Election Analyses: ಅರುಣ ಶಹಾಪುರ ಸೋಲು- ಕಾರಣಗಳು ಹತ್ತಾರು- ಎಲ್ಲೆಡೆ ನಡೆದಿದೆ ಬಿಸಿಬಿಸಿ ಚರ್ಚೆ

ವಿಜಯಪುರ: ವಿಧಾನ ಪರಿಷತ ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಸೋಲು ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. 22 ಜನ ಶಾಸಕರು, ಆರು ಜನ ಸಂಸದರು, ನಾಲ್ಕುಜನ ಸಚಿವರು, ಕೇಂದ್ರ ಮತ್ತು ರಾಜ್ಯದಲ್ಲಿ ಬೆಜೆಪಿ ಅಧಿಕಾರದಲ್ಲಿದ್ದರೂ ಅರುಣೋದಯವಾಗದೇ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶಮಾನವಾಗಿರುವುದು ಈಗ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ ಎಂದು ಸ್ವತಃ ಬಿಜೆಪಿ ವಲಯದಲ್ಲಿಯೇ ಚರ್ಚೆಗೆ ಕಾರಣವಾಗಿದೆ.

ಅರುಣ ಶಹಾಪುರ ಸೋಲಿಗೆ ಕಾರಣಗಳನ್ನು ರಾಜಕೀಯ ತಜ್ಞರು ಮತ್ತು ವಿಶ್ಲೇಷಕರು ಅವಲೋಕನ ಮಾಡತೊಡಗಿದ್ದಾರೆ. ಬಸವ ನಾಡಿಗೆ ಲಭ್ಯವಾಗಿರುವ ಮಾಹಿತಿಯಂತೆ ಈ ಕಾರಣಗಳು ಪ್ರಮುಖವಾಗಿವೆ.

1. ಬೆಳಗಾವಿ ಶಿಕ್ಷಕರ ಜಿಲ್ಲಾಭಿಮಾನ

ವಾಯುವ್ಯ ಶಿಕ್ಷಕರ ಮತಕ್ಷೇತ್ರ ಬೆಳಗಾವಿ, ಬಾಗಲಕೊಟೆ ಮತ್ತು ವಿಜಯಪುರ ಜಿಲ್ಲೆಯನ್ನು ಒಳಗೊಂಡಿದೆ. ಅತೀ ಹೆಚ್ಚು ಮತದಾರರನ್ನು ಹೊಂದಿರುವ ಜಿಲ್ಲೆ ಬೆಳಗಾವಿ. ಆದರೆ, ಕಳೆದ 18 ವರ್ಷಗಳಿಂದ ಅಂದರೆ ಮೂರು ಅವಧಿಯಲ್ಲಿ ಈ ಕ್ಷೇತ್ರವನ್ನು ವಿಜಯಪುರ ಜಿಲ್ಲೆಯವರು ಪ್ರತಿನಿಧಿಸುತ್ತಿದ್ದಾರೆ. ಎರಡು ಬಾರಿ ಅರುಣ ಶಹಾಪುರ ಮತ್ತು ಅದಕ್ಕೂ ಮೊದಲು ಜೆ. ಕೆ. ಪಾಟೀಲ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
ಈ ಬಾರಿ ನಮ್ಮ ಜಿಲ್ಲೆಯ ಪ್ರತಿನಿಧಿಯನ್ನು ಆಯ್ಕೆ ಮಾಡಬೇಕು ಎಂದು ಬೆಳಗಾವಿ ಜಿಲ್ಲೆಯ ಶಿಕ್ಷಕರಲ್ಲಿ ಮೂಡಿದ ಒಮ್ಮತ ಪ್ರಮುಖ ಕಾರಣಗಳಲ್ಲಿ ಒಂದು.

2. ಬಿಜೆಪಿಯಲ್ಲಿ ಹೊಂದಾಣಿಕೆ ಕೊರತೆ

ಈ ಚುನಾವಣೆಯಲ್ಲಿ ಬಿಜೆಪಿ ನಾಯಕರು ಮತ್ತು ಅಭ್ಯರ್ಥಿಯ ಮಧ್ಯೆ ಹೊಂದಾಣಿಕೆ ಕೊರತೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಬಹುತೇಕ ಜನ ನಾಯಕರು ಮೇಲ್ನೋಟಕ್ಕೆ ಪ್ರಚಾರ ಮಾಡಿದ್ದಾರೆ. ಆದರೆ, ಸಂಪೂರ್ಣವಾಗಿ ಕೆಲಸ ಮಾಡಿಲ್ಲ ಎಂಬ ಮಾತುಗಳೂ ಕೇಳಿ ಬಂದಿವೆ.

