾಗುತ್ತದೆ ಎಂದು ಅವರು ಹೇಳಿದರು.
ಮುಂಬೈ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಪ್ರೊ. ವಾಸಂತಿ ಕಧಿರವನ್ ಮಾತನಾಡಿ, ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಕ್ರೀಡೆಯ ಪಾತ್ರ ಬಹುಮುಖ್ಯ ಎಂದು ಹೇಳಿದರು.
ಕ್ರೀಡೆಯ ಪ್ರಾಮುಖ್ಯತೆ ಹಾಗೂ ಸ್ವಸ್ಥ ಭಾರತಕ್ಕೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹೇಗೆ ಸಹಕಾರಿಯಾಗಿದೆ ಎಂಬುದರ ಕುರಿತು ಅವರು ವಿವರವಾಗಿ ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಹಿಳಾ ವಿವಿಯ ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲ, ಆರೋಗ್ಯವೇ ಭಾಗ್ಯ ಎಂಬ ಮಾತನ್ನು ಎಲ್ಲರೂ ಸರಿಯಾಗಿ ಪಾಲಿಸಿದಾಗ ಮಾತ್ರ ಸ್ವಸ್ಥ ಭಾರತ ನಿರ್ಮಾಣ ಮಾಡಲು ಸಾಧ್ಯ. ಇದೇ ಸ್ವಸ್ಥ ಭಾರತದ ಮೆಟ್ಟಿಲಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಯ ನಾನಾ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿಚಾರ ಸಂಕೀರಣದಲ್ಲಿ ಮಂಡಿಸಲಿರುವ ಎಲ್ಲ ಲೇಖನಗಳ ಸಂಗ್ರಹದ ಜರ್ನಲ್ ನ್ನು ಬಿಡುಗಡೆ ಮಾಡಲಾಯಿತು.
ಮಹಿಳಾ ವಿವಿಯ ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ಹಾಗೂ ಕ್ರೀಡಾ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ರಾಜಕುಮಾರ ಮಾಲಿಪಾಟೀಲ ಸ್ವಾಗತಿಸಿದರು. ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ. ಕಿರಣ ಜಿ. ಎನ್. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಜ್ಯೋತಿ ಉಪಾಧ್ಯೆ ಹಾಗೂ ಸಹಾಯಕ ಪ್ರಾಧ್ಯಾಪಕಿ ಡಾ. ಅಶ್ವಿನಿ ಅತಿಥಿಗಳನ್ನು ಪರಿಚಯಿಸಿದರು. ದೈಹಿಕ ಶಿಕ್ಷಣ ಹಾಗೂ ಕ್ರೀಡಾ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಸಕ್ಪಾಲ ಹೂವಣ್ಣ ವಂದಿಸಿದರು. ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಭಾರತಿ ಗಾಣಿಗೇರ ಕಾರ್ಯಕ್ರಮ ನಿರೂಪಿಸಿದರು.