ವಿಜಯಪುರ: ತಮ್ಮೂರಿನ ಜನರ ಉಪಕಾರಗಕಾಗಿ ಬಸವ ನಾಡಿನ ದಂಪತಿ ತಮ್ಮ 3.40 ಎಕರೆ ಜಮೀನನ್ನು ಪಂಚಾಯಿತಿಗೆ ದಾನವಾಗಿ ನೀಡುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ.
ವಿಜಯಪುರ ತಾಲೂಕಿನ ಐನಾಪುರ ಗ್ರಾಮದ ಕುಟುಂಬವೊಂದು ಸರಕಾರಕ್ಕೆ ದಾನ ರೂಪವಾಗಿ ನೀಡಿದ
ಜಮೀನೊಂದನ್ನು ಪಂಚಾಯಿತಿಗೆ ದಾನವಾಗಿ ನೀಡುವ ಕರಾರು ಒಪ್ಪಂದ ಪ್ರಕ್ರಿಯೆಯ ವಿಜಯಪುರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಹಾಗೂ ಗ್ರಾಮದ ಹಿರಿಯರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಜೂ. 10ರಂದು, ವಿಜಯಪುರ ತಾಲೂಕಿನ ಐನಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ಗೃಹ ಬಳಕೆಗೆ ಅವಶ್ಯವಿರುವ ನೀರಿನ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹೊಸ ಕೆರೆ ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಲಾಗಿತ್ತು. ಅದರಂತೆ ಎಲ್ಲಾ ಆಯಾಮಗಳಿಂದ ಅನುಕೂಲವಾಗುವಂತೆ ಗುರುತಿಸಿದ ನೀರು ತುಂಬಿಕೊಂಡಿರುವ ಸುಮಾರು 3.20 ಎಕರೆ ಜಮೀನು ಐನಾಪುರ ಗ್ರಾಮದಲ್ಲಿ ಗುರುತಿಸಲಾಗಿತ್ತು. ಈ ಜಮೀನು ಗ್ರಾನದ ಸೋಮನಾಥ ಶಿವಪ್ಪ ಬಗಲಿ ಎಂಬುವರಿಗೆ ಸೇರಿತ್ತು. ಪ್ರಾರಂಭದಲ್ಲಿ ಮಾಲೀಕರು ಈ ಜಮೀನನ್ನು ಸರಕಾರಕ್ಕೆ ಮಾರಾಟ ಮಾಡಲು ಒಪ್ಪಿದ್ದರು. ಬಳಿಕ ಅಧಿಕಾರಿಗಳು, ಗ್ರಾ. ಪಂ. ಅಧ್ಯಕ್ಷರು ಹಾಗೂ ಗ್ರಾಮದ ಹಿರಿಯರು ಮಾಲೀಕರ ಮನವೊಲಿಸಿದರು. ಕಲ್ಲು ಗಣಿಗಾರಿಕೆ ಮಾಡಿ ನೀರಿನಿಂದ ತುಂಬಿ ಕೆರೆಯಂತಾಗಿರುವ ಸುಮಾರು 3.20 ಎಕರೆ ಪ್ರದೇಶವನ್ನು ಐನಾಪೂರ ಗ್ರಾಮದ ಜನರ ನೀರಿನ ಸಮಸ್ಯೆಯನ್ನು ಪರಿಹರಿಸಲು ಪಂಚಾಯಿತಿಗೆ ದಾನವಾಗಿ ನೀಡಲು ಮಾಲೀಕರು ಒಪ್ಪಿಕೊಂಡಿದ್ದಾರೆ.
ಕೆರೆ ನಿರ್ಮಾಣದ ಸದುದ್ದೇಶ
ಈ ಕುರಿತು ಸಿಇಓ ರಾಹುಲ್ ಶಿಂಧೆ ಅವರು ಮಾತನಾಡಿ, ಸೋಮನಾಥ ಶಿವಪ್ಪ ಬಗಲಿ ಹಾಗೂ ಇವರ ಧರ್ಮ ಪತ್ನಿ ರೇಣುಕಾ ಸೋಮನಾಥ ಬಗಲಿ ಅವರ ಸಾಮಾಜಿಕ ಕಳಕಳಿ ನಿಜಕ್ಕೂ ಸ್ಮರಣೀಯವಾಗಿದೆ. ತಮ್ಮೂರು ಐನಾಪೂರ ಗ್ರಾಮದ ಜನತೆಯ ಹಿತದೃಷ್ಟಿಯಿಂದ ಹಾಗೂ ಕುಡಿಯುವ ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ಮತ್ತು ಕೆರೆ ನಿರ್ಮಾಣದ ಸದುದ್ದೇಶದಿಂದ ಈ ದಂಪತಿ ತಮ್ಮ ಸ್ವ- ಇಚ್ಛೆಯಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ದಾನದ ರೂಪದಲ್ಲಿ ಜಮೀನು ನೀಡಿದ್ದಾರೆ. ಅಲ್ಲದೇ, ಐನಾಪುರ ಗ್ರಾಮದ ಸರ್ವ ಜೀವಸಂಕುಲಕ್ಕೆ ಶಾಶ್ವತ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಪ್ರೇರಣೆಯಾಗಿದ್ದಾರೆ. ಇಂಥ ದಾನಿಗಳು ನಮ್ಮ ಜಿಲ್ಲೆಗೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ, ವಿಜಯಪುರ ತಾ. ಪಂ. ಕಾರ್ಯ ನಿರ್ವಾಹಣಾಧಿಕಾರಿ ರಾಜೇಶ ಎಚ್. ಡಿ., ಐನಾಪೂರ ಗ್ರಾ. ಪಂ. ಅಧ್ಯಕ್ಷ ಚಂದು ಜಾಧವ, ಐನಾಪೂರ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿಗ ಎಸ್. ಬಿ. ಶೀಳಿನ ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.