3. ಅಭ್ಯರ್ಥಿಯ ಅತೀಯಾದ ಆತ್ಮವಿಶ್ವಾಸ

ಎರಡು ಬಾರಿ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದ ಅರುಣ ಶಹಾಪುರ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದರು. ಇವರ ಅತೀಯಾದ ಆತ್ಮವಿಶ್ವಾಸ ಮತ್ತು ಹೆಚ್ಚಿನ ಸಂಖ್ಯೆಯಲ್ಲಿರುವ ಬಿಜೆಪಿ ಶಾಸಕರು, ಸಚಿವರು, ಸಂಸದರು ಮತ್ತು ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಹಾಗೂ ಜನಪ್ರತಿನಿಧಿಗಳ ವರ್ಚಸ್ಸು ತಮಗೆ ವರದಾನವಾಗಬಹುದು ಎಂಬ ನಿರೀಕ್ಷೆ ಕೂಡ ವೈಫಲ್ಯಕ್ಜೆ ಕಾರಣವಾಗಿದೆ. ಅಲ್ಲದೇ, ಅರುಣ ಶಹಾಪುರ ಈ ಹಿಂದೆ ಚುನಾವಣೆಯಲ್ಲಿ ತಮ್ಮ ಪರ ಕೆಲಸ ಮಾಡಿದ ಬಿಜೆಪಿಯ ಮುಖಂಡರು,ಕಾರ್ಯಕರ್ತರು ಮತ್ತು ಸ್ನೇಹಿತರನ್ನು ಕಡೆಗಣಿಸಿದ್ದರಿಂದ ಅವರೆಲ್ಲರೂ ಅಸಮಾಧಾನದಿಂದ ನಿರ್ಲಿಪ್ತರಾಗಿದ್ದರು ಎನ್ನಲಾಗಿದೆ.

4. ಶಿಕ್ಷಕರು, ಸಂಘಟನೆಗಳು, ಸಂಘ ಪರಿವಾರದವರ ಸಿಟ್ಟು

ಮೊದಲ ಬಾರಿಗೆ ಆಯ್ಕೆಯಾದಾಗ ಅರುಣ ಶಹಾಪುರ ಶಿಕ್ಷಕರು, ಶಿಕ್ಷಕರ ಸಂಘಟನೆಗಳು ಮತ್ತು ಸಂಘ ಪರಿವಾರದವರ ಸಲಹೆ ಹಾಗೂ ಸೂಚನೆಗಳನ್ನು ಪಾಲಿಸಿ ಮುನ್ನಡೆಯುತ್ತಿದ್ದರು. ಆದರೆ, ಕಳೆದ ಅವಧಿಯಲ್ಲಿ ಶಿಕ್ಷಕರು, ಶಿಕ್ಷಣ ಸಂಸ್ಥೆಗಳು ಮತ್ತು ಸಂಘದ ಕಾರ್ಯಕರ್ತರು ತಮ್ಮ ಬಳಿಗೆ ಬಂದು ಸಮಸ್ಯೆಗಳನ್ನು ಹೇಳಿಕೊಂಡಾಗ ಸೂಕ್ತವಾಗಿ ಸ್ಪಂದಿಸಲಿಲ್ಲ. ಅಲ್ಲದೇ, ಯಾವುದಾದರೊಂದು ನೆಪ ಅಥವಾ ಕಾರಣ ಹೇಳಿ ಸಾಗ ಹಾಕುತ್ತಿದ್ದರು. ಇದು ಕೂಡ ಆ ವಲಯದವರ ಅಸಮಾಧಾನ ಹೆಚ್ಚಾಗಲು ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

5. ಸ್ಟ್ರಾಟಜಿ ಮಾಡುವಲ್ಲಿ ವಿಫಲ

ಈ ಚುನಾವಣೆಯಲ್ಲಿ ಕಾಂಗ್ರೆಸ್ ವಿಧಾನ ಪರಿಷತ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ, ಶಾಸಕರಾದ ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ ಸೇರಿದಂತೆ ಎಲ್ಲ ಹಾಲಿ ಮತ್ತು ಶಾಸಕರು ಹಾಗೂ ಮುಖಂಡರ ನೇತೃತ್ವದಲ್ಲಿ ಸೂಕ್ತ ರಣತಂತ್ರ ಹೆಣೆದಿತ್ತು. ಅಲ್ಲದೇ, ಬೆಳಗಾವಿಯಲ್ಲಿ ಚನ್ನರಾಜ ರಟ್ಟಿಹೊಳಿ ಕಳೆದ ವರ್ಷ ನಡೆದ ವಿಧಾನ ಪರಿಷತ ಚುನಾವಣೆಯಲ್ಲಿ ಅನುಸರಿಸಿದ ಕಾರ್ಯತಂತ್ರವನ್ನು ಈ ಬಾರಿಯೂ ಅಳವಡಿಸಿಕೊಂಡಿತು. ಆದರೆ, ಈ ವಿಚಾರದಲ್ಲಿ ಬಿಜೆಪಿಯಿಂದ ಸೂಕ್ತ ಸ್ಟ್ರ್ಯಾಟಜಿ ಟೀಮ್ ರಚಿಸಲಿಲ್ಲ. ಅಲ್ಲದೇ, ಅರುಣ ಶಹಾಪುರ ತಮ್ಮ ಹಳೆಯ ಸ್ನೇಹಿತರ ಹಾಗೂ ಪಕ್ಷದ ಕೆಲವೇ ಪ್ರಮುಖರು ರೂಪಿಸುವ ಪ್ರಚಾರ ತಂತ್ರಕ್ಕೆ ಮೊರೆ ಹೋಗಿದ್ದು ಕಾರಣವಾಯಿತು. ಅಲ್ಲದೇ, ಮಹಿಳಾ ವಿವಿ ಸೇರಿದಂತೆ ಅತೀ ಹೆಚ್ಚು ಮತದಾರರನ್ನು ಹೊಂದಿರುವ ಕೆಲವು ಶಿಕ್ಷಣ ಸಂಸ್ಥೆಗಳಿಗೆ ಭೇಟಿಯನ್ನೂ ನೀಡಿರಲಿಲ್ಲ ಎನ್ನಲಾಗುತ್ತಿದೆ.

6. ಮತದಾರರು, ಕಾರ್ಯಕರ್ತರ ಜೊತೆ ಅಂತರ ಹೆಚ್ಚಳ

ಶಿಕ್ಷಣ ಸಂಸ್ಥೆಗಳು, ಶಾಲಾ, ಕಾಲೇಜುಗಳ ಪ್ರಮುಖರು ಕಾರ್ಯಕ್ರಮಗಳಿಗೆ ಕರೆದಾಗ ಬಹುತೇಕ ಬಾರಿ ಗೈರಾಗಿದ್ದರು. ಇತ್ತೀಚೆಗೆ ಹೊಸ ಶಿಕ್ಷಣ ನೀತಿ ನಿರೂಪಣೆ, ಪ್ರಚಾರ ಮತ್ತು ಜಾಗೃತಿಗೆ ಹೆಚ್ಚಿನ ಸಮಯ ನೀಡಿ ಶಿಕ್ಷಕರ ಸಮಸ್ಯೆಗಳ ಕಡೆಗೆ ಹೆಚ್ಚು ಗಮನ ಹರಿಸದಿರುವುದು ಈ ಅಂತರ ಹೆಚ್ಚಾಗಲು ಕಾರಣವಾಗಿದೆ ಎಂಬ ಮಾತೂಗಳು ಕೇಳಿ ಬಂದಿವೆ‌.

7. ಬದಲಾವಣೆ ಬಯಸಿದ ಶಿಕ್ಷಕರು

ಅರುಣ ಶಹಾಪುರ ಎರಡು ಬಾರಿ ಶಿಕ್ಷಕರ ಪ್ರತಿನಿಧಿಯಾಗಿ ಕೆಲಸ ಮಾಡಿದ್ದರು. ಈ ಬಾರಿ ಅವರಿಗೆ ಸಾಕು. ಹೊಸಬರಿಗೆ ಅವಕಾಶ ನೀಡೋಣ ಎಂದು ಶಿಕ್ಷಕರ ಮನಸ್ಸಿನಲ್ಲಿ ಮೂಡಿದ ಬದಲಾವಣೆಯೂ ಕಾರಣವಾಗಿದೆ ಎಂದು ಶಿಕ್ಷಕರೇ ಪರಸ್ಪರ ಮಾತನಾಡಿಕೊಳ್ಳುತ್ತಿದ್ದಾರೆ.

8. ಪ್ರತಿಸ್ಪರ್ಧಿಯ ಅವಹೇಳನ

ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತ್ತು ಹಿರಿಯ ರಾಜಕಾರಣಿ ಪ್ರಕಾಶ ಹುಕ್ಕೇರಿ ಅವರನ್ನು ಮುದಿ ಎತ್ತು ಎಂದು ಬಿಜೆಪಿ ನಾಯಕರು ಪ್ರಚಾರ ಸಭೆಗಳಲ್ಲಿ ಅವಹೇಳನ ಮಾಡಿದ್ದು ಕೂಡ ಶಿಕ್ಷಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.

9. ಸಂಪೂರ್ಣ ಫಲ ನೀಡದ ರಾಜಿ ಸಂಧಾನ

ಇದಷ್ಟೇ ಅಲ್ಲ, ಈ ಚುನಾವಣೆಯಲ್ಲಿ ಎಬಿವಿಪಿ ಮತ್ತು ಸಂಘ ಪರಿವಾರದವರೂ ಅರುಣ ಶಹಾಪುರ ಅವರ ಬಗ್ಗೆ ಅಸಮಾಧಾನ ಹೊಂದಿದ್ದರು. ಬೆಳಗಾವಿಯ ಕೆ ಎಲ್ ಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರಭಾಕರ ಕೋರೆ ಅವರನ್ನು ಸ್ವತಃ ಸಿಎಂ ಬಂದು ಮನವೊಲಿಸಿದರೂ ಕೊನೆಗಳಿಗೆಯ ಪ್ರಯತ್ನ ಅಷ್ಡೋಂದು ಮತಗಳಾಗಿ ಪರಿವರ್ತನೆಯಾಗಲಿಲ್ಲ‌ ಎನ್ನಲಾಗಿದೆ.

10. ಜೊತೆಯಲ್ಲಿದ್ದವರಿಗೆ ಮತ ಹಾಕಿಸಲು ಹೇಳಲಿಲ್ಲ

ಮೊದಲ ಬಾರಿಗೆ ಚುನಾವಣೆ ಎದುರಿಸಿದಾಗ ಅರುಣ ಶಹಾಪುರ, ಚಿಕ್ಕವರು, ದೊಡ್ಡವರು ಎನ್ನದೇ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತ ಹಾಕಿಸಲು ವಿನಂತಿ ಮಾಡಿದ್ದರು. ಆದರೆ, ಈ ಬಾರಿ ತಮ್ನ ಸುತ್ತಮುತ್ತಲಿರುವ ಮತ್ತು ಹಳೆಯ ಕಾರ್ಯಕರ್ತರು ಮತ್ತು ಗೆಳೆಯರಾರಿಗೂ ನಿಮ್ಮ‌ ಶಿಕ್ಷಕ ಸ್ನೇಹಿತರು ಮತ್ತು ಮತದಾರ ಬಂಧುಗಳಿಗೆ ನನಗೆ ಮತ ಹಾಕಲು ಹೇಳಿ ಎಂದು ಹಲವಾರು ಜನರಿಗೆ ಹೇಳಿಲ್ಲ. ಅವರೆಲ್ಲರೂ ನನ್ನವರು. ಅವರೆಲ್ಲರೂ ತಮಗೆ ಬಿಟ್ಟು ಇನ್ಯಾರ ಪರ ಮತ ಹಾಕಿಸುತ್ತಾರೆ ಎಂದು ಅತೀಯಾದ ಆತ್ಮವಿಶ್ಚಾದ ಅಥವಾ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಅವರು ತಟಸ್ಥರಾಗಿದ್ದಾರೆ ಎಂದು ಅರುಣ ಶಹಾಪುರ ಅವರ ಹಿತೈಷಿ ಮತ್ತು ಅಭಿಮಾನಿಗಳು ಹೇಳುತ್ತಿರುವುದೂ ಚರ್ಚೆಗೆ ಕಾರಣವಾಗಿದೆ‌.

11. ಸೆಕ್ಯೂಕರ್ ಇಮೇಜ್ ಪ್ರಯತ್ನ

ಬಿಜೆಪಿ ಎಂದರೆ ಅದು ಬಹುತೇಕ ಹಿಂದುಗಳ ಪರ ಬಹುತೇಕ ನಾಯಕರು ಎಂದು ಪೇಟೆಂಟ್ ತೆಗೆದುಕೊಳ್ಳುವುದು ವಾಡಿಕೆ. ಆದರೆ, ಈ ವಿಚಾರದಲ್ಲಿ ಅರುಣ ಶಹಾಪುರ ಸೆಕ್ಯೂಲರ್ ಇಮೇಜ್ ಉಳಿಸಿಕೊಳ್ಳಲು ಪ್ರಯತ್ನಿಸಿದ್ದು ಪಕ್ಷ ಮತ್ತು ಸಂಘಟನೆಯ ಹಲವರ ಕೆಂಗಣ್ಣಿಗೂ ಕಾರಣವಾಗಿದೆ ಎನ್ನಲಾಗಿದೆ. ಚುನಾವಣೆ ಸೋಲಿನ ಬಳಿಕ ಜಾತಿ ರಾಜಕಾರಣ ಕೆಲಸ ಮಾಡಿದೆಯಾ ಎಂಬ ಪತ್ರಕರ್ತರ ಪ್ರಶ್ನೆಗೆ ಅರುಣ ಶಹಾಪುರ ನಾನೊಬ್ಬ ಭಾರತೀಯ. ನಾನೊಬ್ಬ ಬಿಜೆಪಿಯವ ಎಂದು ಹೇಳಿದ್ದರು. ಇವರ ಜಾಗದಲ್ಲಿ ಬೇರೆ ಯಾವುದೇ ಬಿಜೆಪಿ ನಾಯಕರಿಗೆ ಈ ಪ್ರಶ್ನೆ ಎದುರಾಗಿದ್ದರೆ ಅವರು ಮೊದಲು ನಾನೊಬ್ಬ ಹಿಂದು ಎಂದು ಹೇಳುತ್ತಿದ್ದರು. ನಂತರ ನಾನು ಬಿಜೆಪಿಯವ ಎಂದು ಹೇಳುತ್ತಿದ್ದರು.  ಆದರೆ, ಇಂಥ ಸಣ್ಣ ಮತ್ತು ಸೂಕ್ಷ್ಮ ವಿಚಾರಗಳಲ್ಲಿ ಅರುಣ ಶಹಾಪುರ ನಿಲುವುಗಳು ಎಬಿವಿಪಿ ಮತ್ತು ಸಂಘ ಪರಿವಾರದವ ಅಸಮಾಧಾನಕ್ಕೂ ಕಾರಣವಾಗಿವೆ ಎಂದು ಹೆಸರು ಹೇಳಲು ಇಚ್ಛಿಸದ ಸಂಘ ಪರಿವಾರದ ಕಾರ್ಯಕರ್ತರೊಬ್ಬರು ತಮ್ಮ ಸ್ನೇಹಿತರ ಬಳಿ ಹೇಳಿಕೊಂಡಿರುವ ಮಾತು ಹೊಸ ಚರ್ಚೆಗೆ ನಾಂದಿ ಹಾಡಿದೆ.

12. ವಿರೋಧ ಗಮನಕ್ಕೆ ಬಂದಾಗ ರಾಜಿ ಆಗಬೇಕಿತ್ತು

ಎರಡು ಬಾರಿ ಗೆದ್ದಿದ್ದ ಅರುಣ ಶಹಾಪುರ ಮೂರನೇ ಬಾರಿ ಸ್ಪರ್ಧಿಸುವ ಮುನ್ನ ಮತದಾರರ ಮನಸ್ಸನ್ನು ಅರಿತುಕೊಳ್ಳಬೇಕಿತ್ತು. ಅದು ಗಮನಕ್ಕೆ ಬಂದಿದ್ದರೆ ಬೇರೆ ಟಿಕೇಟ್ ಆಕಾಂಕ್ಷಿಗಳಿಗೆ ಅವಕಾಶ ನೀಡಿ ಬೇರೊಂದು ಕ್ಷೇತ್ರ ಅಂದರೆ, ವಿಧಾನ ಸಭೆಗೆ ಸ್ಪರ್ಧಿಸಬಹುದಿತ್ತು. ಇಲ್ಲವೇ,ವಿಧಾನ ಪರಿಷತ್ತಿಗೆ ನಾಮಕರಣ ಮಾಡಲು ಪ್ರಯತ್ನಿಸಬಹುದಿತ್ತು ಎಂಬ‌ ಮಾತುಗಳು ಶಿಕ್ಷಕರ ವಲಯದಲ್ಲಿ ಕೇಳಿಬರುತ್ತಿವೆ‌.

13. ಅನುದಾನ ನೀಡಲಿಲ್ಲ

ವಿಧಾನ ಪರಿಷತ್ತಿನ ಸದಸ್ಯರೆಂದರೆ ಅವರಿಗೆ ಇರುವ ಅಧಿಕಾರ ಮತ್ತು ಸಿಗುವ ಅನುದಾನ ಬಕಾಸುರನ ಹೊಟ್ಟೆಗೆ ಅರೆಕಾಸಿನ‌ ಮಜ್ಕಿಗೆ ಇದ್ದಂತೆ. ಅದರಲ್ಲೂ ಶಿಕ್ಷಕರ ಮತ್ತು ಪದವೀಧರರ ಮತಕ್ಷೇತ್ರಗಳೆಂದರೆ ಮುಗೀತು. ಕ್ಷೇತ್ರವ್ಯಾಪ್ತಿ ಲೋಕಸಭೆ ಕ್ಷೇತ್ರಗಳಿಗಿಂತಲೂ ಮೂರ್ನಾಲ್ಲು ಪಟ್ಟು ಹೆಚ್ಚಾಗಿರುತ್ತದೆ. ಹೀಗಾಗಿ ಅರುಣ ಶಹಾಪುರ ತಮಗೆ ಸಿಗುವ ಅನುಸಾನದಲ್ಲಿ ಸಾಧ್ಯವಾದಷ್ಡು ಶಾಲೆ, ಕಾಲೇಜುಗಳು, ಸಂಘಟನೆಗಳಿಗೆ ಶಾಸಕರ ಅನುದಾನ ನೀಡಿದ್ದಾರೆ. ಆದರೆ, ಇರುವ ಅನುದಾನವನ್ನು ಹೆಚ್ಚಿನ ಸಂಖ್ಯೆಯ ಜನರಿಗೆ ಹಂಚಬೇಕಿರುವುದರಿಂದ ಅನೇಕರಿಗೆ ನಿರೀಕ್ಷೆಗಿಂತ ಕಡಿಮೆ ಅನುದಾನ ಸಿಕ್ಕಿತ್ತು. ಇದು ಕೂಡ ಅಸಮಾಧಾನ ಉಂಟಾಗಲು ಕಾರಣವಾಗಿದೆ ಎನ್ನಲಾಗುತ್ತಿದೆ.

ಒಂದಂತೂ ಸತ್ತ. ಈ ರೀತಿಯ ನಾನಾ ಚರ್ಚೆ, ವಿಶ್ಲೇಷಣೆಗಳು ಏನೇ ಇದ್ದರೂ, ಈ ಬಾರಿ ಅರುಣ ಶಹಾಪುರ ಅವರಿಗೆ ಸಕಾರಾತ್ಮಕ ಅಂಶಗಳಿಗಿಂತ ನಕಾರಾತ್ಮಕ ಅಂಶಗಳೇ ಹೆಚ್ಚು ಪರಿಣಾಮ ಬೀರಿದ ಪರಿಣಾಮ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರಿಗೆ ಹೆಚ್ಚಿಗೆ ಮತಗಳನ್ನು ಹಾಕಿ ಗೆಲ್ಲಿಸಲು ಕಾರಣವಾಗಿದೆ. ಅಲ್ಲದೇ, ಈ ಫಲಿತಾಂಶ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಟಾನಿಕ್ ನೀಡಿದ್ದಂತೂ ಸುಳ್ಳಲ್ಲ.

ಯಾರೇ ಗೆಲುವು ಸಾಧಿಸಿದಾಗ ನ್ಯೂನ್ಯತೆಗಳು ಮರೆಯಾಗಿರುತ್ತವೆ.  ಸೋತಾಗ ಸಂಬಂಧ ಇಲ್ಲದ ಕಾರಣಗಳೂ ಚರ್ಚೆಗೆ ಮುನ್ಬೆಲೆಗೆ ಬರುತ್ತವೆ ಎಂದು ಅನುಭವಸ್ಥರ ಮಾತುಗಳೂ ಸುಳ್ಳಲ್ಲ.

Leave a Reply

ಹೊಸ ಪೋಸ್ಟ್‌